Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 12 - ಕನ್ನಡ ಸತ್ಯವೇದವು C.L. Bible (BSI)

1 ಅದಕ್ಕೆ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:

2 :ಹೌದ್ಹೌದು ನೀವೇ ಮಹಾಜನ, ನಿಮ್ಮೊಡನೆಯೇ ಸಾಯುವುದು ಸುಜ್ಞಾನ!

3 ನಿಮ್ಮ ಹಾಗೆ ನಾನೂ ಬಲ್ಲವ ನಿಮಗಿಂತ ನಾನೇನೂ ಕೀಳಲ್ಲ. ಇದು ಯಾರಿಗೆ ತಾನೆ ತಿಳಿದಿಲ್ಲ?

4 ನೀತಿವಂತನೂ ನಿರ್ದೋಷಿಯೂ ಆದ ನಾನು ದೇವರನ್ನು ಪ್ರಾರ್ಥಿಸಿ ಪ್ರತ್ಯುತ್ತರಕ್ಕಾಗಿ ಕಾದಿರಲು ಗೆಳೆಯರ ಗೇಲಿಪರಿಹಾಸ್ಯಕೆ ಗುರಿಯಾದೆನು.

5 ದಲಿತರನ್ನು ಕಂಡರೆ ಸುಖಜೀವಿಗಳಿಗೆ ತಾತ್ಸಾರ ಜಾರಿ ಬೀಳಲಿರುವವರಿಗೆ ಕಾದಿದೆ ತಿರಸ್ಕಾರ.

6 ಸಮೃದ್ಧಿಯಾಗಿವೆ ಕಳ್ಳಕಾಕರ ಗುಡಾರಗಳು ಸುರಕ್ಷಿತವಾಗಿರುವರು ದೇವರನ್ನೆ ಕೆರಳಿಸುವವರು ಅಂಗೈಯಲ್ಲಿರುವುದೇ ಅವರಿಗೆ ದೇವರು!

7 ಮೃಗಗಳನ್ನು ಬೇಕಾದರೆ ಕೇಳು, ಅವು ಕಲಿಸುವುವು ಆಕಾಶದ ಪಕ್ಷಿಗಳನ್ನು ಕೇಳು, ಅವು ತಿಳಿಸುವುವು.

8 ಕ್ರಿಮಿಕೀಟಗಳನ್ನು ಕೇಳು, ಅವು ನಿನಗೆ ಬೋಧಿಸುವುವು ಸಮುದ್ರದ ಮೀನುಗಳು ನಿನಗೆ ಉಪದೇಶ ಮಾಡುವುವು.

9 ಇವುಗಳೆಲ್ಲವನ್ನು ಮಾಡಿದ್ದು ಸರ್ವೇಶ್ವರನ ಕೈಯೇ ಇದು ತಿಳಿಯದಿರುವುದು ಯಾರಿಗೆ ತಾನೆ?

10 ಆತನ ಕೈಯಲ್ಲಿದೆ ಎಲ್ಲ ಜೀವಿಗಳ ಪ್ರಾಣ ಪ್ರತಿಯೊಬ್ಬ ನರಮಾನವನ ಶ್ವಾಸ.

11 ನಾಲಿಗೆ ರುಚಿನೋಡುವಂತೆಯೆ ಕಿವಿ ನುಡಿಯನು ವಿವೇಚಿಸುತ್ತದೆ.

12 ಜ್ಞಾನವಿದೆ ವಯೋವೃದ್ಧರಲ್ಲಿ ವಿವೇಕವಿದೆ ದೀರ್ಘಾಯುಷ್ಯರಲ್ಲಿ.

13 ಆದರೆ ದೇವರಲ್ಲಿದೆ ಜ್ಞಾನದೊಡನೆ ಶಕ್ತಿಕೂಡ ಆತನಲ್ಲಿದೆ ವಿವೇಕ ಮತ್ತು ಸನ್ಮತಿ ಸಹ.

14 ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.

15 ಆತ ನೀರನ್ನು ತಡೆದರೆ, ಬತ್ತಿಹೋಗುತ್ತದೆ ಬೆಳೆಯೆಲ್ಲ ತೂಬೆತ್ತಿದರೆ ಮುಳುಗಿಹೋಗುತ್ತದೆ ಇಳೆಯೆಲ್ಲ.

16 ಸಾಮರ್ಥ್ಯ ಹಾಗು ವಿಜಯ ಆತನ ಲಕ್ಷಣ ವಂಚಕ ಹಾಗು ವಂಚಿತ ಆತನಿಗೆ ಅಧೀನ.

17 ಮಂತ್ರಿಗಳನು ಬರಿಬತ್ತಲೆಯಾಗಿ ನಡೆಸುತ್ತಾನೆ ನ್ಯಾಯಾಧಿಪತಿಗಳನು ಮೂರ್ಖರನ್ನಾಗಿಸುತ್ತಾನೆ.

18 ಅರಸರು ಹಾಕಿದ ಬಂಧನವನ್ನು ಬಿಚ್ಚಿ ಬಿಗಿಯುತ್ತಾನೆ ಅವರ ಸೊಂಟಕ್ಕೆ ಚಿಂದಿ.

19 ಯಾಜಕರನ್ನು ಬರಿಬತ್ತಲೆಯಾಗಿ ನಡೆಸುತ್ತಾನೆ ಅಚಲ ಶಕ್ತಿಶಾಲಿಗಳನ್ನು ಕೆಡವಿಬಿಡುತ್ತಾನೆ.

20 ಮೂಕರನ್ನಾಗಿಸುತ್ತಾನೆ ವಾಕ್ ಚತುರರನ್ನು ಹಿರಿಯರ ಧೀಮಂತಿಕೆಯನ್ನು ತೆಗೆದುಬಿಡುತ್ತಾನೆ.

21 ಅಧಿಪತಿಗಳಿಗೆ ಉಂಟುಮಾಡುತ್ತಾನೆ ಅವಮಾನವನ್ನು ಬಿಚ್ಚಿಬಿಡುತ್ತಾನೆ ಬಲಾಢ್ಯರ ನಡುಕಟ್ಟನ್ನು.

22 ಇರುಳಿನ ಆಳದಲ್ಲಿರುವವುಗಳನ್ನು ಬೆಳಗಿಸುತ್ತಾನೆ ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾನೆ.

23 ರಾಷ್ಟ್ರಗಳನ್ನು ಬೆಳೆಸುತ್ತಾನೆ, ಅಳಿಸುತ್ತಾನೆ ಅವುಗಳನ್ನು ಹರಡುತ್ತಾನೆ, ಹೊರದೂಡುತ್ತಾನೆ.

24 ಭೂಪತಿಗಳನ್ನು ಬುದ್ಧಿಹೀನರನ್ನಾಗಿಸುತ್ತಾನೆ ದಾರಿಕಾಣದ ಅರಣ್ಯದಲಿ ಅಲೆದಾಡಿಸುತ್ತಾನೆ.

25 ಅಂಥವರು ಕತ್ತಲೊಳು ತಡಕಾಡುವರು ಬೆಳಕಿಲ್ಲದೆ ತಡವರಿಸುವರು ಕುಡಿದು ಅಮಲೇರಿದವರಂತೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು