Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 11 - ಕನ್ನಡ ಸತ್ಯವೇದವು C.L. Bible (BSI)

1 ಆಗ ನಾಮಾಥ್ಯನಾದ ಚೋಫರನು ಹೀಗೆಂದ:

2 “ಇಷ್ಟೆಲ್ಲ ಮಾತುಗಳಿಗೆ ತಕ್ಕ ಉತ್ತರ ಬೇಡವೆ? ಮಾತಿನಮಲ್ಲನು ನೀತಿವಂತ ಎನಿಸಿಕೊಳ್ಳುವನೆ?

3 ನಿನ್ನ ವಾಕ್ ಚಮತ್ಕಾರಕ್ಕೆ ಜನ ಬಾಯಿಮುಚ್ಚಿಕೊಳ್ಳಬೇಕೆ? ನಿನ್ನ ಕುಚೋದ್ಯಕ್ಕೆ ನಿನಗಾಗಬೇಡವೆ ನಾಚಿಕೆ?

4 ನೀನು ಹೇಳುವುದೇ ಸತ್ಯವೆಂದು ವಾದಿಸುತ್ತಿರುವೆ ದೇವರ ದೃಷ್ಟಿಯಲ್ಲಿ ನೀನು ಪರಿಶುದ್ಧನು ಎನ್ನುತ್ತಿರುವೆ.

5 ಆದರೆ ದೇವರೇ ಬಾಯ್ದೆರೆದು ನಿನಗೆ ವಿರುದ್ಧ ಮಾತನಾಡಿದರೆ ಒಳಿತು!

6 ಜ್ಞಾನದ ರಹಸ್ಯಗಳನು ದೇವರೇ ನಿನಗೆ ತಿಳಿಸಲಿ ಸುಜ್ಞಾನ ಬಹುಮುಖವಾದುದೆಂದು ಆತನೇ ತೋರಿಸಲಿ ನಿನ್ನ ದೋಷಗಳನ್ನೆಲ್ಲ ಆತ ಲಕ್ಷಿಸಿಲ್ಲ ಎಂಬುದು ನಿನಗೆ ತಿಳಿದಿರಲಿ.

7 ನೀನು ಕಂಡುಕೊಳ್ಳಬಲ್ಲೆಯಾ ದೇವರ ಅಂತರಾಳವನ್ನು? ಗ್ರಹಿಸಿಕೊಳ್ಳಬಲ್ಲೆಯಾ ಸರ್ವಶಕ್ತನ ಇತಿಮಿತಿಯನ್ನು?

8 ಅದು ಆಕಾಶಕ್ಕಿಂತಲೂ ಎತ್ತರ; ನಿನ್ನಿಂದೇನು ಮಾಡಲು ಸಾಧ್ಯ? ಅದು ಪಾತಾಳಕ್ಕಿಂತಲೂ ಆಳ; ನಿನ್ನಿಂದ ಹೇಗೆ ತಿಳಿಯಲು ಸಾಧ್ಯ?

9 ಅದು ಭೂಮಿಗಿಂತಲು ಉದ್ದ ಸಮುದ್ರಕ್ಕಿಂತಲು ಅಗಲ.

10 ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು?

11 ಆತ ದುರುಳರನು ಗುರುತು ಹಚ್ಚುತ್ತಾನೆ ನೆರವಿಲ್ಲದೆ ಅಕ್ರಮವನು ಕಂಡುಹಿಡಿಯುತ್ತಾನೆ.

12 ಕಾಡುಕತ್ತೆಮರಿ ನರಜನ್ಮ ತಾಳಿದಾಗ ಪೆದ್ದ ಮಾನವ ಬುದ್ಧಿವಂತನಾದ!

13 ಸರಿಪಡಿಸಿಕೋ ನಿನ್ನ ಅಂತರಂಗವನ್ನು ದೇವರತ್ತ ಎತ್ತು ನಿನ್ನ ಕರಗಳನ್ನು.

14 ನಿನ್ನ ಕೈಯಿಂದ ದೂರವಿರಲಿ ಅಕ್ರಮ ನಿನ್ನ ಗುಡಾರದಲಿ ನೆಲಸದಿರಲಿ ಅನ್ಯಾಯ.

15 ಆಗ ಮಾತ್ರ ನೀನು ತಲೆಯೆತ್ತಬಲ್ಲೆ ಗೌರವದಿಂದ ಸ್ಥಿರಚಿತ್ತನಾಗಿರಬಲ್ಲೆ ನಿರ್ಭಯದಿಂದ.

16 ಮರೆತುಬಿಡುವೆ ಆಗ ನಿನ್ನ ಕಷ್ಟದುಃಖವನ್ನು ನಿನ್ನ ನೆನಪಿಗೆ ಅದು ಹರಿದುಹೋದ ನೀರು.

17 ಆಗ ನಿನ್ನ ಬಾಳು ನಡುಹಗಲಿಗಿಂತ ಪ್ರಜ್ವಲ ಕತ್ತಲು ಕೂಡ ಪ್ರಾತಃಕಾಲದಂತೆ ಉಜ್ವಲ!

18 ನಂಬಿಕೆಯಿಂದಿರುವುದರಿಂದ ಧೈರ್ಯದಿಂದಿರುವೆ ಸುತ್ತಲು ಸುರಕ್ಷಿತನಾಗಿ ನೆಮ್ಮದಿಯಿಂದ ಮಲಗುವೆ.

19 ಆಗ ನೀನು ವಿಶ್ರಮಿಸುವೆ ಹೆದರಿಕೆಯಿಲ್ಲದೆ ಅನೇಕರಿಗೆ ಬೇಕಾಗುವುದು ನಿನ್ನ ಮುಖಪ್ರಸನ್ನತೆ.

20 ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು