Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 5 - ಕನ್ನಡ ಸತ್ಯವೇದವು C.L. Bible (BSI)


ಇಸ್ರಯೇಲರ ಬಗ್ಗೆ ಇತರರಿಗೆ ಭಯಭೀತಿ

1 ಜೋರ್ಡನಿನ ಪಶ್ಚಿಮದಲ್ಲಿದ್ದ ಅಮೋರಿಯರ ಎಲ್ಲ ಅರಸರು ಮತ್ತು ಸಮುದ್ರದ ಬಳಿಯಿದ್ದ ಸರ್ವ ಕಾನಾನ್ ರಾಜರು ಸರ್ವೇಶ್ವರ ಸ್ವಾಮಿ ಇಸ್ರಯೇಲರ ಕಣ್ಮುಂದೆಯೇ ಜೋರ್ಡನನ್ನು ಬತ್ತಿಸಿ ಆ ನದಿ ದಾಟಿಸಿದರೆಂದು ಕೇಳಿದರು. ಆಗ ಅವರ ಎದೆ ಒಡೆದುಕೋಯಿತು. ಇಸ್ರಯೇಲರ ಮುಂದೆ ಅವರಿಗೆ ಧೈರ್ಯವಿಲ್ಲದೆ ಹೋಯಿತು.


ಗಿಲ್ಗಾಲಿನಲ್ಲಿ ಇಸ್ರಯೇಲರಿಗೆ ಮಾಡಲಾದ ಸುನ್ನತಿ

2 ಆಗ ಸರ್ವೇಶ್ವರ ಯೆಹೋಶುವನಿಗೆ, “ನೀನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಇಸ್ರಯೇಲರಿಗೆ ಸುನ್ನತಿ ಮಾಡು,” ಎಂದು ಹೇಳಿದರು.

3 ಅಂತೆಯೇ ಅವನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಸುನ್ನತಿ ಗುಡ್ಡದಲ್ಲಿ ಇಸ್ರಯೇಲರಿಗೆ ಸುನ್ನತಿ ಮಾಡಿದನು.

4 ಹೀಗೆ ಯೆಹೋಶುವನು ಸುನ್ನತಿ ಮಾಡುವುದಕ್ಕೆ ಕಾರಣ ಏನೆಂದರೆ - ಈಜಿಪ್ಟಿನಿಂದ ಹೊರಟುಬಂದ ಗಂಡಸರಲ್ಲಿ ಯುದ್ಧವೀರರೆಲ್ಲರು ಆ ದೇಶವನ್ನು ಬಿಟ್ಟು, ಅನಂತರ ಅರಣ್ಯದಲ್ಲಿ ಸತ್ತುಹೋದರು.

5 ಅಲ್ಲಿಂದ ಬಂದ ಗಂಡಸರೆಲ್ಲರಿಗೆ ಸುನ್ನತಿ ಆಗಿತ್ತು. ಈಜಿಪ್ಟನ್ನು ಬಿಟ್ಟ ಅನಂತರ ಅರಣ್ಯ ಪ್ರಯಾಣದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿಯಾಗಿರಲಿಲ್ಲ.

6 ಈಜಿಪ್ಟಿನಿಂದ ಬಂದ ಇಸ್ರಯೇಲರು ಸರ್ವೇಶ್ವರನ ಮಾತನ್ನು ಕೇಳದೆಹೋದುದರಿಂದ ಅವರು, ತಮ್ಮ ಯೋಧರೆಲ್ಲರು ಸಂಹಾರವಾಗುವ ತನಕ ನಾಲ್ವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಸರ್ವೇಶ್ವರ, ತಾವು ಅವರ ಪೂರ್ವಿಕರಿಗೆ ವಾಗ್ದಾನಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟಿದ್ದರು.

7 ಅವರಿಗೆ ಬದಲಾಗಿ ಹುಟ್ಟಿದ ಅವರ ಗಂಡುಮಕ್ಕಳಿಗೆ ಯೆಹೋಶುವ ಸುನ್ನತಿ ಮಾಡಿದನು. ದಾರಿಯಲ್ಲಿ ಯಾರೂ ಅವರಿಗೆ ಸುನ್ನತಿ ಮಾಡಿರಲಿಲ್ಲ. ಆದ್ದರಿಂದ ಅವರು ಸುನ್ನತಿಯಿಲ್ಲದವರಾಗಿದ್ದರು.

8 ಸುನ್ನತಿಯಾದ ಮೇಲೆ ವಾಸಿಯಾಗುವವರೆಗೆ ಜನರೆಲ್ಲರು ಪಾಳೆಯದ ತಮ್ಮ ತಮ್ಮ ಸ್ಥಳಗಳಲ್ಲೇ ಇದ್ದರು.

9 ಸರ್ವೇಶ್ವರ ಸ್ವಾಮಿ ಯೆಹೋಶುವನಿಗೆ, “ನಾನು ಈಜಿಪ್ಟಿನ ಕಳಂಕವನ್ನು ಈ ದಿನ ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ,” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿಡಲಾಗಿದೆ.

10 ಇಸ್ರಯೇಲರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ಜೆರಿಕೋವಿನ ಬಯಲಿನಲ್ಲಿ ಪಾಸ್ಕಹಬ್ಬವನ್ನಾಚರಿಸಿದರು.

11 ಮಾರನೆಯ ದಿನದಿಂದ ಕಾನಾನಿನ ಧಾನ್ಯವನ್ನು ಊಟಕ್ಕೆ ಬಳಸಲು ತೊಡಗಿದರು - ಹುಳಿಯಿಲ್ಲದ ರೊಟ್ಟಿಗಳನ್ನು ಮತ್ತು ಸುಟ್ಟ ತೆನೆಗಳನ್ನು ತಿನ್ನತೊಡಗಿದರು .

12 ಆ ನಾಡಿನ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ಮತ್ತೆ ಸಿಕ್ಕಲೇ ಇಲ್ಲ. ಇಸ್ರಯೇಲರು ಆ ವರ್ಷವೆಲ್ಲ ಕಾನಾನ್ ನಾಡಿನ ಉತ್ಪನ್ನವನ್ನೇ ಅನುಭವಿಸಿದರು.


ಯೆಹೋಶುವನಿಗಾದ ದಿವ್ಯದರ್ಶನ

13 ಯೆಹೋಶುವನು ಜೆರಿಕೋವಿಗೆ ಹತ್ತಿರವಿದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಇಗೋ, ಒಬ್ಬ ವ್ಯಕ್ತಿ ಕಾಣಿಸಿಕೊಂಡನು. ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ನಿಂತಿದ್ದನು. ಯೆಹೋಶುವ ಅವನನ್ನು ಸಮೀಪಿಸಿ, “ನೀನು ನಮ್ಮವನೋ ಅಥವಾ ಶತ್ರು ಕಡೆಯವನೋ?” ಎಂದು ಕೇಳಿದನು.

14 ಆಗ ಆ ವ್ಯಕ್ತಿ, “ನಾನು ಅಂಥವನಲ್ಲ; ನಾನು ಸರ್ವೇಶ್ವರನ ಸೇನಾಪತಿ. ಇದೀಗಲೆ ಬಂದವನು,’ ಎಂದು ಉತ್ತರಿಸಿದನು. ಕೂಡಲೆ ಯೆಹೋಶುವ ಅವನಿಗೆ ಸಾಷ್ಟಾಂಗವೆರಗಿ, “ಒಡೆಯಾ, ತಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಎಂದನು.

15 ಆಗ ಸರ್ವೇಶ್ವರನ ಸೇನಾಪತಿ, “ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು,” ಎಂದು ಹೇಳಿದನು. ಯೆಹೋಶುವ ಅಂತೆಯೇ ಮಾಡಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು