Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 27 - ಕನ್ನಡ ಸತ್ಯವೇದವು C.L. Bible (BSI)

1 ಯೋಬನು ಮತ್ತೆ ಪ್ರಸ್ತಾಪವೆತ್ತಿ ಹೀಗೆಂದನು:

2 “ನನಗೆ ನ್ಯಾಯ ದೊರಕಿಸದ ಜೀವಂತ ದೇವರಾಣೆ, ನನ್ನ ಮನಸ್ಸನು ಕಹಿಯಾಗಿಸಿದ ಸರ್ವಶಕ್ತನಾಣೆ.

3 ನನ್ನಲ್ಲಿ ಜೀವ ಉಸಿರಾಡುತ್ತಿರುವವರೆಗೆ, ನನ್ನ ಮೂಗಲ್ಲಿ ದೇವರು ಊದಿದ ಶ್ವಾಸವಿರುವವರೆಗೆ,

4 ನನ್ನ ತುಟಿ ಅನ್ಯಾಯವನು ನುಡಿಯದು ನನ್ನ ನಾಲಿಗೆ ಎಷ್ಟುಮಾತ್ರಕ್ಕೂ ಮೋಸದ ಮಾತನಾಡದು.

5 ನೀವು ನ್ಯಾಯವಂತರೆಂದು ನಾನು ಒಪ್ಪಿದರೆ ನನಗಿರಲಿ ಧಿಕ್ಕಾರ! ನಾನು ಸತ್ಯತೆಯನ್ನು ಕಳೆದುಕೊಳ್ಳಲಾರೆ ಸಾಯುವ ತನಕ.

6 ನ್ಯಾಯನೀತಿಯನ್ನು ಬಿಡದೆ ಹಿಡಿವೆನು ಭದ್ರವಾಗಿ ನನ್ನ ಬಾಳಿನ ಯಾವ ದಿನದಂದೂ ನಿಂದಿಸಿದ್ದಿಲ್ಲ ನನ್ನ ಮನಸ್ಸಾಕ್ಷಿ.

7 ನನ್ನ ಹಗೆಗೆ ದುಷ್ಟತನ ಗತಿಯಾಗಲಿ ಅನೀತಿವಂತನ ಪಾಡು ನನ್ನ ವಿರೋಧಿಗೆ ಒದಗಲಿ.

8 ದೇವರೇ ದುಷ್ಟನ ಪ್ರಾಣ ತೆಗೆವ ಕಾಲಕ್ಕೆ ಅವನಿಗೆಲ್ಲಿಂದ ಬಂದೀತು ಭರವಸೆ!

9 ಅವನಿಗೆ ಕಷ್ಟದುಃಖ ಬಂದೊದಗಲು ದೇವರು ಆಲೈಸುವನೆ ಅವನ ಮೊರೆಯನು?

10 ಅವನು ಆನಂದಿಸುವನೆ ಸರ್ವಶಕ್ತನಲಿ? ಪ್ರಾರ್ಥನೆ ಮಾಡುವನೆ ಸರ್ವದಾ ಆತನಲಿ?

11 ದೇವರ ಹಸ್ತಬಲವನು ಕುರಿತು ಬೋಧಿಸುವೆನು ಸರ್ವಶಕ್ತನ ಯೋಜನೆಯನು ನಿಮಗೆ ಮರೆಮಾಚೆನು.

12 ಇಗೋ, ನೀವೆಲ್ಲರೂ ಇದನು ನೋಡಿದ್ದೀರಿ ಖುದ್ದಾಗಿ ಮತ್ತೆ ಏಕೆ ವಾದಿಸುತ್ತೀರಿ ವ್ಯರ್ಥವಾಗಿ?”


ಚೋಫರನು

13 “ಹೀಗಿರುತ್ತವೆ ದುಷ್ಟನಿಗೆ ದೇವರಿಂದ ದೊರಕುವ ಪಾಲು ಹಿಂಸಾಚಾರಿಗೆ ಸರ್ವಶಕ್ತನಿಂದ ಸಿಗುವ ಸೊತ್ತು:

14 ಅವನಿಗೆ ಮಕ್ಕಳು ಹೆಚ್ಚಿದರೂ ಕತ್ತಿಗೆ ತುತ್ತಾಗುವರು ಅವನ ಸಂತತಿಯವರಿಗೆ ಊಟದ ಕೊರತೆ ತಪ್ಪದು.

15 ಅವನ ಮನೆಯವರಲ್ಲಿ ಉಳಿದವರು ಗುಳಿಸೇರುವರು ವ್ಯಾಧಿಯಿಂದ ಅವನ ವಿಧವೆಯರು ಅವನಿಗೆ ನೆರವಾಗುವರು ಉತ್ತರಕ್ರಿಯೆಗಳಿಂದ.

16 ಅವನು ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ ಧೂಳಿನಷ್ಟು, ವಸ್ತ್ರಗಳನು ಗುಡ್ಡೆ ಮಾಡಿಟ್ಟಿದ್ದರೂ ಮಣ್ಣಿನಷ್ಟು.

17 ಸಜ್ಜನರು ಧರಿಸಿಕೊಳ್ಳುವರು ಆ ವಸ್ತ್ರಗಳನು ನಿರ್ದೋಷಿಗಳು ಹಂಚಿಕೊಳ್ಳುವರು ಆ ಬೆಳ್ಳಿಯನು.

18 ಜೇಡರ ಹುಳದ ಗೂಡಿನಂತೆ ಕಾವಲುಗಾರನ ಗುಡಿಸಿಲಂತೆ ಬಡಕಲಾಗುವುದು ಅವನು ಕಟ್ಟಿಕೊಂಡ ಮನೆ.

19 ಅವನು ನಿದ್ರಿಸಹೋಗುತ್ತಾನೆ ಹಣವಂತನಾಗಿ ಕಣ್ಣು ತೆರೆಯುತ್ತಲೆ ಇಲ್ಲವಾಗಿರುತ್ತದೆ ಆಸ್ತಿ! ಮತ್ತೆ ಇರುತ್ತಾನೆ ನಿದ್ರೆ ಕಾಣದವನಾಗಿ

20 ವಿಪತ್ತುಗಳು ಅವನನ್ನು ಹಿಂದಟ್ಟಿ ಹಿಡಿಯುವುವು ಹೊಳೆಯಂತೆ ಬಿರುಗಾಳಿ ಅವನನ್ನು ಅಪಹರಿಸುವುದು ರಾತ್ರಿಯಲ್ಲೆ.

21 ಅವನು ತೂರಿಹೋಗದಿರನು ಮೂಡಣಗಾಳಿ ಬಡಿಯುವುದರಿಂದ ಅವನನ್ನು ಹೊಡೆದು ಹಾರಿಸಿಬಿಡುವುದು ಅವನಿರುವ ಜಾಗದಿಂದ,

22 ಅವನ ಮೇಲೆ ಅದು ಬೀಸುತ್ತದೆ ನಿರ್ದಾಕ್ಷಿಣ್ಯದಿಂದ ತಪ್ಪಿಸಿಕೊಳ್ಳಲು ಅವನು ಯತ್ನಿಸುತ್ತಾನೆ ಅದರ ಹೊಡೆತದಿಂದ.

23 ಜನರು ಹಾಸ್ಯಮಾಡುತ್ತಾರೆ ಚಪ್ಪಾಳೆ ತಟ್ಟಿ ಅವನನ್ನು ಹೊರಗಟ್ಟುತ್ತಾರೆ ಛೀಮಾರಿ ಹಾಕಿ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು