Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 18 - ಕನ್ನಡ ಸತ್ಯವೇದವು C.L. Bible (BSI)


ಉಳಿದ ಪ್ರದೇಶಗಳ ಪಟ್ಟಿ

1 ನಾಡೆಲ್ಲವು ತಮ್ಮ ವಶವಾದ ಮೇಲೆ ಇಸ್ರಯೇಲ್ ಜನಾಂಗವೆಲ್ಲ ಶೀಲೋವಿನಲ್ಲಿ ಕೂಡಿ ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.

2 ಇಸ್ರಯೇಲರಲ್ಲಿ ಇನ್ನೂ ಏಳು ಕುಲಗಳಿಗೆ ಪಾಲು ಸಿಕ್ಕಿರಲಿಲ್ಲ.

3 ಆದುದರಿಂದ ಯೆಹೋಶುವ ಅವರಿಗೆ, “ನಿಮ್ಮ ಪೂರ್ವಜರ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟ ನಾಡನ್ನು ಸ್ವಾಧೀನ ಮಾಡಿಕೊಳ್ಳಲು ಇನ್ನೆಷ್ಟು ತಡ ಮಾಡುತ್ತಿರುವಿರಿ?

4 ಪ್ರತಿಯೊಂದು ಕುಲದಿಂದ ಮೂರುಮೂರು ಮಂದಿಯನ್ನು ನೇಮಿಸಿರಿ. ನಾನು ಅವರನ್ನು ಕಳುಹಿಸುವೆನು. ಅವರು ಹೋಗಿ ನಾಡಿನಲ್ಲೆಲ್ಲಾ ಸಂಚಾರಮಾಡಿ ತಮ್ಮ ತಮ್ಮ ಕುಲಗಳಿಗನುಸಾರ ಎಲ್ಲಾ ಪ್ರದೇಶಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಬಳಿಗೆ ಬರಲಿ.

5 ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮ ತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದ ಕುಲದವರಿಗೆ ಉತ್ತರದಲ್ಲಿ ಜೋಸೆಫನ ಕುಲದವರಿಗೆ ಸೊತ್ತು ಸಿಕ್ಕಿದೆ. ಅದು ಅವರಿಗೇ ಇರಲಿ.

6 ನೀವು ನಾಡನ್ನು ಏಳು ಪಾಲಾಗಿ ವಿಂಗಡಿಸಿ ನನ್ನ ಬಳಿಗೆ ಬರಬೇಕು. ನಾನು ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ನಿಮಗೋಸ್ಕರ ಚೀಟು ಹಾಕುತ್ತೇನೆ.

7 ಲೇವಿಯರಿಗೆ ನಿಮ್ಮ ಹಾಗೆ ಪಾಲು ಸಿಕ್ಕುವುದಿಲ್ಲ. ಸರ್ವೇಶ್ವರನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸೊತ್ತು. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಜೋರ್ಡನಿನ ಪೂರ್ವದಿಕ್ಕಿನಲ್ಲಿ ಸರ್ವೇಶ್ವರನ ದಾಸ ಮೋಶೆಯಿಂದಲೇ ಸೊತ್ತು ಸಿಕ್ಕಿದೆ,” ಎಂದನು.

8 ನಾಡಿನ ಅಳತೆಯನ್ನು ಮಾಡತಕ್ಕ ಜನರು ಹೊರಡುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ಹೋಗಿ ನಾಡಿನಲ್ಲೆಲ್ಲಾ ಸಂಚರಿಸಿ ಅಳತೆಮಾಡಿ ನನ್ನ ಬಳಿ ಶೀಲೋವಿಗೆ ತನ್ನಿ. ನಾನು ಸರ್ವೇಶ್ವರನ ಮುಂದೆ ನಿಮಗೋಸ್ಕರ ಚೀಟು ಹಾಕುತ್ತೇನೆ,” ಎಂದು ಹೇಳಿ ಕಳುಹಿಸಿದನು.

9 ಆ ಜನರು ಹೊರಟು ನಾಡಿನಲ್ಲೆಲ್ಲಾ ಸಂಚರಿಸಿ ಒಂದು ಪುಸ್ತಕದಲ್ಲಿ ಗ್ರಾಮ-ನಗರಗಳನ್ನೆಲ್ಲಾ ಬರೆದು ಏಳು ಭಾಗಗಳನ್ನಾಗಿ ಮಾಡಿ ಶೀಲೋವಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಹಿಂದಿರುಗಿ ಬಂದರು.

10 ಯೆಹೋಶುವನು ಶೀಲೋವಿನಲ್ಲಿಯೇ ಸರ್ವೇಶ್ವರನ ಮುಂದೆ ಅವರಿಗೋಸ್ಕರ ಚೀಟು ಹಾಕಿ ನಾಡನ್ನು ಅವರವರ ಪಂಗಡಗಳಿಗೆ ಹಂಚಿಕೊಟ್ಟನು.


ಬೆನ್ಯಾಮೀನ್ ಕುಲಕ್ಕೆ ಬಂದ ಪಾಲು

11 ಚೀಟು ಮೊದಲು ಬೆನ್ಯಾಮೀನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸೊತ್ತು ಯೆಹೂದಾ ಮತ್ತು ಜೋಸೆಫ್ ವಂಶಸ್ಥರ ಪ್ರಾಂತ್ಯಗಳಿಗೆ ಮಧ್ಯೆಯಿದೆ.

12 ಅದರ ಉತ್ತರ ದಿಕ್ಕಿನ ಎಲ್ಲೆ ಜೋರ್ಡನ್ ನದಿಯಿಂದ ತೊಡಗಿ ಜೆರಿಕೋವಿನ ಉತ್ತರದಲ್ಲಿರುವ ಗುಡ್ಡದ ಮೇಲಿಂದ ಪಶ್ಚಿಮಕ್ಕೆ ಹೋಗಿ, ದಿಣ್ಣೆ ಹತ್ತಿ ಬೆತಾವೆನಿನ ಬಯಲಿನಲ್ಲಿ ಕೊನೆಗೊಳ್ಳುತ್ತದೆ.

13 ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇಳಿದು ಅಟಾರೋತದ್ದಾರಿನ ಮೇಲೆ ಕೆಳಗಿನ ಬೇತ್ ಹೋರೋನಿನ ಬಳಿಯಲ್ಲಿರುವ ಬೆಟ್ಟಕ್ಕೆ ಹೋಗುತ್ತದೆ.

14 ಈ ಎಲ್ಲೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು, ಕಿರ್ಯತ್ ಬಾಳ್ ಎನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ನಗರದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ವಂಶಸ್ಥರ ಪಶ್ಚಿಮದ ಎಲ್ಲೆ.

15 ದಕ್ಷಿಣ ದಿಕ್ಕಿನ ಎಲ್ಲೆ ಪಶ್ಚಿಮದ ಮೂಲೆಯಾಗಿರುವ ಕಿರ್ಯತ್ಯಾರೀಮಿನ ಪ್ರಾಂತ್ಯದಿಂದ ತೊಡಗಿ

16 ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್ ಹಿನ್ನೋಮ್ ಕಣಿವೆಯ ಮಾರ್ಗವಾಗಿ ಏನ್ ರೋಗೆಲಿಗೆ ಬರುತ್ತದೆ.

17 ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು, ಇಳಿಯುತ್ತಾ ಏನ್ ಷೆಮೆಸ್, ಮೀಮಿನ ದಾರಿಯ ಎದುರಿನಲ್ಲಿರುವ ಗೆಲೀಲೊತ್,

18 ರೂಬೇನನ ಮಗನಾದ ಬೋಹನನ ಬಂಡೆ, ಅರಾಬಾದ ಉತ್ತರದಲ್ಲಿರುವ ಬೆಟ್ಟ ಇವುಗಳ ಮೇಲೆ ಅರಾಬಾ ಎಂಬ ಕಣಿವೆ ಪ್ರದೇಶಕ್ಕೆ ಹೋಗುತ್ತದೆ.

19 ಅಲ್ಲಿಂದ ಆ ಎಲ್ಲೆ ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಉತ್ತರ ಮೂಲೆಗೆ ಹೋಗಿ ಜೋರ್ಡನ್ ನದಿಯು ಆ ಸಮುದ್ರಕ್ಕೆ ಕೂಡುವ ಸ್ಥಳದಲ್ಲಿ ಮುಗಿಯುತ್ತದೆ. ಇದೇ ದಕ್ಷಿಣದಿಕ್ಕಿನ ಸರಹದ್ದು.

20 ಜೋರ್ಡನ್ ನದಿಯೇ ಅವರ ಪೂರ್ವದಿಕ್ಕಿನ ಸರಹದ್ದು, ಬೆನ್ಯಾಮೀನ್ ಗೋತ್ರಗಳ ಸೊತ್ತಿನ ಸುತ್ತಣ ಎಲ್ಲೆ ಇದೇ.

21 ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ನಗರಗಳು ಯಾವುವೆಂದರೆ: ಜೆರಿಕೊ, ಬೇತ್ ಹೊಗ್ಲಾ, ಏಮೆಕ್ಕೆಚ್ಚೀಚ್, ಬೇತ್ ಅರಾಬಾ,

22 ಚಮಾರಯಿಮ್, ಬೇತೇಲ್, ಅವ್ವೀಮ್, ಪಾರಾ,

23-24 ಒಫ್ರಾ, ಅಮ್ಮೋನ್ಯ, ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು;

25 ಗಿಬ್ಯೋನ್, ರಾಮಾ, ಬೇರೋತ್,

26-27 ಮಿಚ್ಫೆ, ಕೆಫೀರಾ, ಮೋಚಾ, ರೆಕೆಮ್, ಇರ್ಪೇಲ್, ತರಲಾ, ಚೇಲ,‌

28 ಎಲೆಫ್, ಯೆಬೂಸಿಯರು ಇದ್ದಂಥ ಜೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ನಗರಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಆಸ್ತಿಪಾಸ್ತಿ ಇವೇ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು