Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 26 - ಕನ್ನಡ ಸತ್ಯವೇದವು C.L. Bible (BSI)

1 ಆಗ ಯೋಬನು ಹೀಗೆ ಉತ್ತರಕೊಟ್ಟನು:

2 “ನಿಶ್ಯಕ್ತನಿಗೆ ನಿನ್ನಿಂದ ಮಹದುಪಕಾರವಾಯಿತು ದುರ್ಬಲವಾದ ಕೈಗಳಿಗೆ ಮಹಾ ನೆರವು ದೊರಕಿತು!

3 ಮಂದಮತಿಯಾದವನಿಗೆ ಎಷ್ಟೋ ಬುದ್ಧಿ ಹೇಳಿರುವೆ ಸುಜ್ಞಾನವನ್ನು ಬಹಳವಾಗಿ ಬೋಧನೆಮಾಡಿರುವೆ!

4 ಆ ಮಾತುಗಳನ್ನು ನಿನಗೆ ಕಲಿಸಿದವರಾರು? ಈ ನುಡಿಗಳಿಂದ ನಿನ್ನನು ಪ್ರೇರೇಪಿಸಿದ ಪುಣ್ಯಾತ್ಮನಾರು?

5 ಬಿಲ್ದದನು: ಜಲಚರಗಳಿಂದ ತುಂಬಿದ ಸಾಗರದ ಕೆಳಗಿನ ಲೋಕದೊಳು (ದೇವರ ಭಯದಿಂದ) ಯಾತನೆಪಡುತ್ತಿವೆ ಪ್ರೇತಗಳು.

6 ಪಾತಾಳ ತೆರೆದಿದೆ ದೇವರ ದೃಷ್ಟಿಗೆ ಅಧೋಲೋಕ ಮರೆಯಾಗಿಲ್ಲ ಆತನಿಗೆ.

7 ಉತ್ತರ ದಿಕ್ಕನ್ನು ವಿಸ್ತರಿಸಿಹನು ಶೂನ್ಯದ ಮೇಲೆ ಭೂಮಂಡಲವನ್ನು ತೂಗುಹಾಕಿಹನು ಏನೂ ಇಲ್ಲದರ ಮೇಲೆ.

8 ಮೇಘಗಳನ್ನು ನೀರಿನಿಂದ ತುಂಬಿಸಿಹನು ಮೋಡ ಅದರ ಭಾರದಿಂದ ಒಡೆದುಹೋಗದು.

9 ಪೂರ್ಣಚಂದ್ರನನ್ನು ಮರೆಮಾಡುತ್ತಾನೆ ಅದರ ಮುಂದೆ ಮೋಡ ಕವಿಸುತ್ತಾನೆ.

10 ಬೆಳಕು-ಕತ್ತಲು ಸಂಧಿಸುವ ಸ್ಥಾನದಲಿ ಮೇರೆಹಾಕಿದ್ದಾನೆ ಸಮುದ್ರದ ಸುತ್ತಲಲಿ.

11 ಆಕಾಶಮಂಡಲದ ಸ್ತಂಭಗಳು ಕದಲುವುವು ಆತನ ಗದರಿಕೆಗೆ ಅವುಗಳು ಬೆರಗಾಗುವುವು.

12 ಸಮುದ್ರವನು ಭೇದಿಸುತ್ತಾನೆ ಪರಾಕ್ರಮದಿಂದ ಘಟಸರ್ಪವನೂ ಹೊಡೆದು ಹಾಕುತ್ತಾನೆ ವಿವೇಕಶಕ್ತಿಯಿಂದ.

13 ಆತನ ಶ್ವಾಸ ಶುಭ್ರವಾಗಿಸುತ್ತದೆ ಆಕಾಶಮಂಡಲವನು ಆತನ ಹಸ್ತ ಇರಿಯುತ್ತದೆ ಹರಿದೋಡುವ ಸರ್ಪವನು.

14 ದೇವರ ಅದ್ಭುತಗಳಲ್ಲಿ ಇವು ಕೆಲವು ಮಾತ್ರ ಆತನ ಬಗ್ಗೆ ನಾವು ಕೇಳಿರುವುದು ಕಿಂಚಿತ್ತು ಮಾತ್ರ ಆತನ ಘನ ಗರ್ಜನೆಯ ಪ್ರಾಬಲ್ಯವನ್ನು ಗ್ರಹಿಸಲು ಯಾರಿಂದ ಸಾಧ್ಯ?”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು