Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 17 - ಕನ್ನಡ ಸತ್ಯವೇದವು C.L. Bible (BSI)

1 “ನನಗೆ ಉಸಿರು ಕಟ್ಟುತ್ತಿದೆ ನನ್ನ ದಿನಗಳು ಮುಗಿದಿವೆ ಸಮಾಧಿ ನನಗಾಗಿ ಕಾದಿದೆ.

2 ಚೇಷ್ಟೆಗಾರರಿದ್ದಾರೆ ನನ್ನ ಸುತ್ತಮುತ್ತ ನನ್ನ ಕಣ್ಮುಂದಿದೆ ಸದಾ ಅವರ ಕೆಣಕಾಟ.

3 ಓ ದೇವರೇ, ನೀನೆ ನನಗೆ ಈಡು ಕೊಡುವವನು ನಿನ್ನನ್ನು ಬಿಟ್ಟರೆ ನನಗಿಲ್ಲ ಒಪ್ಪಂದಮಾಡುವವರಾರು.

4 ಜ್ಞಾನ ಪ್ರವೇಶಿಸದಂತೆ ನೀ ಅವರ ಮನಸ್ಸನು ಮುಚ್ಚಿರುವೆ ಹೀಗೆ ಅವರು ಜಯಶೀಲರಾಗದಂತೆ ತಡೆದಿರುವೆ.

5 ಯಾವನು ಸ್ವಾರ್ಥಕ್ಕಾಗಿ ಮಿತ್ರನ ಮೇಲೆ ಹೊರಿಸುತ್ತಾನೋ ದೂರು ಅಂಥವನ ಮಕ್ಕಳ ಕಣ್ಣುಗಳು ಮಂಕಾಗಿಹೋಗದಿರವು.

6 ದೇವರು ನನ್ನನು ಈಡಾಗಿಸಿದ್ದಾನೆ ಅನ್ಯರ ಕಟ್ಟುಗಾದೆಗೆ ನನ್ನ ಮುಖ ಗುರಿಯಾಗಿದೆ ಜನರ ಉಗುಳಾಟಕ್ಕೆ.

7 ನನ್ನ ಕಣ್ಣು ದುಃಖದಿಂದ ಮೊಬ್ಬಾಗಿವೆ ಅಂಗಗಳೆಲ್ಲ ನೆರಳಂತೆ ನಿಸ್ಸಾರವಾಗಿವೆ.

8 ಇದನ್ನು ಕಂಡು ಸಜ್ಜನರು ನಿಬ್ಬೆರಗಾಗಿದ್ದಾರೆ ದುರ್ಜನರ ಬಗ್ಗೆ ನಿರಪರಾಧಿ ಎಚ್ಚರಗೊಂಡಿದ್ದಾನೆ.

9 ಸನ್ಮಾರ್ಗದಲ್ಲಿ ಮುಂದುವರೆವವನು ಸಜ್ಜನನು ಬಲಗೊಳ್ಳುತ್ತಲೇ ಇರುವನು ಶುದ್ಧಹಸ್ತನು.

10 ನೀವೆಲ್ಲರೂ ಮತ್ತೆ ಬನ್ನಿ ವಾದಕ್ಕೆ ನಿಮ್ಮಲ್ಲಿ ಜ್ಞಾನಿಯೊಬ್ಬನನ್ನೂ ನಾ ಕಾಣೆ.

11 ಮುಗಿದುಹೋದವು ನನ್ನ ದಿನಗಳು ಭಂಗವಾದವು ನನ್ನ ಗುರಿಧ್ಯೇಯಗಳು.

12 ಇರುಳನ್ನು ಹಗಲೆಂದು ಸಾಧಿಸುತ್ತಿರುವರು ಕತ್ತಲಿಂದಲೇ ಬೆಳಕು ಬೇಗ ಬರಲಿದೆ ಎನ್ನುತ್ತಿರುವರು.

13 ಪಾತಾಳವನ್ನೇ ನನ್ನ ಮನೆಯೆಂದು ನಾನು ಭಾವಿಸಿದೆನಾದರೆ ಕತ್ತಲಲ್ಲೇ ನನ್ನ ಹಾಸಿಗೆಯನ್ನು ಹಾಕಿಕೊಂಡೆನಾದರೆ,

14 ಸಮಾಧಿಯನ್ನೇ ‘ನನ್ನ ತಂದೆ’ ಎಂದು ಕರೆದೆನಾದರೆ ಹುಳುವನ್ನೇ ‘ನನ್ನ ತಾಯಿ, ನನ್ನ ತಂಗಿ’ ಎಂದೆನಾದರೆ.

15 ನನ್ನ ನಂಬಿಕೆ-ನಿರೀಕ್ಷೆ ಎಲ್ಲಿಯದು? ನನ್ನ ಭಾಗ್ಯವನ್ನು ಯಾರು ನೋಡಿಯಾರು?

16 ಇವು ನನ್ನ ಸಂಗಡ ಪಾತಾಳಕ್ಕೆ ಬರಲಾದೀತೆ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು