Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 23 - ಕನ್ನಡ ಸತ್ಯವೇದವು C.L. Bible (BSI)


ಯೆಹೋಶುವನಿಂದ ಬೀಳ್ಕೊಡುಗೆಯ ಬುದ್ಧಿವಾದ

1 ಸರ್ವೇಶ್ವರಸ್ವಾಮಿ ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಯೇಲರಿಗೆ ನೆಮ್ಮದಿಯಿತ್ತರು. ಬಹಳ ದಿನಗಳಾದ ತರುವಾಯ ಯೆಹೋಶುವ ಹಣ್ಣುಹಣ್ಣು ಮುದುಕನಾದ.

2 ಆತ ಇಸ್ರಯೇಲರೆಲ್ಲರನ್ನು, ಅವರ ಹಿರಿಯರನ್ನು, ಮುಖ್ಯಸ್ಥರನ್ನು, ನ್ಯಾಯಾಧಿಪತಿಗಳನ್ನು ಹಾಗೂ ಅಧಿಕಾರಿಗಳನ್ನು ತನ್ನ ಬಳಿಗೆ ಕರೆಯಿಸಿದನು. ಅವರಿಗೆ, “ನಾನು ಮುಪ್ಪಿನ ಮುದುಕನಾದೆ.

3 ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪರವಾಗಿದ್ದು, ಈ ಜನಾಂಗಗಳಿಗೆ ಮಾಡಿದ್ದೆಲ್ಲವನ್ನು ನೀವು ಕಣ್ಣಾರೆ ನೋಡಿದ್ದೀರಿ. ಹೌದು, ನಿಮ್ಮ ಪರವಾಗಿ ಯುದ್ಧಮಾಡಿದಾತ ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ.

4 ನೋಡಿ, ಜೋರ್ಡನಿನಿಂದ ಪಶ್ಚಿಮ ಮಹಾ ಸಮುದ್ರದವರೆಗೂ ಇರುವ ಜನಾಂಗಗಳಲ್ಲಿ ಸತ್ತವರ ಹಾಗೂ ಉಳಿದವರ ನಾಡನ್ನು ನಿಮಗೆ ಸೊತ್ತಾಗಿ ಕೊಟ್ಟಿದ್ದೇನೆ,

5 ನಿಮ್ಮ ದೇವರಾದ ಸರ್ವೇಶ್ವರ ತಾವೇ ಉಳಿದವರನ್ನು ನಿಮ್ಮ ಕಣ್ಮುಂದೆ ಹೊರಡಿಸಿಬಿಡುವರು. ಅವರ ವಾಗ್ದಾನದಂತೆ ಆ ಜನರ ನಾಡನ್ನು ನೀವು ವಶಪಡಿಸಿಕೊಳ್ಳುವಿರಿ.

6 ಮೋಶೆಯ ಧರ್ಮಶಾಸ್ತ್ರವನ್ನೂ ಎಲ್ಲಾ ವಿಧಿಗಳನ್ನೂ ಕೈಗೊಳ್ಳುವುದರಲ್ಲಿ ಸ್ಥಿರಚಿತ್ತದಿಂದಿರಿ. ಎಡಕ್ಕಾಗಲಿ ಬಲಕ್ಕಾಗಲಿ ಓರೆಯಾಗಬೇಡಿ.

7 ಉಳಿದಿರುವ ಈ ಜನಾಂಗಗಳ ಜೊತೆ ಸೇರಿಕೊಳ್ಳಬೇಡಿ. ಅವರ ದೇವತೆಗಳ ಹೆಸರು ಹೇಳಿ ಆರಾಧಿಸಬಾರದು, ಪ್ರಮಾಣ ಮಾಡಬಾರದು, ಅವುಗಳನ್ನು ಪೂಜಿಸಬಾರದು. ಅವುಗಳಿಗೆ ಸೇವೆ ಮಾಡಬಾರದು.

8 ಈವರೆಗೆ ಹೇಗೋ ಹಾಗೆಯೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಸರ್ವೇಶ್ವರನನ್ನೇ ಅಂಟಿಕೊಂಡಿರಿ.

9 ಸರ್ವೇಶ್ವರ ಮಹಾಪರಾಕ್ರಮಿಗಳಾದ ಜನಾಂಗಗಳನ್ನು ನಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾರೆ. ನಮ್ಮನ್ನು ಪ್ರತಿಭಟಿಸಿ ನಿಂತವನು ಒಬ್ಬನೂ ಇಲ್ಲ.

10 ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನದಂತೆ ನಿಮ್ಮ ಪರವಾಗಿ ಯುದ್ಧಮಾಡಿದರು. ಆದ್ದರಿಂದಲೇ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವಷ್ಟು ಶಕ್ತನಾದ.

11 ಇಂತಿರಲು ಜಾಗರೂಕತೆಯಿಂದಿರಿ, ನಿಮ್ಮ ಪ್ರಾಣದಂತೆ ದೇವರಾದ ಸರ್ವೇಶ್ವರನನ್ನೇ ಪ್ರೀತಿಸಿರಿ.

12 ದೇವರಿಗೆ ವಿಮುಖರಾಗಿ, ನಿಮ್ಮ ಮಧ್ಯೆ ಉಳಿದಿರುವ ಈ ಜನಾಂಗಗಳೊಡನೆ ಕೊಟ್ಟು ತಂದು ಮಿಶ್ರವಾಗಬೇಡಿ.

13 ಮಿಶ್ರವಾದರೆ ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಮಧ್ಯೆಯಿಂದ ಹೊರಡಿಸುವುದೇ ಇಲ್ಲವೆಂಬುದು ನಿಮಗೆ ತಿಳಿದಿರಲಿ. ಆ ಜನರೇ ನಿಮಗೆ ಉರುಳೂ ಬೋನೂ ಆಗುವರು; ಪಕ್ಕೆಗೆ ಬಡಿಯುವ ಕೊರಡಾಗಿಯೂ ಇರಿಯುವ ಶೂಲವಾಗಿಯೂ ಕಣ್ಣಿಗೆ ಚುಚ್ಚುವ ಮುಳ್ಳಾಗಿಯೂ ಮಾರ್ಪಡುವರು. ಕಡೆಗೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟ ಈ ಚೆಲುವ ನಾಡಲ್ಲಿ ನೀವೇ ಇಲ್ಲದಂತಾಗುವಿರಿ.

14 ಈಗ ನಾನು, ಭೂನಿವಾಸಿಗಳೆಲ್ಲರು ಹಿಡಿಯುವ ಹಾದಿಯನ್ನು ಹಿಡಿಯಬೆಕಾಗಿದೆ. ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ. ಎಲ್ಲವೂ ತಪ್ಪದೆ ನೆರವೇರಿವೆ ಎಂಬುದು ನಿಮಗೆ ಮನದಟ್ಟಾಗಿರಲಿ.

15 ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನಕ್ಕನುಸಾರ ಈಗ ನಿಮಗೆ ಎಲ್ಲಾ ವಿಧದ ಒಳಿತನ್ನೂ ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಎಲ್ಲಾ ತರದ ಕೇಡುಗಳನ್ನು ಬರಮಾಡಿ ತಾವು ಕೊಟ್ಟ ಈ ಚೆಲುವಾದ ನಾಡಿನಿಂದ ನಿಮ್ಮನ್ನು ನಿರ್ಮೂಲ ಮಾಡುವರು.

16 ದೇವರಾದ ಸರ್ವೇಶ್ವರನ ನಿಬಂಧನೆಯನ್ನು ನೀವು ಮೀರಿ ಅನ್ಯದೇವತೆಗಳಿಗೆ ಸೇವೆಸಲ್ಲಿಸಿ, ಅಡ್ಡಬಿದ್ದರೆ, ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಎರಗುವುದು; ಅವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನಿಂದ ಹೊರದೂಡಲ್ಪಟ್ಟು ಬೇಗನೆ ನಾಶವಾಗುವಿರಿ,” ಎಂದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು