ಯೆಹೋಶುವ 20 - ಕನ್ನಡ ಸತ್ಯವೇದವು C.L. Bible (BSI)ಆಶ್ರಯ ನಗರಗಳ ಸ್ಥಾಪನೆ 1 ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೀನು ಇಸ್ರಯೇಲರಿಗೆ 2 ‘ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿರುವಂತೆ ನೀವು ಆಶ್ರಯ ನಗರಗಳನ್ನು ಗೊತ್ತುಮಾಡಿಕೊಳ್ಳಿ; 3 ನಿಮ್ಮಲ್ಲಿ ಯಾರಾದರು ಅರಿಯದೆ ಅಕಸ್ಮಾತ್ತಾಗಿ ನರಹತ್ಯೆ ಮಾಡಿದ್ದೇ ಆದರೆ ಅಂಥವನು ಅಲ್ಲಿಗೆ ಓಡಿಹೋಗಲಿ. ಹತನಾದವನ ಹತ್ತಿರದ ಬಂಧು ಮುಯ್ಯಿತೀರಿಸದಂತೆ ಆ ನಗರಗಳು ನಿಮಗೆ ಆಶ್ರಯ ಸ್ಥಾನವಾಗಿರಲಿ. 4 ಅಂಥ ನಗರಕ್ಕೆ ಓಡಿಹೋದವನು ಮೊದಲು ಊರಬಾಗಿಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಗೆ ಸೇರಿಸಿಕೊಳ್ಳಲಿ; ವಾಸಕ್ಕೆ ಸ್ಥಳಕೊಡಲಿ. 5 ಹತನಾದವನ ಹತ್ತಿರದ ಬಂಧು, ಕೊಂದವನನ್ನು ಹಿಂದಟ್ಟಿಕೊಂಡು ಅಲ್ಲಿಗೆ ಬಂದರೆ, ಅವರು ಅವನನ್ನು ಅವನ ಕೈಗೆ ಒಪ್ಪಿಸಬಾರದು. ಏಕೆಂದರೆ ಅವನು ನೆರೆಯವನನ್ನು ಕೊಂದದ್ದು ಅಕಸ್ಮಾತ್ತಾಗಿ, ಹಳೆಯ ದ್ವೇಷದಿಂದೇನೂ ಅಲ್ಲ. 6 ಅಂಥವನನ್ನು ಒಂದು ಸಭೆಸೇರಿಸಿ ವಿಚಾರಿಸಬೇಕು. ಅವನು ಆಗಿನ ಪ್ರಧಾನ ಯಾಜಕನ ಜೀವಮಾನವೆಲ್ಲಾ ಅದೇ ನಗರದಲ್ಲಿರಬೇಕು. ಆಮೇಲೆ ತಾನು ಬಿಟ್ಟುಬಂದ ಊರಿಗೆ, ಮನೆಗೆ ಹಿಂದಿರುಗಬಹುದು’ ಎಂದು ತಿಳಿಸು,” ಎಂದರು. 7 ಅಂತೆಯೇ ಇಸ್ರಯೆಲರು ನಫ್ತಾಲಿ ಕುಲದವರ ಮಲೆನಾಡಿನ ಪ್ರದೇಶವಾದ ಗಲಿಲೇಯ ಪ್ರಾಂತ್ಯದಲ್ಲಿನ ಕೆದೆಷ್, ಎಫ್ರಯಿಮ್ ಮಲೆನಾಡಿನ ಪ್ರದೇಶದಲ್ಲಿನ ಶೆಕೆಮ್ ಹಾಗೂ ಯೂದವಂಶದ ಮಲೆನಾಡಿನ ಹೆಬ್ರೋನ್ ಎನಿಸಿಕೊಳ್ಳುವ ಕಿರ್ಯತರ್ಬ ಎಂಬ ನಗರಗಳನ್ನು ನೇಮಿಸಿದರು. 8 ಇವುಗಳನ್ನು ಮಾತ್ರವಲ್ಲ ಜೆರಿಕೋವಿನ ಪೂರ್ವದಲ್ಲಿರುವ ಜೋರ್ಡನಿನ ಆಚೆಯಲ್ಲಿ ರೂಬೇನ್ಯರ ಬೆಟ್ಟದ ಮೇಲಿನ ಮರುಭೂಮಿಯಲ್ಲಿರುವ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದ ರಾಮೋತ್, ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್ ಎಂಬ ನಗರಗಳನ್ನು ನೇಮಿಸಿದರು. 9 ಇಸ್ರಯೇಲರೆಲ್ಲರಿಗೂ ಹಾಗೂ ಅವರ ನಡುವೆ ವಾಸಮಾಡುತ್ತಿದ್ದ ಹೊರನಾಡಿನವರಿಗೂ ಇವು ಆಶ್ರಯ ನಗರಗಳಾಗಿ ನೇಮಕ ಆಗಿದ್ದವು. ಅಕಸ್ಮಾತ್ತಾಗಿ ಬೇರೊಬ್ಬನನ್ನು ಕೊಂದವನು ಓಡಿಹೋಗಿ ಹತನಾದವನ ಹತ್ತಿರ ಬಂಧುವಿನಿಂದ ತಲೆ ತಪ್ಪಿಸಿಕೊಳ್ಳಬಹುದಿತ್ತು. ನ್ಯಾಯ ಸಭೆಯ ಮುಂದೆ ನಿಲ್ಲುವ ತನಕ ಅಲ್ಲೇ ಇರಬಹುದಿತ್ತು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India