Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋನನು 4 - ಕನ್ನಡ ಸತ್ಯವೇದವು C.L. Bible (BSI)


ಯೋನನ ಕೋಪ - ದೇವರ ಕರುಣೆ

1 ಸರ್ವೇಶ್ವರಸ್ವಾಮಿಯ ವರ್ತನೆಯು ಯೋನನಿಗೆ ಹಿಡಿಸಲಿಲ್ಲ. ಅವನ ಕೋಪ ನೆತ್ತಿಗೇರಿತು.

2 ಆಗ ಅವನು ಹೀಗೆಂದು ಮೊರೆಯಿಟ್ಟನು: “ಸ್ವಾಮೀ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೆನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು - ಎಂದು ಆಗಲೇ ನನಗೆ ತಿಳಿದಿತ್ತು.

3 “ಆದುದರಿಂದ ಸರ್ವೇಶ್ವರಾ, ನನ್ನ ಪ್ರಾಣವನ್ನು ಹಿಂತೆಗೆದುಕೊಳ್ಳಿ. ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು,” ಎಂದು ಮೊರೆಯಿಟ್ಟನು.

4 ಅದಕ್ಕೆ ಸರ್ವೇಶ್ವರ, “ನೀನು ಹೀಗೆ ಸಿಟ್ಟುಗೊಳ್ಳುವುದು ಸರಿಯೇ?” ಎಂದರು.

5 ಆಗ ಯೋನನು ನಗರವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋದನು. ಅಲ್ಲಿ ತನಗಾಗಿ ಒಂದು ಗುಡಿಸಲನ್ನು ಕಟ್ಟಿಕೊಂಡನು. ನಗರಕ್ಕೆ ಏನು ಸಂಭವಿಸುತ್ತದೋ ಎಂಬುದನ್ನು ನೋಡಲು ಅದರ ನೆರಳಿನಲ್ಲಿ ಕುಳಿತನು.

6 ದೇವರಾದ ಸರ್ವೇಶ್ವರ ಆ ಸ್ಥಳದಲ್ಲಿ ಒಂದು ಸೋರೆಬಳ್ಳಿ ಮೊಳೆಯುವಂತೆ ಮಾಡಿದರು. ಅದು ಬೆಳೆದು ತಲೆಗೆ ನೆರಳನ್ನೂ ಮನಸ್ಸಿಗೆ ತಣಿವನ್ನೂ ನೀಡಿತು. ಯೋನನಿಗೆ ಬಹಳ ಸಂತೋಷವಾಯಿತು.

7 ಆದರೆ ಮಾರನೆಯ ದಿನ ಮುಂಜಾನೆ ದೇವರ ಆಜ್ಞಾನುಸಾರ ಆ ಗಿಡಕ್ಕೆ ಹುಳುವೊಂದು ಹೊಡೆಯಿತು. ಆಗ ಗಿಡವು ಒಣಗಿಹೋಯಿತು.

8 ಸೂರ್ಯನು ಏರುತ್ತಿರಲು, ಸರ್ವೇಶ್ವರನ ಚಿತ್ತಾನುಸಾರ ಬಿಸಿಯಾದ ಮೂಡಣ ಗಾಳಿ ಬೀಸಿತು. ಬಿಸಿಲಿನ ತಾಪದಿಂದ ಯೋನನು ಮೂರ್ಛೆಹೋಗುವಂತಾದನು; ಸಾವನ್ನು ಅಪೇಕ್ಷಿಸುತ್ತಾ: “ಬದುಕುವುದಕ್ಕಿಂತ ಸಾಯುವುದೇ ಲೇಸು,” ಎಂದು ಬೇಡಿಕೊಂಡನು.

9 ಅದಕ್ಕೆ ದೇವರು: “ನೀನು ಸೋರೆಗಿಡದ ವಿಷಯದಲ್ಲಿ ಸಿಟ್ಟುಗೊಳ್ಳುವುದು ಸರಿಯೇ?” ಎಂದು ಕೇಳಲು, ಯೋನನು, “ಹೌದು, ಸಾವನ್ನು ಬಯಸುವಷ್ಟು ಸಿಟ್ಟುಗೊಳ್ಳುವುದು ಸರಿಯಲ್ಲವೇ?’ ಎಂದು ಉತ್ತರವಿತ್ತನು.

10 ಆಗ ಸರ್ವೇಶ್ವರ: “ನೀನು ಆ ಗಿಡಕ್ಕಾಗಿ ಶ್ರಮಿಸಲೂ ಇಲ್ಲ, ಅದನ್ನು ಬೆಳೆಸಲೂ ಇಲ್ಲ. ಅದು ತಾನಾಗಿಯೇ ಒಂದು ರಾತ್ರಿಯಲ್ಲಿ ಬೆಳೆಯಿತು. ಒಂದೇ ರಾತ್ರಿಯಲ್ಲಿ ಬಾಡಿಹೋಯಿತು. ಅದಕ್ಕಾಗಿ ಇಷ್ಟೊಂದು ಚಿಂತೆಯೇ?

11 ಹೀಗಿರುವಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚುಮಂದಿ ನಿರಪರಾಧಿಗಳೂ ಅಪಾರ ಪಶುಪ್ರಾಣಿಗಳೂ ಇರುವ ನಿನೆವೆ ಮಹಾನಗರದ ಬಗ್ಗೆ ನಾನು ಇನ್ನೆಷ್ಟು ಚಿಂತೆಪಡಬೇಕು?” ಎಂದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು