ಯೋಬ 28 - ಕನ್ನಡ ಸತ್ಯವೇದವು C.L. Bible (BSI)ಸುಜ್ಞಾನದ ಸ್ತುತಿ 1 “ಬೆಳ್ಳಿ ಸಿಕ್ಕುವ ಗಣಿಯುಂಟು ಚಿನ್ನದ ಅದುರು ದೊರಕುವ ಎಡೆಯುಂಟು. 2 ಕಬ್ಬಿಣವನ್ನು ತೆಗೆಯುತ್ತಾರೆ ಮಣ್ಣಿನಿಂದ ತಾಮ್ರವನ್ನು ಕಡೆಯುತ್ತಾರೆ ಕಲ್ಲನ್ನು ಕರಗಿಸುತಾ. 3 ಮಾನವರು ಹೊರದೂಡುತ್ತಾರೆ ಕತ್ತಲನು ಕತ್ತಲು-ಕಾರ್ಗತ್ತಲಲ್ಲೂ ಹುಡುಕುತ್ತಾರೆ ಲೋಹಗಳನು. ತೋಡುತ್ತಿರುತ್ತಾರೆ ಅವು ದೊರಕುವವರೆಗು. 4 ಗಣಿಯನ್ನು ತೋಡಿತೋಡಿ ಜನನಿವಾಸಿಗಳಿಗೆ ದೂರವಾಗಿ ಮೇಲ್ಗಡೆ ನಡೆದಾಡುವವರನ್ನು ಮರೆತುಹೋಗಿ ಅತ್ತಿತ್ತ ಅಲೆದಾಡುತ್ತಾರೆ ನರಲೋಕಕ್ಕೆ ಅನ್ಯರಾಗಿ. 5 ಭೂಮಿ ಕೊಡುತ್ತದೆ ಆಹಾರವನು ಬೆಂಕಿಬಿದ್ದಂತೆ ಪಾಳಾಗಿರುತ್ತದೆ ಅದರ ಅಡಿಭಾಗವು. 6 ನೀಲಿರತ್ನಗಳು ಸಿಗುತ್ತವೆ ಭುವಿಯ ಕಲ್ಲುಗಳಲಿ ಚಿನ್ನಚಿಗುರು ದೊರಕುತ್ತದೆ ಅದರ ಧೂಳಿನಲಿ. 7 ಆ ದಾರಿ ತಿಳಿಯದು ಯಾವ ಹದ್ದಿಗೂ ಅದು ಬಿದ್ದಿಲ್ಲ ಯಾವ ಗಿಡುಗದ ಕಣ್ಣಿಗೂ. 8 ಕಾಡುಮೃಗಗಳು ಅದನ್ನು ತುಳಿದಿಲ್ಲ ಸಿಂಹವು ಆ ಮಾರ್ಗದಲ್ಲಿ ಸುಳಿದಿಲ್ಲ. 9 ಮಾನವನು ಕೈಮಾಡುತ್ತಾನೆ ಬಂಡೆಗಳ ಮೇಲೆ ಬೆಟ್ಟಗಳನ್ನು ಕೆಡವಿಬಿಡುತ್ತಾನೆ ಬುಡಮಟ್ಟಕೆ. 10 ಸುರಂಗಗಳನ್ನು ಕೊರೆಯುತ್ತಾನೆ ಬಂಡೆಗಳಲಿ ಅಮೂಲ್ಯವಾದ ವಸ್ತುಗಳನ್ನು ಕಾಣುತ್ತಾನಲ್ಲಿ. 11 ಕಂಡುಹಿಡಿಯುತ್ತಾನೆ ನದಿಗಳ ಮೂಲಗಳನು ಬೆಳಕಿಗೆ ತರುತ್ತಾನೆ ಮರೆಯಾಗಿದ್ದ ವಸ್ತುಗಳನು. 12 ಆದರೆ ಸುಜ್ಞಾನ ಸಿಕ್ಕುವುದೆಲ್ಲಿ? ವಿವೇಕ ವಾಸಮಾಡುವುದೆಲ್ಲಿ? 13 ಸುಜ್ಞಾನದ ಕ್ರಯ ಯಾರಿಗೂ ಗೊತ್ತಿಲ್ಲ ಜೀವಿತರಲ್ಲಿ ಅದನ್ನು ಕಂಡವರಿಲ್ಲ. 14 ‘ಅದು ನನ್ನಲ್ಲಿಲ್ಲ’ ಎನ್ನುತ್ತದೆ ಪಾತಾಳ ‘ನನ್ನ ಬಳಿಯಲ್ಲಿಲ್ಲ’ ಎನ್ನುತ್ತದೆ ಸಮುದ್ರ. 15 ಚೊಕ್ಕ ಬಂಗಾರಕೊಟ್ಟು ಅದನು ಕೊಂಡುಕೊಳ್ಳಲಾಗದು ಅದರ ಬೆಲೆಗೆ ಬೆಳ್ಳಿಯನು ತೂಕಮಾಡಲಾಗದು. 16 ಓಫೀರ್ ದೇಶದ ಅಪರಂಜಿಯಿಂದಲೂ ಅಮೂಲ್ಯ ಗೋಮೇಧಿಕ-ಇಂದ್ರನೀಲದಿಂದಲೂ ಸುಜ್ಞಾನದ ಮೌಲ್ಯವನ್ನು ಗೊತ್ತುಮಾಡಲಾಗದು. 17 ಹೊನ್ನಾಗಲಿ, ಗಾಜಾಗಲಿ ಅದಕ್ಕೆ ಸಮವಾದೀತೆ? ಚಿನ್ನಾಭರಣಗಳನ್ನು ಅದಕ್ಕೆ ಅದಲುಬದಲು ಮಾಡಿಕೊಡಲಾದೀತೆ? 18 ಸುಜ್ಞಾನವಿರುವಲ್ಲಿ ಹವಳ-ಸ್ಫಟಿಕಗಳು ನೆನಪಿಗೆ ಬಾರವು ಮಾಣಿಕ್ಯಗಳ ಸಂಪಾದನೆಗಿಂತ ಅದರ ಸಂಪಾದನೆ ಶ್ರೇಷ್ಠವು. 19 ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಲ್ಲ ಶುದ್ಧ ಕನಕದೊಡನೆ ಅದನು ತೂಕಮಾಡಲಾಗುವುದಿಲ್ಲ. 20 ಇಂತಿರಲು ಸುಜ್ಞಾನ ಬರುವುದು ಎಲ್ಲಿಂದ? ವಿವೇಕ ದೊರಕುವುದು ಯಾವ ಸ್ಥಳದಿಂದ? 21 ಅದು ಎಲ್ಲ ಜೀವಿಗಳ ಕಣ್ಣಿಗೆ ಅಗೋಚರ ಆಕಾಶದ ಪಕ್ಷಿಗಳಿಗೂ ಅದು ಅಪರಿಚಿತ. 22 ‘ನಮ್ಮ ಕಿವಿಗೆ ಬಿದ್ದಿದೆ ಅದರ ಸುದ್ದಿ ಮಾತ್ರ’ ಎನ್ನುತ್ತವೆ ಅಧೋಲೋಕ ಹಾಗು ಮೃತ್ಯುಲೋಕ. 23 ಸುಜ್ಞಾನದ ಮಾರ್ಗ ಬಲ್ಲವನು ದೇವರೇ ಅದರ ಸ್ಥಳಗೊತ್ತಿದೆ ಆತನೊಬ್ಬನಿಗೆ. 24 ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಬಲ್ಲವನು ದೇವರೇ ಆಕಾಶದ ಕೆಳಗಿನ ಸಮಸ್ತವನು ನೋಡಬಲ್ಲವನು ಆತನೊಬ್ಬನೇ! 25 ಗಾಳಿಗೆ ತಕ್ಕ ವೇಗವನು ನೇಮಿಸಿದಾಗ ಜಲಕ್ಕೆ ತಕ್ಕ ಜಾಗವನು ನಿರ್ಣಯಿಸಿದಾಗ, 26 ಮಳೆಗೆ ಕಟ್ಟಳೆಯನು ವಿಧಿಸಿದಾಗ ಗುಡುಗು ಮಿಂಚಿಗೆ ಮಾರ್ಗವನ್ನೇರ್ಪಡಿಸಿದಾಗ, 27 ದೇವರು ಆ ಜ್ಞಾನವನು ಕಂಡು ಪರಿಗಣಿಸಿದನು ಅದನು ಪರಿಶೋಧಿಸಿ ಪ್ರತಿಷ್ಠಾಪಿಸಿದನು. 28 ಬಳಿಕ ಮಾನವನಿಗೆ ಇಂತೆಂದನು: ‘ಸರ್ವೇಶ್ವರನಲ್ಲಿ ಭಯಭಕ್ತಿ ಇಡುವುದೇ ಸುಜ್ಞಾನ ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ’.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India