Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 7 - ಕನ್ನಡ ಸತ್ಯವೇದವು C.L. Bible (BSI)


ಆಕಾನನ ಪಾಪ

1 ಆಕಾನನು ಯೆಹೂದ್ಯ ಕುಲದವನು, ಜೆರಹನ ಗೋತ್ರದವನು, ಕರ್ಮೀಯ ಮಗನೂ ಜಬ್ದೀಯ ಕುಟುಂಬದವನೂ ಆಗಿದ್ದನು. ಸರ್ವೇಶ್ವರಸ್ವಾಮಿಗೆ ಮೀಸಲಾಗಿಟ್ಟ ವಸ್ತುಗಳಲ್ಲಿ ಈತ ಕೆಲವನ್ನು ಕದ್ದುಕೊಂಡನು. ಈ ಕಾರಣ ಇಸ್ರಯೇಲರೆಲ್ಲರು ದ್ರೋಹಿಗಳಾದರು. ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು.

2 ಯೆಹೋಶುವನು ಕೆಲವು ಜನರನ್ನು ಕರೆದು, “ನೀವು ಬೇತೇಲಿನ ಪೂರ್ವಕ್ಕೂ ಬೇತಾವೆನಿನ ಸಮೀಪದಲ್ಲೂ ಇರುವ ‘ಆಯಿ’ ಎಂಬ ಪ್ರಾಂತ್ಯಕ್ಕೆ ಹೋಗಿ ಬೇಹುನೋಡಿ ಬನ್ನಿ,” ಎಂದು ಹೇಳಿ ಅವರನ್ನು ಜೆರಿಕೋವಿನಿಂದ ಕಳಿಸಿದನು. ಅವರು ಹೋಗಿ ಆಯಿ ಎಂಬ ಊರನ್ನು ಸಂಚರಿಸಿ ಬೇಹು ನೋಡಿ ಹಿಂದಿರುಗಿ ಬಂದರು.

3 ಬಂದ ಬಳಿಕ ಯೆಹೋಶುವನಿಗೆ, “ಎಲ್ಲಾ ಜನರು ಹೋಗುವುದು ಅವಶ್ಯವಿಲ್ಲ, ಎರಡು ಅಥವಾ ಮೂರು ಸಾವಿರ ಮಂದಿ ಹೋದರೆ ಸಾಕು. ಅವರೇ ಆ ನಗರವನ್ನು ಜಯಿಸಬಹುದು. ಎಲ್ಲರನ್ನು ಕಳುಹಿಸಿ ಸುಮ್ಮನೆ ದಣಿಸುವುದೇಕೆ? ಅಲ್ಲಿ ಸ್ವಲ್ಪಮಂದಿ ಮಾತ್ರ ಇದ್ದಾರೆ,” ಎಂದು ವರದಿ ಮಾಡಿದರು.

4 ಅದರಂತೆಯೇ ಸುಮಾರು ಮೂರುಸಾವಿರ ಮಂದಿ ಹೋದರು. ಆದರೆ ಅವರು ಆಯಿ ಎಂಬ ಊರಿನವರನ್ನು ಎದುರಿಸಲಾಗದೆ ಓಡಿಬರಬೇಕಾಯಿತು.

5 ಆಯಿ ಊರಿನವರು ಅವರನ್ನು ಊರ ಬಾಗಿಲಿನಿಂದ ಕಲ್ಲುಗಣಿಯವರೆಗೂ ಹಿಂದಟ್ಟಿ ಇಳಿನೆಲದಲ್ಲಿ ಅವರನ್ನು ಸೋಲಿಸಿ ಸುಮಾರು ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಇದರಿಂದ ಇಸ್ರಯೇಲರ ಧೈರ್ಯ ಕರಗಿ ನೀರಾಯಿತು.


ಯೆಹೋಶುವನ ಪ್ರಾರ್ಥನೆ

6 ಆಗ ಯೆಹೋಶುವನು ಮತ್ತು ಇಸ್ರಯೇಲರ ಹಿರಿಯರು ದುಃಖ ತಾಳಲಾರದೆ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು ಸಾಯಂಕಾಲದವರೆಗೆ ಸರ್ವೇಶ್ವರನ ಮಂಜೂಷದ ಮುಂದೆ ಅಧೋಮುಖರಾಗಿ ಬಿದ್ದಿದ್ದರು.

7 ಯೆಹೋಶುವನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನೀವು ಈ ಜನರನ್ನು ಜೋರ್ಡನ್ ನದಿ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶಮಾಡಬೇಕೆಂದಿರುವಿರಾ? ನಾವು ಇಷ್ಟೇ ಸಾಕೆಂದು ಜೋರ್ಡನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

8 ಸರ್ವೇಶ್ವರಾ, ಇಸ್ರಯೇಲರು ಶತ್ರುಗಳಿಗೆ ಬೆನ್ನು ತೋರಿಸಿದ್ದಾರಲ್ಲಾ! ನಾನು ಏನು ತಾನೇ ಹೇಳಲಿ!

9 ಕಾನಾನ್ಯರು ಮತ್ತು ನಾಡಿನ ಬೇರೆ ಎಲ್ಲಾ ನಿವಾಸಿಗಳೂ ಇದನ್ನು ಕೇಳಿ ನಮ್ಮನ್ನು ಸುತ್ತುವರೆದು ಲೋಕದಲ್ಲಿ ನಮ್ಮ ಹೆಸರೇ ಉಳಿಯದಂತೆ ಮಾಡುವರು. ಆಗ ನಿಮ್ಮ ಮಹತ್ತಾದ ಹೆಸರನ್ನು ಉಳಿಸಿಕೊಳ್ಳಲು ಏನು ಮಾಡುವಿರಿ?” ಎಂದನು.


ಸರ್ವೇಶ್ವರನ ಉತ್ತರ

10 ಸರ್ವೇಶ್ವರ ಯೆಹೋಶುವನಿಗೆ ಹೀಗೆ ಎಂದರು : “ನೀನು ಅಧೋಮುಖವಾಗಿ ಬಿದ್ದು ಇರುವುದೇಕೆ, ಏಳು.

11 ಇಸ್ರಯೇಲರು ನನ್ನ ಕಟ್ಟಳೆಯನ್ನು ಮೀರಿ ಪಾಪಿಷ್ಠರಾಗಿದ್ದಾರೆ. ಮೀಸಲಾದ ವಸ್ತುಗಳನ್ನು ತೆಗೆದುಕೊಂಡು ಕಳ್ಳರಾಗಿದ್ದಾರೆ. ಅವುಗಳನ್ನು ತಮ್ಮ ಸಲಕರಣೆಗಳಲ್ಲಿ ಬಚ್ಚಿಟ್ಟುಕೊಂಡು ವಂಚಕರಾಗಿದ್ದಾರೆ.

12 ಆದುದರಿಂದಲೇ ಇಸ್ರಯೇಲರು ಶತ್ರುಗಳ ಮುಂದೆ ನಿಲ್ಲಲಾರದೆ ಬೆನ್ನು ತೋರಿಸಿದ್ದಾರೆ. ಅವರು ಶಾಪಗ್ರಸ್ತರೇ ಸರಿ. ಶಾಪಕ್ಕೆ ಕಾರಣವಾದುದನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕುವ ತನಕ ನಾನು ನಿಮ್ಮ ಸಂಗಡ ಬರುವುದಿಲ್ಲ.

13 ನೀನೆದ್ದು ಜನರನ್ನು ಶುದ್ಧೀಕರಿಸು. ನೀನು ಅವರಿಗೆ, ‘ಇಸ್ರಯೇಲರೇ, ನಾಳೆ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ. ನಿಮ್ಮ ಮಧ್ಯೆ ಶಾಪಕ್ಕೆ ಕಾರಣವಾದದ್ದು ಉಂಟು. ಅದನ್ನು ನೀವು ತೆಗೆದು ಹಾಕುವ ತನಕ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ಹೇಳಿದ್ದಾರೆ.

14 ನಾಳೆ ಬೆಳಿಗ್ಗೆ ನೀವು ಕುಲ ಕುಲವಾಗಿ ನನ್ನ ಬಳಿಗೆ ಬನ್ನಿ. ಸರ್ವೇಶ್ವರ ಯಾವ ಕುಲವನ್ನು ಸೂಚಿಸುತ್ತಾರೋ ಆ ಕುಲವು ಗೋತ್ರ ಗೋತ್ರವಾಗಿ, ಯಾವ ಗೋತ್ರವನ್ನು ಸೂಚಿಸುತ್ತಾರೋ ಆ ಗೋತ್ರವು ಕುಟುಂಬ ಕುಟುಂಬವಾಗಿ, ಯಾವ ಕುಟುಂಬವನ್ನು ಸೂಚಿಸುತ್ತಾರೋ ಆ ಕುಟುಂಬದವರು ಒಬ್ಬೊಬ್ಬರಾಗಿ ಬರಬೇಕು.

15 ಯಾವನು ಮೀಸಲಾದ ವಸ್ತುವನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುತ್ತಾನೋ ಅವನು ತನ್ನ ಆಸ್ತಿಪಾಸ್ತಿ ಸಹಿತವಾಗಿ ಸುಡಲ್ಪಡಬೇಕು. ಏಕೆಂದರೆ ಅವನು ಸರ್ವೇಶ್ವರನ ಕಟ್ಟಳೆಯನ್ನು ಮೀರಿ ಇಸ್ರಯೇಲರಲ್ಲಿ ಭ್ರಷ್ಟಾಚಾರವನ್ನು ನಡೆಸಿದ್ದಾನೆ,’ ಎಂದು ಹೇಳು.”

16 ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಯೇಲ್ ಕುಲಗಳನ್ನು ಒಂದೊಂದಾಗಿ ಬರಮಾಡಿದನು. ಯೆಹೂದಕುಲ ಸಿಕ್ಕಿಕೊಂಡಿತು.

17 ಅದರ ಗೋತ್ರಗಳನ್ನು ಕರೆದಾಗ ಜೆರಹನ ಗೋತ್ರ ಸಿಕ್ಕಿಕೊಂಡಿತು. ಆ ಗೋತ್ರದ ಕುಟುಂಬಗಳನ್ನು ಕರೆದಾಗ ಜಬ್ದೀಯ ಕುಟುಂಬ ಸಿಕ್ಕಿಕೊಂಡಿತು.

18 ಆ ಕುಟುಂಬದವರಲ್ಲಿ ಒಬ್ಬನಾದ ಮೇಲೆ ಒಬ್ಬನನ್ನು ಕರೆದಾಗ ಆಕಾನನು ಸಿಕ್ಕಿಕೊಂಡನು. ಯೆಹೂದ ಕುಲದವನೂ ಜೆರಹನ ಗೋತ್ರದವನೂ ಜಬ್ದೀಯ ಕುಟುಂಬದವನೂ ಹಾಗೂ ಕರ್ಮೀಯ ಮಗನೂ ಇವನೇ.

19 ಆಕಾನನಿಗೆ ಯೆಹೋಶುವನು, “ಮಗನೇ, ನೀನು ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಸ್ತುತಿಸಿ ಸ್ತೋತ್ರ ಸಲ್ಲಿಸು. ನೀನು ಮಾಡಿದ್ದನ್ನು ಮುಚ್ಚುಮರೆಯಿಲ್ಲದೆ ನನಗೆ ತಿಳಿಸು, ಎಂದನು

20 ಅವನಿಗೆ ಆಕಾನನು, “ನಾನು ಇಂಥ ಕಾರ್ಯವನ್ನು ಮಾಡಿ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದ್ದು ನಿಜ,

21 ನಾನು ಕೊಳ್ಳೆಯಲ್ಲಿ ಶಿನಾರ್ ನಾಡಿನ ಒಂದು ಉತ್ತಮವಾದ ನಿಲುವಂಗಿಯನ್ನೂ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಅರ್ಧ ಕಿಲೋಗ್ರಾಂ ತೂಕದ ಗಟ್ಟಿಯನ್ನೂ ಕಂಡು ಆಶೆಯಿಂದ ಅವನ್ನು ತೆಗೆದುಕೊಂಡೆ. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ಹೂತಿಟ್ಟಿದ್ದೇನೆ; ಬೆಳ್ಳಿಯು ಅಂಗಿಯ ಕೆಳಗಿದೆ,” ಎಂದು ಉತ್ತರಕೊಟ್ಟನು.

22 ಆಗ ಯೆಹೋಶುವನು ಆಳುಗಳನ್ನು ಕಳುಹಿಸಲು ಅವರು ಓಡಿಹೋಗಿ ಹುಡುಕಿದರು. ಆ ನಿಲುವಂಗಿಯನ್ನು ಗುಡಾರದಲ್ಲಿ ಹೂತಿಡಲಾಗಿತ್ತು. ಅದರ ಕೆಳಗೆ ಬೆಳ್ಳಿ ಇತ್ತು.

23 ಆಳುಗಳು ಅವುಗಳನ್ನು ಗುಡಾರದಿಂದ ತೆಗೆದುಕೊಂಡು ಯೆಹೋಶುವನೂ ಇಸ್ರಯೇಲರೂ ಇದ್ದಲ್ಲಿಗೆ ಬಂದು ಸರ್ವೇಶ್ವರಸ್ವಾಮಿಯ ಮುಂದಿಟ್ಟರು.

24 ಜೆರಹನ ಮಗನಾದ ಆಕಾನನನ್ನು ಹಿಡಿದು ಬೆಳ್ಳಿ, ನಿಲುವಂಗಿ, ಬಂಗಾರದ ಗಟ್ಟಿಯನ್ನು, ಅವನ ಗಂಡುಹೆಣ್ಣು ಮಕ್ಕಳನ್ನು, ದನ, ಕರು, ಕತ್ತೆ, ಆಡುಕುರಿಗಳನ್ನು ಮತ್ತು ಗುಡಾರವನ್ನು ಆಕೋರ್ ಎಂಬ ಕಣಿವೆಗೆ ಒಯ್ಯಲಾಯಿತು. ಯೆಹೋಶುವನೂ ಇಸ್ರಯೇಲರೆಲ್ಲರೂ ಅಲ್ಲಿಗೆ ಬಂದರು.

25 ಯೆಹೋಶುವನು ಆಕಾನನಿಗೆ, “ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ದಿನ ಸರ್ವೇಶ್ವರ ನಿನ್ನ ಮೇಲೆ ಆಪತ್ತು ಬರಮಾಡುವರು,” ಎಂದ ಕೂಡಲೆ ಇಸ್ರಯೇಲರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಕಲ್ಲೆಸೆದದ್ದು ಮಾತ್ರವಲ್ಲ, ಅವನಿಗೆ ಇದ್ದುದೆಲ್ಲವನ್ನೂ ಬೆಂಕಿಯಿಂದ ಸುಟ್ಟರು.

26 ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಗುಡ್ಡೆಯನ್ನು ಹಾಕಿದರು. ಅದು ಇಂದಿನವರೆಗೂ ಇದೆ. ಬಳಿಕ ಸರ್ವೇಶ್ವರನ ಕೋಪಾಗ್ನಿ ತಣ್ಣಗಾಯಿತು. ಈ ಘಟನೆಯಿಂದಾಗಿ ಆ ಸ್ಥಳಕ್ಕೆ ‘ಆಕೋರಿನ ಕಣಿವೆ’ ಎಂಬ ಹೆಸರು ಬಂದಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು