Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 31 - ಕನ್ನಡ ಸತ್ಯವೇದವು C.L. Bible (BSI)

1 “ಕನ್ಯೆಯನು (ಕಾಮದೃಷ್ಟಿಯಿಂದ) ನೋಡೆನೆಂದು ಮಾಡಿಕೊಂಡಿರುವೆ ನನ್ನ ಕಣ್ಣುಗಳೊಡನೆ ಒಪ್ಪಂದವನು.

2 ಎಂಥ ಪಾಲನ್ನು ವಿಧಿಸಬಲ್ಲನು ದೇವರು ಮೇಲಣಲೋಕದಿಂದ? ಎಂಥ ಬಾಧ್ಯತೆಯನು ನೀಡಬಲ್ಲನು ಸರ್ವಶಕ್ತನು ಮಹೋನ್ನತದಿಂದ?

3 ದುರ್ಜನರಿಗೆ ವಿಪತ್ತು ಬರಮಾಡುತ್ತಾನಲ್ಲವೆ? ಕೇಡಿಗರಿಗೆ ಉಪದ್ರವ ಕೊಡುತ್ತಾನಲ್ಲವೆ?

4 ಆತ ನನ್ನ ನಡತೆಯನ್ನೂ ನೋಡುತ್ತಾನೆ; ನನ್ನ ಹೆಜ್ಜೆಗಳನ್ನೂ ಎಣಿಸುತ್ತಾನಲ್ಲವೆ?

5 ನಾನು ಕಪಟ ಮಾರ್ಗದಲಿ ನಡೆದಿದ್ದರೆ ಮೋಸವನ್ನು ಹಿಂಬಾಲಿಸಿ ಓಡಿದ್ದರೆ,

6 ತೂಗಿನೋಡಲಿ ನನ್ನನು ನ್ಯಾಯದ ತಕ್ಕಡಿಯಲಿ ಹೀಗೆ ನನ್ನ ಸತ್ಯತೆಯನು ದೇವರು ತಿಳಿದುಕೊಳ್ಳಲಿ.

7 ದಾರಿತಪ್ಪಿ ನಾನು ನಡೆದಿದ್ದರೆ ನನ್ನ ಹೃದಯ, ಕಣ್ಗಳನ್ನು ಹಿಂಬಾಲಿಸಿದ್ದರೆ ಕಲ್ಮಷ ನನ್ನ ಕೈಗೆ ಅಂಟಿಕೊಂಡಿದ್ದರೆ,

8 ನಾನು ಬಿತ್ತಿದ್ದನ್ನು ಮತ್ತೊಬ್ಬ ಉಣ್ಣಲಿ ನನ್ನ ಬೆಳೆಯು ಬುಡಮೇಲಾಗಲಿ.

9 ನನ್ನ ಹೃದಯ ಪರಸ್ತ್ರೀಗೆ ಮಾರುಹೋಗಿದ್ದರೆ ನೆರೆಯವಳ ಬಾಗಿಲ ಬಳಿ ನಾನು ಹೊಂಚುಹಾಕಿದ್ದರೆ,

10 ನನ್ನ ಸತಿ ಮತ್ತೊಬ್ಬನಿಗೆ ಧಾನ್ಯಬೀಸುವ ದಾಸಿಯಾಗಲಿ ಅಂಥ ನನ್ನ ಸತಿಯೊಡನೆ ಇತರರು ಸಂಗಮಿಸಲಿ.

11 ಏಕೆಂದರೆ ಅಂಥ ನಡತೆ ಕಾಮುಕತನವಾಗುತ್ತಿತ್ತು ನ್ಯಾಯಾಧಿಪತಿಗಳ ದಂಡನೆಗೆ ತಕ್ಕ ಅಪರಾಧವಾಗುತ್ತಿತ್ತು.

12 ನರಕ ಕೂಪದವರೆಗೆ ಬೆಂಕಿಯಾಗುತ್ತಿತ್ತು ನನ್ನ ಆದಾಯವನ್ನೆಲ್ಲ ನಿರ್ಮೂಲಮಾಡುತ್ತಿತ್ತು.

13 ನನ್ನ ದಾಸದಾಸಿಯರು ನನ್ನ ಮೇಲೆ ತಪ್ಪುಹೊರಿಸಿದ್ದರೆ ನಾನು ಆ ತಪ್ಪನು ಅಸಡ್ಡೆ ಮಾಡಿದವನಾಗಿದ್ದರೆ,

14 ದೇವರು ನ್ಯಾಯಸ್ಥಾಪನೆಗೆ ನಿಂತಾಗ ನಾನೇನು ಮಾಡುತ್ತಿದ್ದೆ? ಆತ ವಿಚಾರಣೆಗೆ ಬಂದಾಗ ನಾನೇನು ಉತ್ತರಕೊಡುತ್ತಿದ್ದೆ?

15 ತಾಯಗರ್ಭದಲ್ಲಿ ನನ್ನ ನಿರ್ಮಿಸಿದಾತನೆ ಅವರನೂ ನಿರ್ಮಿಸಲಿಲ್ಲವೆ? ತಾಯಗರ್ಭದಲ್ಲಿ ನಮ್ಮನು ರೂಪಿಸಿದಾತ ಅದೇ ದೇವರಲ್ಲವೆ?

16 ಬಡವರ ಬಯಕೆಗಳನು ನಾನು ಭಂಗಪಡಿಸಿದೆನೋ? ವಿಧವೆಯ ಕಣ್ಣುಗಳನು ನಾನು ಮಂಕಾಗಿಸಿದೆನೋ?

17 ಅನಾಥರೊಂದಿಗೆ ಅನ್ನವನು ಹಂಚಿಕೊಳ್ಳದೆ ತುತ್ತನ್ನೆಲ್ಲಾ ನಾನೇ ಒಂಟಿಯಾಗಿ ಉಂಡೆನೆ?

18 ಇಲ್ಲ, ಬಾಲ್ಯದಲ್ಲಿ ಅನಾಥನನು ತಂದೆಯೋಪಾದಿಯಲಿ ಸಾಕಿದೆ ಹುಟ್ಟಿದಂದಿನಿಂದ ಅನಾಥನಿಗೆ ದಾರಿತೋರಿಸಿದೆ.

19 ಬಟ್ಟೆಯಿಲ್ಲದ ಬಡವನನು ನೋಡಿದಾಗಲೆಲ್ಲಾ ಹೊದಿಕೆಯಿಲ್ಲದೆ ನಡುಗುವುದನು ಕಂಡಾಗಲೆಲ್ಲಾ,

20 ಅವರನು ನಾನು ಬೆಚ್ಚಗಾಗಿಸದೆ ಹೋಗಿದ್ದರೆ ನನ್ನ ಕುರಿಉಣ್ಣೆಯಿಂದ, ಅವರು ನನ್ನನು ಹರಸದೇಹೋಗಿದ್ದರೆ ತಮ್ಮ ಅಂತರಾಳದಿಂದ,

21 ‘ನ್ಯಾಯಸ್ಥಾನದಲ್ಲಿ ನನಗೆ ಬೆಂಬಲವಿದೆ’ ಎಂದು ತಬ್ಬಲಿಯರ ಮೇಲೆ ನಾನು ಕೈಮಾಡಿದ್ದರೆ.

22 ನನ್ನ ಹೆಗಲಿನ ಕೀಲು ತಪ್ಪಿಹೋಗಲಿ ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ.

23 ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗಿದೆ ಭಯ ಆತನ ಪ್ರಭಾವದ ನಿಮಿತ್ತ ಇಂಥ ಕೃತ್ಯ ನನಗೆ ದುಸ್ಸಾಧ್ಯ.

24 ಬಂಗಾರದಲಿ ನಾನು ಭರವಸೆಯಿಟ್ಟಿದ್ದರೆ ಅಪರಂಜಿಯನೇ ನಾನು ನೆಚ್ಚಿಕೊಂಡಿದ್ದರೆ,

25 ನನ್ನ ಆಸ್ತಿ ಅಪಾರವೆಂದು ಕೊಚ್ಚಿಕೊಂಡಿದ್ದರೆ ನಾನೇ ಸಂಪಾದಿಸಿದ ಸಂಪತ್ತೆಂದು ಹೆಚ್ಚಳಪಟ್ಟಿದ್ದರೆ,

26 ಪ್ರಕಾಶಮಯ ಸೂರ್ಯನನು ನೋಡಿ ಕಾಂತಿಯುತ ಚಂದ್ರನ ಚಲನೆಯನು ದಿಟ್ಟಿಸಿ,

27 ನನ್ನ ಹೃದಯ ಅವಕ್ಕೆ ಮಾರುಹೋಗಿದ್ದರೆ ಬಾಯ್ಮೇಲೆ ಕೈಯಿಟ್ಟು ಅವನ್ನು ಆರಾಧಿಸಿದ್ದರೆ,

28 ಇದು ಕೂಡ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು ಮೇಲಣ ಲೋಕದ ದೇವರಿಗೆ ದ್ರೋಹವೆಸಗಿದಂತಾಗುತ್ತಿತ್ತು.

29 ನನ್ನ ವೈರಿಗೆ ಕೇಡುಬಂದಾಗ ನಾನು ಹಿಗ್ಗಿದೆನೋ? ಅವನ ವಿನಾಶಕ್ಕಾಗಿ ನಾನು ಸಂತೋಷಪಟ್ಟೆನೋ?

30 ಇಲ್ಲ, ಅವನು ಸಾಯಲಿ ಎಂದು ನನ್ನ ಬಾಯಿ ಶಪಿಸಿಲ್ಲ ಅಂಥ ಪಾಪಕಟ್ಟಿಕೊಳ್ಳಲು ನನ್ನ ಮನ ಒಪ್ಪಲಿಲ್ಲ.

31 ‘ಆತ ಬಡಿಸಿದ ಭೋಜನದಿಂದ ತೃಪ್ತರಾಗದವರು ಎಲ್ಲಾದರೂ ಉಂಟೆ?’ ಎಂದು ನನ್ನ ಗುಡಾರದ ಆಳುಗಳೇ ಹೇಳಿಕೊಳ್ಳುತ್ತಿದ್ದರಲ್ಲವೆ?

32 ಪರದೇಶೀಯರು ಹೊರಬೀದಿಯಲ್ಲಿ ತಂಗಬೇಕಾಗಿರಲಿಲ್ಲ ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿತ್ತಲ್ಲಾ.

33 ಜನಸಮುದಾಯಕ್ಕೆ ನಾನು ಹೆದರಿದ್ದರೆ ಕುಲೀನರ ತಿರಸ್ಕಾರಕ್ಕೆ ನಾನು ಬೆದರಿದ್ದರೆ,

34 ಬಾಗಿಲನ್ನೂ ದಾಟದೆ ಒಳಗೇ ನಾನು ಮೌನವಿದ್ದಿದ್ದರೆ ಜನಸಾಮಾನ್ಯರಂತೆ ಪಾಪವನು ಮನದಲೆ ಬಚ್ಚಿಟ್ಟಿದ್ದರೆ,

35 ನನ್ನ ಕರೆಗೆ ಕಿವಿಗೊಡುವನೊಬ್ಬನು ಈಗಿದ್ದರೆ ಲೇಸಾಗಿರುತ್ತಿತ್ತು (ಇಗೋ ನೋಡಿ, ನನ್ನ ಕೈರುಜು; ನನಗುತ್ತರಕೊಡಲಿ ಸರ್ವಶಕ್ತನು;) ಬರೆದುಕೊಡಲಿ ವಿರೋಧಿ ನನ್ನ ಆಪಾದನಾ ಪತ್ರವನು.

36 ಆ ಲಿಖಿತವನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಿದ್ದೆ ಅದನ್ನು ಪೇಟವಾಗಿ ತಲೆಗೆ ಸುತ್ತಿಕೊಳ್ಳುತ್ತಿದ್ದೆ.

37 ಅಧಿಪತಿಯಂತೆ ಆತನ ಸಾನಿಧ್ಯವನು ಸೇರುತ್ತಿದ್ದೆ ಒಂದೊಂದು ಹೆಜ್ಜೆಯ ಲೆಕ್ಕವನು ಒಪ್ಪಿಸುತ್ತಿದ್ದೆ.

38 ನನ್ನ ಭೂಮಿ ನನಗೆ ವಿರುದ್ಧ ಪ್ರತಿಭಟಿಸಿದ್ದರೆ ನೇಗಿಲ ಗೆರೆಗಳೆಲ್ಲ ನನ್ನನು ದೂರಿ ರೋದಿಸಿದ್ದರೆ,

39 ಕೂಲಿಕೊಡದೆ ಆ ಭೂಮಿಯ ಫಲವನು ನಾನು ಸವಿದಿದ್ದರೆ ಅದರ ದಣಿಗಳ ಪ್ರಾಣಹಾನಿಗೆ ನಾನು ಕಾರಣನಾಗಿದ್ದರೆ,

40 ಅದು ಬೆಳೆಯಲಿ ಮುಳ್ಳುಗಳನ್ನು ಗೋದಿಗೆ ಬದಲಾಗಿ ಹಣಜಿಹುಲ್ಲನು ಜವೆಗೋದಿಗೆ ಪ್ರತಿಯಾಗಿ.” ಇತಿ, ಯೋಬನ ಮಾತುಗಳು ಮುಗಿದವು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು