ಯೋಬ 13 - ಕನ್ನಡ ಸತ್ಯವೇದವು C.L. Bible (BSI)1 “ಇವೆಲ್ಲವನ್ನು ನನ್ನ ಕಣ್ಣುಗಳು ಕಂಡಿವೆ. ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ. 2 ನೀವು ತಿಳಿದಿರುವುದನ್ನು ನಾನೂ ತಿಳಿದವ ನಿಮಗಿಂತ ನಾನು ಕೀಳೇನೂ ಅಲ್ಲ. 3 ಸರ್ವಶಕ್ತನೊಡನೆ ಮಾತಾಡಲು ನನಗಿದೆ ಆಸೆ ದೇವರೊಂದಿಗೆ ವಾದಿಸಲು ನನಗಿದೆ ಅಪೇಕ್ಷೆ. 4 ನೀವು ಸುಳ್ಳಿಗೆ ಸುಣ್ಣ ಬಳಿಯುವವರು ನೀವೆಲ್ಲರು ಏತಕ್ಕೂ ಬಾರದ ವೈದ್ಯರು. 5 ನೀವು ಸುಮ್ಮನಿದ್ದರೆ ಚೆನ್ನ ಮೌನವೇ ನಿಮಗೆ ಉತ್ತಮ. 6 ಈಗ ಕೇಳಿ ನನ್ನ ವಾದವನ್ನು ಆಲಿಸಿರೀಗ ನನ್ನ ತರ್ಕವನ್ನು. 7 ದೇವರ ಪಕ್ಷ ವಹಿಸಿ ನೀವು ಅನ್ಯಾಯ ನುಡಿಯುವಿರೋ? ಅವರಿಗೋಸ್ಕರ ಕಪಟ ಮಾತಾಡುವಿರೋ? 8 ಅವರಿಗೆ ಮುಖದಾಕ್ಷಿಣ್ಯ ತೋರುವಿರೋ? ದೇವರ ಪರವಾಗಿ ನೀವು ವಾದಿಸುವಿರೋ? 9 ದೇವರು ನಿಮ್ಮನ್ನು ಪರಿಶೋಧಿಸಿದರೆ ನಿಮಗೆ ಒಳಿತೆ? ಮನುಷ್ಯರಂತೆ ಆತನನ್ನು ಮೋಸಗೊಳಿಸಲಾದೀತೆ? 10 ನೀವು ಗುಟ್ಟಾಗಿ ಪಕ್ಷಪಾತಮಾಡಿದರೂ ಆತ ನಿಮ್ಮನ್ನು ಖಂಡಿಸದೆ ಬಿಡನು. 11 ಆತನ ಪ್ರತಿಭೆ ನಿಮ್ಮನ್ನು ಹೆದರಿಸದೋ? ದೈವಭಯವು ನಿಮ್ಮನ್ನು ಆವರಿಸದೋ? 12 ನಿಮ್ಮ ಸ್ಮೃತಿಗಳು ಬೂದಿಯ ಸಾಮತಿಗಳು ನಿಮ್ಮ ವಾದಗಳು ಮಣ್ಣಿನ ಗೋಡೆಗಳು. 13 ಸುಮ್ಮನಿರಿ, ನನ್ನನ್ನು ಮಾತಾಡಲು ಬಿಡಿ ನನ್ನ ಮೇಲೆ ಏನು ಬೇಕಾದರೂ ಬರಲಿ. 14 ಪ್ರಾಣವನ್ನು ನಾನು ಕಚ್ಚಿಕೊಂಡಿದ್ದೇನೆ ಬಾಯಲಿ ಜೀವವನ್ನು ನಾನು ಹಿಡಿದುಕೊಂಡಿದ್ದೇನೆ ಕೈಯಲಿ. 15 ಇಗೋ, ದೇವರು ಕೊಲ್ಲುವನೆನ್ನನು ಅದಕ್ಕಾಗಿ ನಾನು ಕಾದಿರುವೆನು. ಆದರೂ ನನ್ನ ನಡತೆ ಸರಿಯೆಂಬುದನು ಆತನ ಮುಂದೆಯೆ ರುಜುವಾತುಪಡಿಸುವೆನು. 16 ಭಕ್ತಿಹೀನನು ಆತನ ಮುಂದೆ ಬರಲಾರ ನಾನು ಉದ್ಧಾರವಾಗುವೆನೆಂಬುದಕ್ಕೆ ಇದೇ ಆಧಾರ. 17 ಕೇಳಿ, ನನ್ನ ಮಾತನ್ನು ಲಕ್ಷ್ಯವಿಟ್ಟು ನನ್ನ ಅರಿಕೆಯನ್ನು ಕಿವಿಗೊಟ್ಟು. 18 ಇಗೋ ನನ್ನ ಮೊಕದ್ದಮೆಯನ್ನು ಸಿದ್ಧಗೊಳಿಸಲಾಗಿದೆ ನಾನು ನಿರ್ದೋಷಿಯೆಂಬ ನಿರ್ಣಯ ನನಗೆ ಗೊತ್ತೇ ಇದೆ. 19 ದೇವಾ, ನನ್ನ ಮೇಲೆ ಆಪಾದನೆ ಹೊರಿಸಲು ಬರುವೆಯಾ? ಹಾಗಾದರೆ ಮೌನತಾಳಿ ನಾ ಮಾಡುವೆ ಪ್ರಾಣತ್ಯಾಗ. 20 ನನ್ನೆರಡು ಕೋರಿಕೆಗಳನ್ನು ಈಡೇರಿಸಯ್ಯಾ ಆಗ ನಿನ್ನ ದೃಷ್ಟಿಗೆ ನಾನು ಮರೆಮಾಡಿಕೊಳ್ಳಲಾರೆನಯ್ಯಾ. 21 ಹಿಂತೆಗೆದುಕೊ ನನ್ನ ಮೇಲೆತ್ತಿರುವ ನಿನ್ನ ಕೈಗಳನು ಅಂಜಿಕೆಗೀಡು ಮಾಡದಿರಲಿ ನಿನ್ನ ದಿಗಿಲು ನನ್ನನು. 22 ಆ ಬಳಿಕ ನೀನು ಕರೆದರೆ ನಾನು ಉತ್ತರಕೊಡುವೆ ಇಲ್ಲವೆ, ನಾನು ಮಾತಾಡಿದರೆ ನೀನೆ ಉತ್ತರಿಸುವೆ. 23 ನನ್ನ ಅಕ್ರಮಗಳೆಷ್ಟು? ಪಾಪಗಳೆಷ್ಟು? ನನ್ನ ಪಾಪದೋಷಗಳನ್ನು ತಿಳಿಯಪಡಿಸು. 24 ನೀನೇಕೆ ನನಗೆ ವಿಮುಖನಾಗಿರುವೆ? ನನ್ನನ್ನೇಕೆ ಶತ್ರು ಎಂದೆಣಿಸುವೆ? 25 ಗಾಳಿಗೆ ತೂರುವ ತರಗೆಲೆಯನ್ನು ಬೆದರಿಸುವೆಯಾ? ಒಣಗಿದ ಹೊಟ್ಟನ್ನು ಬೆನ್ನಟ್ಟಿಹೋಗುವೆಯಾ? 26 ನನ್ನ ವಿಷಯವಾಗಿ ಕಹಿಯಾದ ತೀರ್ಪನು ಬರೆದಿರುವೆ ಯೌವನದ ಪಾಪಪರಿಣಾಮಗಳನು ನನ್ನ ಮೇಲೆ ಹೊರಿಸಿರುವೆ. 27 ನನ್ನ ಕಾಲುಗಳಿಗೆ ನೀ ಕೋಳವನ್ನು ತೊಡಿಸಿರುವೆ ನನ್ನ ನಡತೆಯನು ದಿಟ್ಟಿಸಿ ನೋಡುತ್ತಿರುವೆ ನನ್ನ ಹೆಜ್ಜೆ ಹೆಜ್ಜೆಯನು ಲೆಕ್ಕಿಸುತ್ತಿರುವೆ. 28 ಕೊಳೆತ ಪದಾರ್ಥದಂತೆ, ನುಸಿಹಿಡಿದ ಬಟ್ಟೆಯಂತೆ ನಾನು ಕ್ಷಯಿಸಿ ಹೋಗುತ್ತಿರುವೆ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India