Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 2 - ಕನ್ನಡ ಸತ್ಯವೇದವು C.L. Bible (BSI)


ಜೆರಿಕೋವಿನಲ್ಲಿ ಗೂಢಚಾರರು

1 ನೂನನ ಮಗನಾದ ಯೆಹೋಶುವನು ಕಾನಾನ್ ನಾಡನ್ನೂ ಜೆರಿಕೋ ನಗರವನ್ನೂ ನೋಡುವುದಕ್ಕೋಸ್ಕರ ಶಿಟ್ಟೀಮಿನಿಂದ ಇಬ್ಬರು ಗೂಢಚಾರರನ್ನು ಕಳುಹಿಸಿದನು. ಅವರು ಹೊರಟುಹೋಗಿ ರಾಹಾಬಳೆಂಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು.

2 ಇಸ್ರಯೇಲಿನ ಕೆಲವು ಜನರು ನಮ್ಮ ನಾಡಿನಲ್ಲಿ ಸಂಚರಿಸಿ ನೋಡಲು ಈ ರಾತ್ರಿ ನಗರಕ್ಕೆ ಬಂದಿದ್ದಾರೆಂದು ಜೆರಿಕೋವಿನ ಅರಸನಿಗೆ ತಿಳಿಸಲಾಯಿತು.

3 ಅವನು ರಾಹಾಬಳಿಗೆ, “ನಿನ್ನ ಮನೆಯಲ್ಲಿ ಇಳಿದುಕೊಂಡಿರುವ ಆ ವ್ಯಕ್ತಿಗಳನ್ನು ತಂದೊಪ್ಪಿಸು. ಅವರು ನಾಡನ್ನೆಲ್ಲಾ ಸಂಚರಿಸಿ ಬೇಹು ಮಾಡಲು ಬಂದವರು” ಎಂದು ಹೇಳಿ ಕಳಿಸಿದನು.

4 ವೇಶ್ಯೆ ಆ ಇಬ್ಬರನ್ನು ಅಡಗಿಸಿಟ್ಟು, ಕೇಳಲು ಬಂದವರಿಗೆ, “ಆ ವ್ಯಕ್ತಿಗಳು ನನ್ನ ಬಳಿಗೆ ಬಂದದ್ದೇನೋ ನಿಜ. ಅವರು ಎಲ್ಲಿಯವರೆಂದು ನನಗೆ ತಿಳಿಯದೆ ಹೋಗಿದೆ.

5 ಊರಬಾಗಿಲನ್ನು ಮುಚ್ಚುವ ಹೊತ್ತಿಗೆ ಕತ್ತಲಲ್ಲಿ ಹೊರಟುಹೋದರು. ಎಲ್ಲಿಗೆ ಹೋದರೆಂಬುದೂ ನನಗೆ ಗೊತ್ತಿಲ್ಲ. ಬೇಗನೆ ಅವರ ಬೆನ್ನಟ್ಟಿರಿ. ಅವರು ನಿಮಗೆ ಸಿಕ್ಕುವರು,” ಎಂದು ಹೇಳಿದಳು.

6 ಆದರೆ ಅವಳು ಆ ವ್ಯಕ್ತಿಗಳನ್ನು ಮಾಳಿಗೆಯ ಮೇಲೆ ಹತ್ತಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನ ಹೊರೆಗಳೊಳಗೆ ಬಚ್ಚಿಟ್ಟಿದ್ದಳು.

7 ಅರಸನ ಆಳುಗಳು ಜೋರ್ಡನ್ ದಾರಿ ಹಿಡಿದು ಹೋಗಿ ನದಿದಾಟುವ ಸ್ಥಳದವರೆಗೂ ಹುಡುಕಿದರು. ಹುಡುಕುವವರು ಹೊರಟಕೂಡಲೆ ಊರಬಾಗಿಲನ್ನು ಮುಚ್ಚಲಾಯಿತು.


ರಾಹಾಬಳಿಗೂ ಗೂಢಚಾರರಿಗೂ ಆದ ಒಪ್ಪಂದ

8 ಆ ಗೂಢಚಾರರು ಮಲಗಿಕೊಳ್ಳುವ ಮೊದಲೇ ಆಕೆ ಮಾಳಿಗೆ ಹತ್ತಿ, ಅವರ ಬಳಿಗೆ ಬಂದು,

9 “ಸರ್ವೇಶ್ವರ ಈ ನಾಡನ್ನು ನಿಮಗೆ ಕೊಟ್ಟಿದ್ದಾರೆಂದು ನಾನು ಬಲ್ಲೆ; ನಿಮ್ಮ ವಿಷಯದಲ್ಲಿ ನಮಗೆ ಮಹಾಭೀತಿ ಉಂಟಾಗಿದೆ. ನಾಡಿನ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆ.

10 ನೀವು ಈಜಿಪ್ಟಿನಿಂದ ಹೊರಟುಬಂದ ಮೇಲೆ ಸರ್ವೇಶ್ವರ ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟರೆಂದು ಕೇಳಿದ್ದೇವೆ. ಅಲ್ಲದೆ ಜೋರ್ಡನ್ನಿನ ಆಚೆ ಇರುವ ಅಮೋರಿಯರ ಅರಸರಿಬ್ಬರನ್ನು ಅಂದರೆ, ಸೀಹೋನ್ ಮತ್ತು ಓಗ್ ಎಂಬವರನ್ನು ನೀವು ನಾಶಮಾಡಿದಿರೆಂದು ಕೇಳಿದ್ದೇವೆ.

11 ಇದನ್ನೆಲ್ಲಾ ಕೇಳಿ ನಮ್ಮ ಎದೆ ಒಡೆದುಹೋಗಿದೆ. ನಿಮ್ಮನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ. ನಿಮ್ಮ ದೇವರಾದ ಸರ್ವೇಶ್ವರರೊಬ್ಬರೇ ಪರಲೋಕದಲ್ಲೂ ಭೂಲೋಕದಲ್ಲೂ ದೇವರು.

12 ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆ ತೋರಿದಂತೆ ನೀವೂ ನನ್ನ ತಂದೆಯ ಮನೆಯವರಿಗೆ ದಯೆ ತೋರಬೇಕು.

13 ನನ್ನ ತಂದೆ ತಾಯಿಗಳನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನೂ ನಾಶಮಾಡದೆ ಉಳಿಸುವುದಾಗಿ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದಳು

14 ಆಗ ಆ ಗೂಢಚಾರರು, “ನೀವು ನಮ್ಮ ಸಂಗತಿಯನ್ನು ಹೊರಪಡಿಸದಿದ್ದರೆ, ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುತ್ತೇವೆ. ಸರ್ವೇಶ್ವರಸ್ವಾಮಿ ಈ ನಾಡನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ಕೊಟ್ಟ ಮಾತಿನಂತೆ ದಯೆಯಿಂದ ನಡೆದುಕೊಳ್ಳುತ್ತೇವೆ,” ಎಂದರು.

15 ಅವಳ ಮನೆ ಊರಗೋಡೆಯ ಮೇಲಿತ್ತು. ಆದ್ದರಿಂದ ಅವರನ್ನು ಹಗ್ಗದ ಮೂಲಕ ಕಿಟಕಿಯಿಂದ ಕೆಳಕ್ಕೆ ಇಳಿಸಿದಳು.

16 ಅಲ್ಲದೆ ಅವರಿಗೆ, “ನಿಮ್ಮನ್ನು ಹಿಂದಟ್ಟುವವರಿಗೆ ನೀವು ಸಿಕ್ಕದಂತೆ ಆ ಬೆಟ್ಟಕ್ಕೆ ಓಡಿಹೋಗಿ, ಮೂರು ದಿನ ಅವಿತುಕೊಂಡಿರಿ. ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿ,” ಎಂದಳು.

17 ಆಗ ಅವರು ಆಕೆಗೆ, “ನೀನು ನಮ್ಮಿಂದ ಮಾಡಿಸಿದ ಪ್ರಮಾಣದಂತೆ ನಡೆದುಕೊಳ್ಳುತ್ತೇವೆ.

18 ನಾವು ಈ ನಾಡನ್ನು ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಕಿಗೆ ಈ ಕೆಂಪುದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನು, ಅಣ್ಣತಮ್ಮಂದಿರನ್ನು, ಎಲ್ಲಾ ಬಂಧುಬಳಗದವರನ್ನು ನಿನ್ನ ಮನೆಯಲ್ಲೇ ಸೇರಿಸಿಕೊಂಡಿರಬೇಕು.

19 ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು ಆಗುವರು. ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈಮಾಡಿದ್ದಾದರೆ ಆ ರಕ್ತಾಪರಾಧ ನಮ್ಮ ತಲೆಯ ಮೇಲಿರುವುದು.

20 ನೀನೇನಾದರೂ ಈ ನಮ್ಮ ವಿಷಯವನ್ನು ಬಹಿರಂಗಪಡಿಸಿದ್ದೇ ಆದರೆ ನಮ್ಮಿಂದ ಮಾಡಿಸಿದ ಪ್ರಮಾಣದಿಂದ ನಾವು ಬಿಡುಗಡೆಯಾಗಿರುತ್ತೇವೆ,” ಎಂದು ಹೇಳಿದರು.

21 ಅದಕ್ಕವಳು, “ನಿಮ್ಮ ಮಾತಿನಂತೆಯೇ ಆಗಲಿ,” ಎಂದು ಹೇಳಿ ಅವರನ್ನು ಕಳುಹಿಸಿದಳು. ಅವರು ಹೊರಟುಹೋದ ಮೇಲೆ ಆ ಕೆಂಪುದಾರವನ್ನು ಕಿಟಕಿಗೆ ಕಟ್ಟಿದಳು.

22 ಗೂಢಚಾರರು ಆ ಬೆಟ್ಟವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವ ತನಕ ಮೂರು ದಿನ ಅಲ್ಲೇ ತಂಗಿದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು.

23 ಆಗ ಅವರಿಬ್ಬರೂ ಬೆಟ್ಟದಿಂದಿಳಿದು, ನದಿದಾಟಿ, ನೂನನ ಮಗ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು.

24 ಇದಲ್ಲದೆ, ಅವರು ಯೆಹೋಶುವನಿಗೆ, “ಸರ್ವೇಶ್ವರಸ್ವಾಮಿ ನಿಜವಾಗಿ ಈ ನಾಡನ್ನೆಲ್ಲಾ ನಮಗೆ ಕೊಟ್ಟಿದ್ದಾರೆ. ಅದರ ನಿವಾಸಿಗಳೆಲ್ಲ ನಮ್ಮನ್ನು ಕಂಡು ನಡುಗುತ್ತ ಇದ್ದಾರೆ,” ಎಂದು ತಿಳಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು