ಯೋಬ 19 - ಕನ್ನಡ ಸತ್ಯವೇದವು C.L. Bible (BSI)1 ಆಗ ಯೋಬನು ಮತ್ತೆ ಹೀಗೆಂದನು: 2 “ಇನ್ನೆಷ್ಟರವರೆಗೆ ನೀವು ನನ್ನನ್ನು ನೋಯಿಸುವಿರಿ? ನಿಮ್ಮ ಮಾತುಗಳಿಂದ ನನ್ನನು ನಸುಕುತ್ತಿರುವಿರಿ? 3 ಈವರೆಗೆ ನನಗೆ ಕೇಡು ಮಾಡಿದ್ದಕ್ಕೆ ಹತ್ತಾರು ಸಾರಿ ನನ್ನನ್ನು ಅವಮಾನಿಸಿದ್ದಕ್ಕೆ ನಿಮಗಾಗುವುದಿಲ್ಲವೆ ನಾಚಿಕೆ? 4 ನಿಶ್ಚಯವಾಗಿ ನಾನು ತಪ್ಪುಳ್ಳವನಾದರೆ ಅದರಿಂದ ನಿಮಗೇನು? ಆ ತಪ್ಪು ನನ್ನದೆ. 5 ನನಗಿಂತ ನೀವೇ ಮೇಲೆಂದು ಭಾವಿಸುತ್ತೀರೋ? ನನ್ನ ದೀನ ಸ್ಥಿತಿಗೆ ನನ್ನ ದೋಷವೇ ಕಾರಣವೆನ್ನುತ್ತೀರೋ? 6 ನನಗೆ ಅನ್ಯಾಯವಾಗಿರುವುದು ದೇವರಿಂದಲೇ ನನ್ನ ಸುತ್ತಲು ಬಲೆಯೊಡ್ಡಿರುವವನು ಆತನೇ! ನಾನು ಹೇಳುವ ಈ ಮಾತು ತಿಳಿದಿರಲಿ ನಿಮಗೆ: 7 ‘ಇದೋ ಹಿಂಸಾಚಾರ’ ಎಂದು ನಾನು ಕೂಗಿಕೊಂಡರೂ ಕೇಳುವವರಿಲ್ಲ ನಾನು ಮೊರೆಯಿಟ್ಟರೂ ನನಗೆ ನ್ಯಾಯ ದೊರಕುವುದಿಲ್ಲ. 8 ನಾನು ಮುಂದೆ ಹೋಗದಂತೆ ದೇವರು ಅಡ್ಡಗೋಡೆ ಹಾಕಿದ್ದಾನೆ ನನ್ನ ಹಾದಿಗೆ ಕತ್ತಲೆ ಕವಿಯುವಂತೆ ಮಾಡಿದ್ದಾನೆ. 9 ನನ್ನ ಘನತೆಯನ್ನು ಸುಲಿದುಬಿಟ್ಟಿದ್ದಾನೆ ನನ್ನ ಕಿರೀಟವನ್ನು ಕಿತ್ತುಹಾಕಿದ್ದಾನೆ. 10 ನಾಲ್ದೆಸೆಯಿಂದ ಧಾಳಿಮಾಡಿ ನಾಶಮಾಡಿದ್ದಾನೆ ಮರ ಕೀಳುವ ಪ್ರಕಾರ ನನ್ನ ನಿರೀಕ್ಷೆಯನು ಕಿತ್ತುಬಿಟ್ಟಿದ್ದಾನೆ. 11 ತನ್ನ ಕೋಪಾಗ್ನಿಯನು ನನ್ನ ಮೇಲೆ ಧಗಧಗಿಸಿದ್ದಾನೆ ನನ್ನನ್ನು ತನ್ನ ವೈರಿಯೆಂದೇ ಪರಿಗಣಿಸಿದ್ದಾನೆ. 12 ಮುನ್ನುಗ್ಗಿ ಬಂದಿದೆ ಆತನ ಸೇನೆ ಒಟ್ಟಿಗೆ ದಿಬ್ಬಹಾಕಿಕೊಂಡಿದೆ ಅದು ನನ್ನೆದುರಿಗೆ ನನ್ನ ಗುಡಾರದ ಎಲ್ಲಾ ಕಡೆಗೆ ದಂಡು ಇಳಿದಿದೆ. 13 ಸೋದರನನ್ನೂ ನನ್ನಿಂದ ದೇವರು ದೂರವಾಗಿರಿಸಿದ್ದಾನೆ ಪರಿಚಿತರೆಲ್ಲರು ನನ್ನನು ತೊರೆದುಬಿಟ್ಟಿದ್ದಾರೆ. 14 ನನ್ನನು ಬಂಧುಬಳಗದವರು ಕೈಬಿಟ್ಟಿದ್ದಾರೆ ಆಪ್ತಮಿತ್ರರೂ ನನ್ನನು ಮರೆತುಬಿಟ್ಟಿದ್ದಾರೆ. 15 ಮನೆಯ ದಾಸದಾಸಿಯರಿಗೇ ನಾನು ಅನ್ಯನಾದೆ ಅವರ ಕಣ್ಣಿಗೇ ನಾನು ಪರದೇಶಿಯನಾದೆ. 16 ಕರೆದರೂ ನನ್ನ ಸೇವಕರು ಉತ್ತರಕೊಡುವುದಿಲ್ಲ ಬಾಯಿತೆರೆದು ಬೇಡಿಕೊಳ್ಳುವ ಸ್ಥಿತಿ ನನ್ನದಾಯಿತಲ್ಲಾ! 17 ನನ್ನುಸಿರು ನನ್ನ ಧರ್ಮಪತ್ನಿಗೆ ಅಸಹ್ಯವಾಗಿದೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೇ ಹೇಸಿಕೆಯಾದೆ. 18 ಚಿಕ್ಕವರು ಕೂಡ ನನ್ನನು ತಿರಸ್ಕರಿಸುತ್ತಾರೆ ನಾನು ಕಾಣಿಸಿಕೊಂಡಾಗಲೆಲ್ಲ ಹಾಸ್ಯಮಾಡುತ್ತಾರೆ. 19 ನನ್ನ ನೋಡಿ ಆಪ್ತಮಿತ್ರರೆಲ್ಲರು ಹೇಸಿಕೊಳ್ಳುತ್ತಾರೆ ನನ್ನ ಮೇಲೆ ನನ್ನ ಪ್ರೀತಿಪಾತ್ರರೂ ತಿರುಗಿಬಿದ್ದಿದ್ದಾರೆ. 20 ಕೇವಲ ಎಲುಬೂ ತೊಗಲೂ ಆಗಿಬಿಟ್ಟಿದ್ದೇನೆ ಮೃತ್ಯುವಿನ ದವಡೆಗೆ ಸಿಕ್ಕಿಕೊಂಡಿದ್ದೇನೆ. 21 ಕರುಣೆ ತೋರಿ ಗೆಳೆಯರೇ, ಕರುಣೆ ತೋರಿ ನನಗೆ! ಏಕೆಂದರೆ ದೇವರ ಕೈ ನನ್ನನು ದಂಡಿಸಿದೆ. 22 ದೇವರಂತೆ ನೀವೂ ನನ್ನನು ದಂಡಿಸುವುದೇಕೆ? ನನ್ನನ್ನು ಛಿನ್ನಪನ್ನವಾಗಿಸಿದ್ದೀರಿ, ಇದು ಸಾಲದೆ ನಿಮಗೆ? 23 ನನ್ನ ಮಾತುಗಳನು ಬರೆದಿಟ್ಟರೆ ಎಷ್ಟೋ ಮೇಲು! ಸುರುಳಿಯಲಿ ಅದು ಲಿಖಿತವಾದರೆ ಎಷ್ಟೋ ಲೇಸು! 24 ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಶಾಶ್ವತ ಶಾಸನವಾಗಿಸಿದ್ದರೆ ಎಷ್ಟೋ ಒಳಿತು. 25 ನಾನಂತು ಬಲ್ಲೆ, ನನ್ನ ಉದ್ಧಾರಕ ಜೀವಸ್ವರೂಪನೆಂದು ಕಡೆಯ ದಿನದಂದು ಧರೆಗಾತ ಇಳಿದುಬರುವನೆಂದು. 26 ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು. 27 ಕಣ್ಣಾರೆ ಆತನನ್ನು ಕಾಣುವೆನು ಮತ್ತೊಬ್ಬನಾಗಲ್ಲ, ನಾನಾಗೇ ನೋಡುವೆನು. ಹಂಬಲಿಕೆಯಿಂದ ಕುಂದಿದೆ ನನ್ನ ಅಂತರಂಗವು. 28 ‘ಅವನನ್ನು ಆದಷ್ಟೂ ಹಿಂಸೆಮಾಡೋಣ ಅವನ ದುರ್ಗತಿಗೆ ಮೂಲಕಾರಣ ಹುಡುಕೋಣ’ ಎಂದು ನೀವು ಆಡಿಕೊಳ್ಳುವ ಕಾರಣ. 29 ಭಯಪಡಿ ನೀವು ಕತ್ತಿಗೆ ಪಾಪದ ಮೇಲೆ ದೇವರ ಕೋಪ ಬರಮಾಡುವಾ ಕತ್ತಿಗೆ ನ್ಯಾಯತೀರ್ಪು ಉಂಟೆಂದು ಆಗ ತಿಳಿವುದು ನಿಮಗೆ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India