Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 24 - ಕನ್ನಡ ಸತ್ಯವೇದವು C.L. Bible (BSI)

1 ಸರ್ವಶಕ್ತಸ್ವಾಮಿ ಕಾಲರಾಶಿಯನ್ನೇಕೆ ನೇಮಿಸಿಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ ದಿನಗಳೇಕೆ ಗೋಚರವಾಗುವುದಿಲ್ಲ?

2 ಎಲ್ಲೆ ಮೇರೆಗಳನ್ನು ಸರಿಸಿಕೊಳ್ಳುವವರುಂಟು ಅಪಹರಿಸಿಕೊಂಡ ದನಕುರಿಗಳನ್ನು ಸಾಕಿಕೊಳ್ಳುವವರುಂಟು.

3 ಅನಾಥರ ಕತ್ತೆಗಳನು ಹೊಡೆದುಕೊಂಡು ಹೋಗುತ್ತಾರೆ ವಿಧವೆಯರ ಎತ್ತುಗಳನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.

4 ದಿಕ್ಕಿಲ್ಲದವರನು ದಾರಿತಪ್ಪಿಸುತ್ತಾರೆ ನಾಡಿನ ಬಡವರನು ಅಡಗಿಸಿಬಿಡುತ್ತಾರೆ.

5 ಆ ಬಡವರ ಪಾಡು ಅಡವಿಯ ಕಾಡುಕತ್ತೆಗಳಿಗೆ ಸಮಾನ ಹೊಟ್ಟೆಪಾಡಿಗಾಗಿ ಕೂಳನ್ನು ಹುಡುಕುತ್ತಾರೆ ಬೆಳಗಿನಿಂದ ಅವರ ಮಕ್ಕಳಿಗೆ ಆಹಾರ ಒದಗಿಸುತ್ತದೆ ಅರಣ್ಯ.

6 ಹೊಟ್ಟೆಗಾಗಿ ಸೊಪ್ಪುಸದೆ ಕೊಯ್ದುಕೊಳ್ಳುತ್ತಾರೆ ಬಯಲಿನಲಿ ಹಕ್ಕಲನ್ನು ಆಯ್ದುಕೊಳ್ಳುತ್ತಾರೆ ದುಷ್ಟನ ದ್ರಾಕ್ಷಿತೋಟದಲಿ.

7 ಬೆತ್ತಲೆಯಾಗಿ ಮಲಗುತ್ತಾರೆ ಬಟ್ಟೆಯಿಲ್ಲದೆ ಚಳಿಗಾಲವನ್ನು ಕಳೆಯುತ್ತಾರೆ ಹೊದಿಕೆಯಿಲ್ಲದೆ.

8 ಮಲೆನಾಡಿನ ಭಾರಿಮಳೆಯಿಂದ ನೆನೆದುಹೋಗುತ್ತಾರೆ ಮರೆಯಿಲ್ಲದೆ ಕಲ್ಲುಬಂಡೆಗಳನು ಆಶ್ರಯಿಸುತ್ತಾರೆ.

9 ತಂದೆಯಿಲ್ಲದ ಮಗುವನು ಕಿತ್ತುಕೊಳ್ಳುತ್ತಾರೆ ತಾಯಮೊಲೆಯಿಂದ ಮಕ್ಕಳನು ಅಡವಾಗಿ ಪಡೆಯುತ್ತಾರೆ ಬಡವರಿಂದ.

10 ಬಡವರೋ ಬಟ್ಟೆಯಿಲ್ಲದೆ ಅಲೆಯುತ್ತಾರೆ ಬೆತ್ತಲೆಯಾಗಿ ಸಿವುಡುಗಳನ್ನು ಹೊರುತ್ತಾರೆ ಹಸಿದವರಾಗಿ.

11 ದಾಹಗೊಂಡೇ ದ್ರಾಕ್ಷಿಯನ್ನು ತುಳಿಯುತ್ತಾರೆ ತೊಟ್ಟಿಗಳಲ್ಲಿ ಎಣ್ಣೆಗಾಣವನ್ನು ಆಡಿಸುತ್ತಾರೆ ಕೋಟೆಗಳಲ್ಲಿ.

12 ನಗರಗಳಲ್ಲಿ ನರಳುವವರಿದ್ದಾರೆ ಗಾಯಗೊಂಡವರು ಮೊರೆಯಿಡುತ್ತಾರೆ ಆದರೆ ದೇವರು ಕಿವಿಗೊಡದಿದ್ದಾನೆ.

13 ಬೆಳಕನ್ನು ಪ್ರತಿಭಟಿಸುವವರಿದ್ದಾರೆ ಅದರ ಮಾರ್ಗವನ್ನು ತಿಳಿಯದೆ ಅದರ ಹಾದಿಯನ್ನು ಕೈಗೊಳ್ಳದೆ.

14 ಕೊಲೆಪಾತಕ ಏಳುತ್ತಾನೆ ಮುಂಜಾನೆಯೇ ದೀನದಲಿತರನ್ನು ಕೊಂದುಹಾಕುತ್ತಾನೆ ರಾತ್ರಿಯಲ್ಲಿ ವರ್ತಿಸುತ್ತಾನೆ ಕಳ್ಳನಂತೆ.

15 ವ್ಯಭಿಚಾರಿ ಸಂಜೆಯನೇ ಎದುರು ನೋಡುತ್ತಿರುತ್ತಾನೆ ಯಾರೂ ತನ್ನನ್ನು ಕಾಣದಂತೆ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಾನೆ.

16 ಕಳ್ಳರು ಕತ್ತಲಲ್ಲಿ ಮನೆಗೆ ನುಗ್ಗುತ್ತಾರೆ ಕನ್ನ ಕೊರೆದು ಬೆಳಕು ಕಾಣದೆ ಇರುತ್ತಾರೆ ಹಗಲಲ್ಲಿ ಅವಿತುಕೊಂಡು.

17 ಅಂಥವರಿಗೆ ಕಾರ್ಗತ್ತಲೇ ಬೆಳಗಿನ ಜಾವ ಕಾರ್ಗತ್ತಲಿನ ಅಪಾಯಗಳೇ ಅವರಿಗೆ ಪರಿಚಯ.


( ಚೋಫರನು )

18 “ದುರುಳನನು ಕೊಚ್ಚಿಕೊಂಡುಹೋಗುವುದು ಪ್ರವಾಹ ಪೊಡವಿಯಲ್ಲಿನ ಅವನ ಆಸ್ತಿ ಶಾಪಗ್ರಸ್ತ ಅವನು ದ್ರಾಕ್ಷಿತೋಟಗಳ ಕಡೆಗೂ ಸುಳಿಯಲಾರ.

19 ಬರಗಾಲ-ಬೇಸಿಗೆ ಹಿಮವನು ಹೀರಿಕೊಳ್ಳುವಂತೆ ಪಾತಾಳದ ಕೂಪ ಪಾಪಿಯನು ಸೆಳೆದುಕೊಳ್ಳುತ್ತದೆ.

20 ಹೆತ್ತಕರುಳೇ ಅವನನು ಮರೆತುಬಿಡುವುದು ಹುಳು ಅವನ ಹೆಣವನು ಆಸೆಯಿಂದ ಕಬಳಿಸುವುದು. ಇನ್ನು ಅವನ ನೆನಪು ಯಾರಿಗೂ ಇರದು ಅಕ್ರಮವು ಮುರಿದುಬಿದ್ದ ಮರದಂತಾಗುವುದು.

21 ಮಕ್ಕಳಿಲ್ಲದ ಬಂಜೆಯನ್ನು ಅವನು ಬಾಧಿಸಿದ ವಿಧವೆಯರನು ಉದ್ಧರಿಸದೇ ಹೋದ.

22 ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ ತಮ್ಮ ಜೀವ ಇನ್ನುಳಿಯದು ಎಂದಿದ್ದರೂ ಅವರು ಉದ್ಧಾರವಾಗುತ್ತಾರೆ.

23 ಅವರು ಆಧರಿಸಿ ನಿಂತಿರುವುದು ದೇವರಿತ್ತ ಅಭಯದ ನಿಮಿತ್ತ ಆತನ ಕಟಾಕ್ಷ ಅವರ ಮಾರ್ಗದತ್ತ.

24 ಅವರು ಮೇಲೇರಿ ಮಾಯವಾಗುತ್ತಾರೆ ಕೊಂಚಕಾಲದ ಮೇಲೆ ಕೊಯ್ಯಲ್ಪಡುತ್ತಾರೆ ಸುಗ್ಗಿಯ ತೆನೆಗಳಂತೆ ಕೂಡಿಸಲ್ಪಡುತ್ತಾರೆ ಕೆಳಗೆ ಬಿದ್ದ ಕಾಳಿನಂತೆ.

25 ಈ ಮಾತು ಅಬದ್ಧವೆಂದು ಯಾರು ಸ್ಥಾಪಿಸಬಲ್ಲರು? ನಾನು ಸುಳ್ಳುಗಾರನೆಂದು ನಿಮ್ಮಲ್ಲಿ ಯಾರು ತೋರಿಸಬಲ್ಲನು?”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು