ಯೋಬ 16 - ಕನ್ನಡ ಸತ್ಯವೇದವು C.L. Bible (BSI)1 ಆಗ ಯೋಬನು ಕೊಟ್ಟ ಉತ್ತರ: 2 “ಇಂಥ ಎಷ್ಟೋ ಮಾತುಗಳನ್ನು ಕೇಳಿದ್ದೇನೆ ನೀವೆಲ್ಲರು ಆದರಿಸುವವರಲ್ಲ, ಬಾಧಿಸುವವರೇ. 3 ನಿಮ್ಮ ಗಾಳಿಮಾತುಗಳಿಗೆ ಇತಿಮಿತಿ ಬೇಡವೇನು? ಇಂಥ ಉತ್ತರ ಕೊಡಲು ನಿಮ್ಮನ್ನು ಒತ್ತಾಯಪಡಿಸಿದ್ದೇನು? 4 ನನ್ನ ಸ್ಥಿತಿಯಲ್ಲಿ ನೀವಿದ್ದಿದ್ದರೆ ನಾನೂ ಮಾತಾಡಬಹುದಿತ್ತು ನಿಮ್ಮಂತೆ. ನಿಮಗೆ ವಿರುದ್ಧ ನಾನೂ ಮಾತೂ ಬೆಳೆಸಬಹುದಿತ್ತು ನಿಮ್ಮ ವಿಷಯದಲ್ಲಿ ನಾನೂ ತಲೆಯಾಡಿಸಬಹುದಿತ್ತು. 5 ನಾನು ನಿಮಗೆ ಬಾಯಿಮಾತಿನಿಂದ ಧೈರ್ಯ ಹೇಳಬಹುದಿತ್ತು ತುಟಿಮಾತುಗಳಿಂದ ಆದರಿಸಿ ಸಾಂತ್ವನ ನೀಡಬಹುದಿತ್ತು. 6 ನಾನು ಮಾತಾಡಿದರೆ ನನ್ನ ನೋವು ನಿವಾರಣೆಯಾಗದು ನಾನು ಸುಮ್ಮನಿದ್ದರೆ ನನ್ನ ಕಷ್ಟ ಪರಿಹಾರವಾಗದು. 7 ದೇವರೇ, ದುಃಖದಿಂದ ನೀ ನನ್ನನ್ನು ಸವೆಸಿರುವೆ ನನ್ನ ಬಂಧುಬಳಗದವರನ್ನು ಸದೆಬಡಿದಿರುವೆ. 8 ನನ್ನ ಮುಖವೆಲ್ಲ ಸುಕ್ಕುಹಿಡಿದಿದೆ ನನ್ನ ಸಣಕಲುತನವೆ ನನಗೆ ವಿರುದ್ಧ ಸಾಕ್ಷಿಯಾಗಿದೆ. 9 ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ. 10 ಜನರು ಬಾಯಿಕಿಸಿದು ನನ್ನನು ಅಣಕಿಸುತ್ತಾರೆ ಛೀಮಾರಿ ಹಾಕಿ ನನ್ನ ದವಡೆಗೆ ಬಡಿದಿದ್ದಾರೆ ನನಗೆ ವಿರುದ್ಧವಾಗಿ ಗುಂಪುಕಟ್ಟಿದ್ದಾರೆ. 11 ದೇವರು ನನ್ನನ್ನೊಪ್ಪಿಸಿಬಿಟ್ಟಿದ್ದಾನೆ ತುಂಟರಿಗೆ ನನ್ನನ್ನು ಎಸೆದುಬಿಟ್ಟಿದ್ದಾನೆ ದುಷ್ಟರ ಕೈಗೆ. 12 ನೆಮ್ಮದಿಯಾಗಿದ್ದ ನನ್ನನು ಒಡೆದು ಬಡಿದುಹಾಕಿದ್ದಾನೆ ಕುತ್ತಿಗೆ ಹಿಸುಕಿ ನನ್ನನು ತುಂಡಾಗಿಸಿದ್ದಾನೆ. ಬಾಣಬಿಡಲು ನನ್ನನು ಗುರಿಹಲಗೆಯಾಗಿಸಿಕೊಂಡಿದ್ದಾನೆ. 13 ಮುತ್ತಿಕೊಂಡಿವೆ ನನ್ನನು ಆತನ ಬಾಣಗಳು ನಿರ್ದಯೆಯಿಂದ ಅಂತರಂಗವನ್ನು ಇರಿಯುತ್ತಿಹನು ನೆಲದ ಮೇಲೆ ನನ್ನ ಪಿತ್ತವನು ಸುರಿಸುತ್ತಿಹನು. 14 ಪೆಟ್ಟಿನ ಮೇಲೆ ಪೆಟ್ಟು ಕೊಟ್ಟು ನನ್ನನು ಬಡಕಲಾಗಿಸಿಹನು ಯುದ್ಧಶೂರನಂತೆ ಓಡಿಬಂದು ಮೇಲೆ ಬೀಳುತ್ತಿಹನು. 15 ಗೋಣಿತಟ್ಟನ್ನು ಹೊಲಿದು ಮೈಗೆ ಹಾಕಿಕೊಂಡಿರುವೆ ನನ್ನ ಕೊಂಬನ್ನು ಬೂದಿಯೊಳಗೆ ಬಾಗಿಸಿಟ್ಟಿರುವೆ. 16 ಕಣ್ಣೀರು ಸುರಿಸಿ ನನ್ನ ಮುಖ ಕೆಂಪೇರಿದೆ ನನ್ನ ಕಣ್ಣುಗಳಿಗೆ ಕಾರಿರುಳು ಕವಿದಿದೆ. 17 ಆದರೂ ನಾನು ಹಿಂಸಾಚಾರಕ್ಕೆ ಕೈಹಾಕಲಿಲ್ಲ ನಾನು ಮಾಡುವ ಪ್ರಾರ್ಥನೆ ನಿರ್ಮಲ. 18 ಪೊಡವಿಯೇ, ನನ್ನ ನೆತ್ತರನ್ನು ನೀ ಮುಚ್ಚಬೇಡ ನಾನು ಮಾಡುತ್ತಿರುವ ಮೊರೆಯನ್ನು ನಿಲ್ಲಿಸಬೇಡ. 19 ಇಗೋ, ನನ್ನ ಕಡೆಯ ಸಾಕ್ಷಿ ಸ್ವರ್ಗದಲ್ಲಿರುವನು ನನ್ನ ಪರವಾದಿ ಮೇಲಣ ಲೋಕದಲ್ಲಿರುವನು. 20 ಗೆಳೆಯರು ನನ್ನನ್ನು ಹೀಗಳೆಯುತ್ತಿರುವರು ನಾನೋ ಸುರಿಸುತ್ತಿರುವೆ ದೇವರ ಮುಂದೆ ಕಣ್ಣೀರು. 21 ಇದು ನನಗೆ ನ್ಯಾಯ ದೊರಕಿಸಲಿ, ದೇವರ ಮುಂದೆ ತನ್ನ ಮಿತ್ರನಿಗಾಗಿ ಒಬ್ಬನು ವಾದಿಸುವಂತೆ. 22 ನನ್ನ ವರ್ಷಗಳು ಕಳೆದುಹೋಗುತ್ತಿವೆ ಹಿಂತಿರುಗಲಾಗದ ಹಾದಿಯನು ನಾನು ಹಿಡಿಯಲಿರುವೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India