ಯೋಬ 23 - ಕನ್ನಡ ಸತ್ಯವೇದವು C.L. Bible (BSI)1 ಆಗ ಯೋಬನು 2 “ನನ್ನ ದುಃಖಪ್ರಲಾಪ ಈಗಲೂ ಕಟುವಾಗಿದೆ ನಾನು ನಿಟ್ಟುಸಿರಿಡುವಾಗಲೂ ದೇವರ ಹಸ್ತ ಭಾರವಾಗಿದೆ. 3 ಆಹಾ! ಆತನ ದರ್ಶನ ನನಗೆ ದೊರಕುವುದೆಲ್ಲಿ? ನಾನು ಸೇರಬಹುದಿತ್ತಲ್ಲಾ ಆತನ ಸನ್ನಿಧಿಯಲ್ಲಿ! 4 ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸಬಹುದಿತ್ತು ಬಾಯ್ತುಂಬಾ ಆತನೊಡನೆ ವಾದಿಸಬಹುದಿತ್ತು. 5 ಆತನ ಹೇಳಿಕೆಗಳನ್ನು ವಿವೇಚಿಸಬಹುದಿತ್ತು ಆತನ ಪ್ರತ್ಯುತ್ತರಗಳನ್ನು ತಿಳಿದುಕೊಳ್ಳಬಹುದಾಗಿತ್ತು. 6 ಆತ ನನ್ನೊಡನೆ ವ್ಯಾಜ್ಯವಾಡುವನೋ ಶಕ್ತಿಸಾಮರ್ಥ್ಯದಿಂದ? ಇಲ್ಲ, ಆಲಿಸುವನು ನನ್ನ ವಿಜ್ಞಾಪನೆಯನು ಗಮನದಿಂದ. 7 ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ. ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ ನನಗೆ ಲಭ್ಯ. 8 ಮುಂದೆ ಹೋದರೂ ದೇವರು ನನಗೆ ಕಾಣಸಿಗನಯ್ಯಾ ಹಿಂದೆ ಬಂದರೂ ಆತ ನನಗೆ ಕಾಣಸಿಗುವುದಿಲ್ಲವಯ್ಯಾ! 9 ಎಡಗಡೆ ಹುಡುಕಿದರೂ ನೋಡಲಾಗದಯ್ಯಾ ಬಲಗಡೆ ತಿರುಗಿದರೂ ಗೋಚರವಾಗದಯ್ಯಾ! 10 ಆತನಾದರೊ ಬಲ್ಲ ನಾನು ಹಿಡಿವ ದಾರಿಯನು ಆತ ನನ್ನನು ಶೋಧಿಸಿದರೆ ಚೊಕ್ಕ ಬಂಗಾರವಾಗುವೆನು. 11 ಆತನ ಹೆಜ್ಜೆಯ ಜಾಡಿನಲ್ಲೆ ನಾನು ಕಾಲಿಟ್ಟೆ ಓರೆಯಾಗದೆ ಆತನ ದಾರಿಯನ್ನೇ ಹಿಡಿದೆ. 12 ನಾ ಬಿಟ್ಟಗಲಲಿಲ್ಲ ಆತನ ತುಟಿಯಿಂದ ಹೊರಟ ಆಜ್ಞೆಗಳನು ನನ್ನೆದೆಯಲಿ ನಿಧಿಯಾಗಿಟ್ಟೆ ಆತನ ಬಾಯಿಂದ ಬಂದ ಮಾತುಗಳನ್ನು. 13 ಆತನದು ಏಕಚಿತ್ತ; ಅದನು ಬದಲಾಯಿಸಲಸಾಧ್ಯ ಆತ ಬಯಸಿದ್ದೆ ಸಿದ್ಧಿಯಾದಕಾರ್ಯ. 14 ನನಗೆ ವಿಧಿತವಾದುವುಗಳನೆ ಕಾರ್ಯಗೊಳಿಸುತ್ತಾನೆ ಈ ಪರಿಯ ಹಲವಾರು ಯೋಜನೆಗಳು ಆತನಲ್ಲಿವೆ. 15 ಈ ಕಾರಣ ಆತನ ಸನ್ನಿಧಿಯಲಿ ನಾನು ಅಂಜುಬುರುಕ ಇದನ್ನು ನೆನೆದು ಮನದಲಿ ನಾನು ಭಯಪೀಡಿತ. 16 ದೇವರೇ ನನ್ನ ಶಕ್ತಿಯನು ಕುಂದಿಸಿಹನು ಸರ್ವಶಕ್ತ ನನ್ನನು ಆತಂಕಗೊಳಿಸಿಹನು. 17 ನನ್ನ ವಿನಾಶಕ್ಕೆ ಈ ಅಂಧಕಾರವು ನಿಮಿತ್ತವಲ್ಲ ನನ್ನ ಮುಖಕ್ಕೆ ಕವಿದಿರುವ ಈ ಕಾರ್ಗತ್ತಲು ಕಾರಣವಲ್ಲ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India