Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 9 - ಕನ್ನಡ ಸತ್ಯವೇದವು C.L. Bible (BSI)


ಗಿಬೋನ್ಯರಿಗೂ ಇಸ್ರಯೇಲರಿಗೂ ಆದ ಒಪ್ಪಂದ

1 ಜೋರ್ಡನ್ ಹೊಳೆಯ ಆಚೆ ಬೆಟ್ಟದ ಪ್ರದೇಶ, ಕಣಿವೆ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ, ಹಿತ್ತಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿದರು.

2 ಯೆಹೋಶುವನಿಗೂ ಇಸ್ರಯೇಲರಿಗೂ ವಿರುದ್ಧ ಯುದ್ಧಮಾಡಬೇಕೆಂದು ಒಮ್ಮನಸ್ಸಿನಿಂದ ಕೂಡಿಕೊಂಡರು.

3 ಜೆರಿಕೋದವರನ್ನು ಮತ್ತು ಆಯಿ ಜನರನ್ನು ಯೆಹೋಶುವನು ಸಂಹರಿಸಿದ ಸುದ್ದಿ ಗಿಬ್ಯೋನಿನ ನಿವಾಸಿಗಳಿಗೆ ಮುಟ್ಟಿತು.

4 ಅವರು ಒಂದು ಉಪಾಯವನ್ನು ಹೂಡಿದರು. ಅದೇನೆಂದರೆ - ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿತಟ್ಟುಗಳನ್ನು ಹಾಕಿ ಅವುಗಳ ಮೇಲೆ ತೇಪೆ ಹಾಕಿದ ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿದರು.

5 ಹರಿದುಹೋಗಿದ್ದ ಹಳೆಯ ಕೆರಗಳನ್ನು ಮೆಟ್ಟಿಕೊಂಡರು. ಹಳೆಯ ಬಟ್ಟೆಬರೆಗಳನ್ನು ಹಾಕಿಕೊಂಡರು. ಒಣರೊಟ್ಟಿ ಚೂರುಗಳನ್ನು ಬುತ್ತಿಯಾಗಿ ಕಟ್ಟಿಕೊಂಡರು.

6 ತಾವೂ ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದರು. ಅವನಿಗೂ ಇಸ್ರಯೇಲರಿಗೂ, “ನಾವು ದೂರದೇಶದಿಂದ ಬಂದವರು. ನೀವು ನಮ್ಮ ಸಂಗಡ ಒಂದು ಒಪ್ಪಂದ ಮಾಡಿಕೊಳ್ಳಿ,” ಎಂದು ಕೇಳಿಕೊಂಡರು.

7 ಆಗ ಇಸ್ರಯೇಲರು ಹಿವ್ವಿಯರಾದ ಅವರಿಗೆ, “ಬಹುಶಃ ನೀವು ನಮ್ಮ ನಾಡಿನ ನಿವಾಸಿಗಳೇ ಆಗಿರಬಹುದು. ಆದುದರಿಂದ ನಾವು ನಿಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳುವುದು ಹೇಗೆ?” ಎಂದು ಉತ್ತರಿಸಿದರು.

8 ಅವರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದರು. “ನೀವು ಯಾರು? ಎಲ್ಲಿಯವರು?” ಎಂದು ಆತ ವಿಚಾರಿಸಲು

9 ಅವರು, “ನಿಮ್ಮ ಸೇವಕರಾದ ನಾವು ನಿಮ್ಮ ದೇವರಾದ ಸರ್ವೇಶ್ವರನ ನಾಮ ಮಹತ್ತನ್ನು ಕೇಳಿ ಬಹುದೂರ ದೇಶದಿಂದ ಬಂದಿದ್ದೇವೆ. ಆ ನಿಮ್ಮ ದೇವರು ಈಜಿಪ್ಟಿನಲ್ಲಿ ನಡೆಸಿದ ಮಹತ್ಕಾರ್ಯಗಳ ಸುದ್ದಿಯನ್ನು ನಮ್ಮ ಹಿರಿಯರೂ ದೇಶನಿವಾಸಿಗಳೂ ಕೇಳಿದ್ದಾರೆ.

10 ಹೆಷ್ಬೋನಿನ ಅರಸ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸ ಓಗ್ ಎಂಬ ಈ ಇಬ್ಬರು ಅಮೋರಿಯರಿಗೆ ಆ ದೇವರು ಮಾಡಿದ್ದೆಲ್ಲವನ್ನು ಕೇಳಿದ್ದಾರೆ.

11 ಅವರು ನಮ್ಮನ್ನು ಇಲ್ಲಿಗೆ ಕಳಿಸುತ್ತಾ, ‘ನೀವು ಪ್ರಯಾಣಕ್ಕಾಗಿ ಬುತ್ತಿ ಕಟ್ಟಿಕೊಂಡು ಹೋಗಿ ಇಸ್ರಯೇಲರನ್ನು ಎದುರುಗೊಳ್ಳಿ - ನಾವು ನಿಮ್ಮ ಸೇವಕರು, ನೀವು ನಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳಿ ಎಂದು ವಿನಂತಿಸಿ,’ ಎಂದು ಹೇಳಿದರು.

12 ನಾವು ನಿಮ್ಮನ್ನು ಭೇಟಿಯಾಗುವುದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೆಂದು ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು. ಈಗ ಒಣಗಿ ಚೂರು ಚೂರಾಗಿದೆ ನೋಡಿ.

13 ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ದಲಿಗಳು ಹೊಸದಾಗಿದ್ದವು. ಈಗ ಹರಿದುಹೋಗಿವೆ. ನಮ್ಮ ಬಟ್ಟೆಬರೆಗಳು ಹಾಗೂ ಕೆರಗಳು ದೀರ್ಘ ಪ್ರಯಾಣದಿಂದ ಸವೆದುಹೋಗಿವೆ,” ಎಂದು ವಿವರಿಸಿದರು.

14 ಆಗ ಇಸ್ರಯೇಲರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಸರ್ವೇಶ್ವರ ಸ್ವಾಮಿಯ ಅಪ್ಪಣೆಯನ್ನು ಕೇಳಲಿಲ್ಲ.

15 ಯೆಹೋಶುವ ಅವರೊಡನೆ, “ನಿಮ್ಮ ಜೀವವನ್ನು ಕಾಪಾಡುತ್ತೇವೆ” ಎಂದು ಶಾಂತಿಸಂಧಾನ ಮಾಡಿಕೊಂಡನು. ಸಭೆಯ ನಾಯಕರೂ ಅಂತೆಯೇ ಪ್ರಮಾಣ ಮಾಡಿದರು.

16 ಈ ಒಪ್ಪಂದವಾದ ಮೂರು ದಿನಗಳ ಮೇಲೆ ಅವರು ತಮ್ಮ ನೆರೆಯವರೆಂದೂ ತಮ್ಮ ಮಧ್ಯೆ ವಾಸಿಸುವವರೆಂದೂ ಇಸ್ರಯೇಲರಿಗೆ ಗೊತ್ತಾಯಿತು.

17 ಹೇಗೆಂದರೆ - ಮೂರನೆಯ ದಿನದಂದು ಇಸ್ರಯೇಲರು ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.

18 ಸಭೆಯ ನಾಯಕರು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ಆ ಜನರಿಗೆ ಪ್ರಮಾಣ ಮಾಡಿದ್ದರಿಂದ ಇಸ್ರಯೇಲರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರುತಮ್ಮ ನಾಯಕರಿಗೆ ವಿರುದ್ಧ ಗೊಣಗುಟ್ಟಿದರು.

19 ಆಗ ನಾಯಕರೆಲ್ಲರು ಸಭೆಯ ಎಲ್ಲ ಸದಸ್ಯರಿಗೆ, “ನಾವು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ಅವರಿಗೆ ಪ್ರಮಾಣ ಮಾಡಿದ್ದರಿಂದ ಅವರನ್ನು ಮುಟ್ಟಲಾಗದು.

20 ನಾವು ಇಟ್ಟ ಅಪ್ಪಣೆಯ ನಿಮಿತ್ತ ದೇವರ ಕೋಪ ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದ ಉಳಿಸಬೇಕು. ನಾವು ಹೀಗೆ ಮಾಡೋಣ: ಅವರನ್ನು ಬದುಕಲು ಬಿಟ್ಟುಬಿಡಿ.

21 ಆದರೆ ನಮ್ಮ ಜನರಿಗೆ ಅವರು ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಲಿ,” ಎಂದು ಹೇಳಿದರು. ನಾಯಕರ ಮಾತಿನಂತೆಯೇ ಆಯಿತು.

22 ಯೆಹೋಶುವನು ಗಿಬ್ಯೋನ್ಯರನ್ನು ಕರೆಸಿ, “ನೀವು ನಮ್ಮ ನಡುವೆ ವಾಸಿಸುವವರಾಗಿದ್ದರೂ ಬಹುದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ?

23 ಇದರಿಂದಾಗಿ ನೀವು ಶಾಪಗ್ರಸ್ತರು! ನೀವು ಯಾವಾಗಲೂ ಊಳಿಗದವರಾಗಿದ್ದು, ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಬೇಕು,” ಎಂದನು.

24 ಅವರು ಯೆಹೋಶುವನಿಗೆ, “ನಿಮ್ಮ ದೇವರಾದ ಸರ್ವೇಶ್ವರ ತಮ್ಮ ದಾಸ ಮೋಶೆಗೆ, ‘ನಾನು ನಿಮಗೆ ಈ ದೇಶವನ್ನೆಲ್ಲ ಕೊಡುವಾಗ ನೀವು ಇದರ ನಿವಾಸಿಗಳನ್ನೆಲ್ಲಾ ಸಂಹರಿಸಬೇಕು’ ಎಂದು ಆಜ್ಞಾಪಿಸಿದ್ದಾರೆಂದು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.

25 ಇಗೋ, ಈಗ ನಾವು ನಿಮ್ಮ ಕೈಯಲ್ಲಿ ಇದ್ದೇವೆ. ನಿಮಗೆ ಯಾವುದು ಒಳ್ಳೆಯದು, ನ್ಯಾಯವಾದುದು ಎಂದು ತೋರುತ್ತದೋ ಅದರಂತೆ ನಮಗೆ ಮಾಡಿ,” ಎಂದು ಉತ್ತರಕೊಟ್ಟರು.

26 ಯೆಹೋಶುವನು ತಾನು ಮೊದಲೇ ಹೇಳಿದಂತೆ ಮಾಡಿದನು. ಅವರನ್ನು ಇಸ್ರಯೇಲರ ಕೈಯಿಂದ ಹತರಾಗದಂತೆ ತಪ್ಪಿಸಿದನು.

27 ಸಭೆಗೂ ಸರ್ವೇಶ್ವರ ಆಯ್ದುಕೊಂಡ ಸ್ಥಳದಲ್ಲಿ ಕಟ್ಟಲಾಗುವ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರನ್ನಾಗಿ ಹಾಗೂ ನೀರು ತರುವವರನ್ನಾಗಿ ನೇಮಿಸಿದನು. ಅವರು ಇಂದಿನವರೆಗೂ ಅದೇ ಊಳಿಗದಲ್ಲಿದ್ದಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು