Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 10 - ಕನ್ನಡ ಸತ್ಯವೇದವು C.L. Bible (BSI)

1 “ನನ್ನ ಬಾಳೇ ನನಗೆ ಬೇಸರವಾಗಿದೆ ಎದೆಬಿಚ್ಚಿ ಮೊರೆಯಿಡುತ್ತಿರುವೆ ಕಹಿ ಮನದಿಂದ ನುಡಿಯುತ್ತಿರುವೆ.

2 ನಾನು ದೇವರಿಗೆ ಇಂತೆನ್ನುವೆ: ‘ನನ್ನನ್ನು ನಿರ್ಣಯಿಸಬೇಡ ಅಪರಾಧಿಯೆಂದು ನನ್ನ ಮೇಲೆ ನಿನಗಿರುವ ಆಪಾದನೆಯನು ತಿಳಿಸಿಬಿಡು.

3 ದುರುಳರ ಯೋಜನೆಯನು ನೀನು ಪುರಸ್ಕರಿಸಬಹುದೆ? ನಿನ್ನ ಕೈಕೃತಿಯಾದ ನನ್ನನು ತಿರಸ್ಕರಿಸಿ ಬಾಧಿಸುವುದು ಸರಿಯೆ?

4 ಮನುಜರಂಥ ಕಣ್ಣುಗಳು ನಿನಗಿದೆಯೋ? ಮನುಷ್ಯರಂತೆ ನೀನು ನೋಡುತ್ತೀಯೋ?

5 ನಿನ್ನ ದಿನಗಳು ಮನುಷ್ಯನ ಅಲ್ಪದಿನಗಳಂತಿವೆಯೋ? ನಿನ್ನ ವರುಷಗಳು ಮಾನವನ ವರುಷಗಳಷ್ಟೆಯೋ?

6 ನನ್ನ ತಪ್ಪುಗಳನ್ನು ಹುಡುಕುವ ನಿನಗೆ ನನ್ನ ಪಾಪಗಳನ್ನು ವಿಚಾರಿಸುವ ನಿನಗೆ

7 ನಾನು ಅಪರಾಧಿಯಲ್ಲವೆಂದು ತಿಳಿದಿದೆಯಲ್ಲವೆ? ನಿನ್ನ ಕೈಯಿಂದ ಬಿಡಿಸಬಲ್ಲವರಾರೂ ಇಲ್ಲವಲ್ಲವೆ?

8 ನನ್ನನ್ನು ನಿರ್ಮಿಸಿ ರೂಪಿಸಿದಾತ ನೀನು ಆದರೆ ಈಗ ಮುಗಿಸಿಬಿಡುವಿಯೋ ಮಾನಸಾಂತರಗೊಂಡು?

9 ಜೇಡಿಮಣ್ಣಿನಿಂದ ನನ್ನನ್ನು ಮಾಡಿದೆಯೆಂದು ನೆನೆಸಿಕೊ ಆದರೆ ಈಗ ಮರಳಿ ಮಣ್ಣಾಗುವಂತೆ ಮಾಡುವಿಯೋ?

10 ನನ್ನನ್ನು ಸುರಿಸಿದೆ ಹಾಲಿನಂತೆ ಹೆಪ್ಪುಗಟ್ಟಿಸಿದೆ ಮೊಸರಿನಂತೆ;

11 ನನ್ನನ್ನು ಹೆಣೆದೆ ಎಲುಬು ನರಗಳಿಂದ ನನ್ನನ್ನು ಹೊದಿಸಿದೆ ಮಾಂಸ ಚರ್ಮಗಳಿಂದ;

12 ಜೀವವಿತ್ತು ಅಚಲ ಪ್ರೀತಿ ತೋರಿಸಿದೆ ನಿನ್ನ ಪರಾಮರಿಕೆಯಿಂದ ನನ್ನ ಪ್ರಾಣವನ್ನು ಕಾಪಾಡಿದೆ.

13 ಆದರೂ ನನಗೆ ಚೆನ್ನಾಗಿ ಗೊತ್ತಿತ್ತು; ನಿನ್ನ ಹೃದಯದಲ್ಲಿ ಗುಟ್ಟಾದ ಯೋಜನೆಯೊಂದು ಹುದುಗಿತ್ತು;

14 ನಾನು ತಪ್ಪುಮಾಡಿದರೆ ಅದನು ಕಂಡುಹಿಡಿದು ಆ ದೋಷಕ್ಕೆ ಕ್ಷಮೆ ನೀಡಕೂಡದೆಂದು.

15 ನಾನು ದುರ್ಮಾರ್ಗಿಯಾದರಂತೂ ನನಗಿಲ್ಲ ಗತಿ ಸನ್ಮಾರ್ಗಿಯಾದರೂ ಕೂಡ ನಡೆವಂತಿಲ್ಲ ತಲೆಯೆತ್ತಿ ಏಕೆಂದರೆ ನಾಚಿ ನಿಂತಿರುವೆ, ಯಾತನೆಯ ಹೊರೆಹೊತ್ತಿ.

16 ನಾನು ತಲೆಯೆತ್ತಿದರೆ ಬೇಟೆಯಾಡುವೆ ನನ್ನನ್ನು ಸಿಂಹದಂತೆ ಮತ್ತೆ ನಿನ್ನ ಶಕ್ತಿ ಸಾಮರ್ಥ್ಯವನ್ನು ನನ್ನ ಮೇಲೆ ಪ್ರಯೋಗಿಸುವೆ.

17 ನನಗೆ ವಿರುದ್ಧ ಹೊಸ ಹೊಸ ಸಾಕ್ಷಿಗಳನ್ನು ಬರಮಾಡುವೆ ನನ್ನ ಮೇಲೆ ಹೆಚ್ಚುಹೆಚ್ಚಾಗಿ ಸಿಟ್ಟುಗೊಳ್ಳುವೆ ಅಲೆಅಲೆಯಾಗಿ ಹಗೆಗಳನ್ನು ನನ್ನ ಮೇಲೆ ಧಾಳಿಮಾಡ ಬಿಡುವೆ.

18 ತಾಯ ಗರ್ಭದಿಂದ ನನ್ನನ್ನೇಕೆ ಹೊರತೆಗೆದೆ? ನಾನು ಸತ್ತುಹೋಗಬಹುದಿತ್ತು ಯಾರೂ ನೋಡುವುದಕ್ಕೆ ಮುಂಚೆ!

19 ಆಗ ನಾನು ಇಲ್ಲದವನಾಗುತ್ತಿದ್ದೆ ಗರ್ಭದಿಂದಲೆ ಸಮಾಧಿ ಸೇರುತ್ತಿದ್ದೆ.

20 ನನಗುಳಿದಿರುವ ದಿನಗಳು ಕೆಲವೇ ಕಿಂಚಿತ್ತು ವಿಶ್ರಮಿಸಲು ನನ್ನನು ಬಿಟ್ಟುಬಿಡಬಾರದೆ?’

21 ಮರಳಿ ಹಿಂದಿರುಗಲಾಗದ ನಾಡನು ನಾನು ಸೇರಲಿರುವೆ ಅಂಧಕಾರವೂ ಗಾಢಾಂಧಕಾರವೂ ಅಲ್ಲಿ ತುಂಬಿವೆ.

22 ಕಾರ್ಗತ್ತಲೂ ಗಾಢಾಂಧಕಾರವೂ ಅಲ್ಲಿವೆ ಅರಾಜಕತೆಯೂ ಕಾರಿರುಳೂ ಅದನು ಆವರಿಸಿವೆ ಬೆಳಕೇ ಕಾರಿರುಳಾಗಿ ಆ ನಾಡನ್ನು ಕವಿದಿದೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು