Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 17 - ಕನ್ನಡ ಸತ್ಯವೇದವು C.L. Bible (BSI)


ಮನಸ್ಸೆ ಕುಲದ ಆಸ್ತಿಪಾಸ್ತಿ

1 ಜೋಸೆಫನ ಚೊಚ್ಚಲ ಮಗ ಮನಸ್ಸೆಯ ವಂಶದವರಿಗೆ ದೊರಕಿದ ಸೊತ್ತಿನ ವಿವರ ಇದು: ಮನಸ್ಸೆಯ ಹಿರಿಯ ಮಗನೂ ಗಿಲ್ಯಾದನ ತಂದೆಯೂ ಆದ ಮಾಕೀರನು ಯುದ್ಧವೀರನು. ಆದ್ದರಿಂದ ಅವನಿಗೆ ಗಿಲ್ಯಾದ, ಬಾಷಾನ ಎಂಬ ಪ್ರಾಂತ್ಯಗಳು ಸಿಕ್ಕಿದವು.

2 ಜೋಸೆಫನ ಮಗ ಮನಸ್ಸೆಯ ಉಳಿದ ಗಂಡು ಮಕ್ಕಳಾದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೆರ್, ಶಮೀದಾ, ಎಂಬವರ ವಂಶದವರಿಗೆ ಜೋರ್ಡನಿನ ಈಚೆಕಡೆ ಪಾಲು ಸಿಕ್ಕಿತು.

3 ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನೂ ಆದ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಆಗಲಿಲ್ಲ. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬವರು ಅವನ ಹೆಣ್ಣುಮಕ್ಕಳು.

4 ಇವರು ಮಹಾಯಾಜಕನಾದ ಎಲ್ಲಾಜಾರ್, ನೂನನ ಮಗ ಯೆಹೋಶುವ ಹಾಗೂ ಕುಲಾಧಿಪತಿಗಳ ಬಳಿಗೆ ಬಂದು, “ನಮ್ಮ ಅಣ್ಣತಮ್ಮಂದಿರೊಡನೆ ನಮಗೂ ಪಾಲುಕೊಡಬೇಕೆಂದು ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದಾರಲ್ಲವೆ?” ಎಂದು ಹೇಳಿದರು. ಯೆಹೋಶುವನು ಸರ್ವೇಶ್ವರನ ಅಪ್ಪಣೆಯಂತೆ ಅವರಿಗೆ ಅವರ ತಂದೆಯ ಅಣ್ಣತಮ್ಮಂದಿರ ಜೊತೆಗೆ ಸೊತ್ತನ್ನು ಪಾಲಾಗಿಕೊಟ್ಟನು.

5 ಮನಸ್ಸೆ ಕುಲದ ಹೆಣ್ಣುಮಕ್ಕಳಿಗೆ ಗಂಡುಮಕ್ಕಳ ಸಮೇತ ಸೊತ್ತು ದೊರಕಿದ್ದರಿಂದ ಮನಸ್ಸೆಯವರಿಗೆ ಜೋರ್ಡನಿನ ಆಚೆಯಿದ್ದ ಬಾಷಾನ್ ಮತ್ತು ಗಿಲ್ಯಾದ್ ಪ್ರಾಂತ್ಯಗಳ ಜೊತೆಗೆ ಈಚೆಯಲ್ಲೂ ಹತ್ತುಪಾಲು ಸಿಕ್ಕಿದವು.

6 ಗಿಲ್ಯಾದ್ ನಾಡು ಮನಸ್ಸೆಯ ಉಳಿದ ಗೋತ್ರಗಳಿಗೆ ಸಿಕ್ಕಿತು.

7 ಮನಸ್ಸೆಯವರ ಸೊತ್ತಿನ ಎಲ್ಲೆ ಆಶೇರ್ ಊರಿನಿಂದ ತೊಡಗಿ ಶೆಕೆಮಿನ ಪೂರ್ವದಲ್ಲಿ ಇರುವ ಮಿಕ್ಮೆತಾತಿನ ಮೇಲೆ ದಕ್ಷಿಣದಲ್ಲಿರುವ ತಪ್ಪೂಹದ ಬುಗ್ಗೆಗೆ ಹೋಗುತ್ತದೆ.

8 ತಪ್ಪೂಹ ನಗರಕ್ಕೆ ಸೇರುವ ಭೂಮಿ ಮನಸ್ಸೆಯವರದು;ಆದರೆ ಅವರ ಸರಹದ್ದಿನಲ್ಲಿರುವ ತಪ್ಪೂಹ ನಗರ ಎಫ್ರಯಿಮ್ಯರದು.

9 ಅಲ್ಲಿಂದ ಅವರ ಎಲ್ಲೆ ಇಳಿಯುತ್ತಾ ಕಾನಾ ಹಳ್ಳದ ದಕ್ಷಿಣಕ್ಕೆ ಹೋಗುತ್ತದೆ. ಅಲ್ಲಿ ಮನಸ್ಸೆಯವರಿಗೆ ಇರುವಂತೆ ಎಫ್ರಯಿಮ್ಯರಿಗೂ ಕೆಲವು ಪಟ್ಟಣಗಳಿವೆ. ಮನಸ್ಸೆಯವರ ಮುಂದಿನ ಎಲ್ಲೆಯು ಹಳ್ಳದ ಉತ್ತರ ತೀರವನ್ನು ಅನುಸರಿಸಿ ಹೋಗಿ ಸಮುದ್ರದ ದಡದಲ್ಲಿ ಮುಕ್ತಾಯಗೊಳ್ಳುತ್ತದೆ.

10 ಆ ಹಳ್ಳದ ದಕ್ಷಿಣ ತೀರ ಎಫ್ರಯಿಮ್ಯರದು; ಉತ್ತರ ತೀರ ಮನಸ್ಸೆಯವರದು. ಸಮುದ್ರವೇ ಇವರ ಪಶ್ಚಿಮದ ಎಲ್ಲೆ. ಉತ್ತರಕ್ಕೆ ಆಶೇರ ಕುಲದವರ ಪ್ರಾಂತ್ಯವೂ ಪೂರ್ವಕ್ಕೆ ಇಸ್ಸಾಕಾರ್ ಕುಲದವರ ನಾಡೂ ಇರುತ್ತವೆ.

11 ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬವರ ಪ್ರಾಂತ್ಯಗಳಲ್ಲಿ ಬೇತ್ ಷೆಯಾನ್, ಇಬ್ಲೆಯಾಮ್, ದೋರ್ ಎಂಬ ನಗರಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ್, ತಾನಕ್, ಮೆಗಿದ್ದೋ ಎಂಬ ನಗರಗಳೂ ಅವುಗಳಿಗೆ ಸೇರಿದ ಊರುಗಳೂ ಸಿಕ್ಕಿದವು.

12 ಆದರೆ ಮನಸ್ಸೆಯವರು ಆ ನಗರಗಳ ನಿವಾಸಿಗಳನ್ನು ಹೊರದೂಡಲಾಗಲಿಲ್ಲ. ಕಾನಾನ್ಯರಿಗೆ ಅಲ್ಲೇ ವಾಸಿಸಲು ಅನುಕೂಲವಾಯಿತು.

13 ಇಸ್ರಯೇಲರು ಬಲಗೊಂಡ ಮೇಲೂ ಕಾನಾನ್ಯರನ್ನು ಹೊರದೂಡದೆ ಅವರನ್ನು ಜೀತದಾರರನ್ನಾಗಿಸಿಕೊಂಡರು.


ಹೆಚ್ಚಿನ ಭೂಮಿಗಾಗಿ ಎಫ್ರಯಿಮ್ ಮತ್ತು ಮನಸ್ಸೆಯವರ ಮನವಿ

14 ಜೋಸೆಫ್ಯರು ಯೆಹೋಶುವನಿಗೆ, “ನೀವು ಚೀಟುಹಾಕಿ, ನಮಗೆ ಒಂದೇ ಒಂದುಭಾಗವನ್ನು ಕೊಟ್ಟಿದ್ದೀರಿ, ಇದು ಸರಿಯೆ? ಸರ್ವೇಶ್ವರ ಸ್ವಾಮಿ ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿ ನಮ್ಮನ್ನು ಮಹಾಜನಾಂಗವಾಗಿಸಿದ್ದಾರಲ್ಲವೆ?” ಎಂದು ಕೇಳಿಕೊಂಡರು.

15 ಅದಕ್ಕೆ ಯೆಹೋಶುವನು, “ಮಹಾಜನಾಂಗವಾದ ನಿಮಗೆ ಎಫ್ರಯಿಮ್ ಮಲೆನಾಡು ಸಾಲದಿದ್ದರೆ ಪೆರಿಜ್ಜೀಯರ ಮತ್ತು ರೆಫಾಯರ ನಾಡುಗಳಿಗೆ ಹೋಗಿ ಅಲ್ಲಿನ ಕಾಡು ಕಡಿದು ಸ್ಥಳ ಮಾಡಿಕೊಳ್ಳಿ,” ಎಂದನು.

16 ಅವರು ಮತ್ತೆ ಯೆಹೋಶುವನಿಗೆ , “ನಮ್ಮ ಮಲೆನಾಡು ನಮಗೆ ಸಾಲುವುದಿಲ್ಲ. ಬೇತ್ ಷೆಯಾನ್ ಮತ್ತು ಅದಕ್ಕೆ ಸೇರಿದ ಊರುಗಳಿರುವ ಕಣಿವೆಯಲ್ಲೂ ಹಾಗೂ ಇಜ್ರೇಲಿನ ಕಣಿವೆಯಲ್ಲೂ ವಾಸಮಾಡುವ ಕಾನಾನ್ಯರೆಲ್ಲರು ಕಬ್ಬಿಣದ ರಥವುಳ್ಳವರು,” ಎಂದರು.

17 ಯೆಹೋಶುವನು ಜೋಸೆಫ್ಯರಾದ ಎಫ್ರಯಿಮ್ - ಮನಸ್ಸೆಕುಲದ ಆ ಜನರಿಗೆ, “ನೀವು ಮಹಾಜನಾಂಗ ಹಾಗೂ ಶಕ್ತಿಶಾಲಿಗಳೆಂಬುದೇನೋ ನಿಜ. ನೀವು ಒಂದು ಪಾಲಿಗಿಂತ ಹೆಚ್ಚು ತೆಗೆದುಕೊಳ್ಳಬಹುದಾಗಿದೆ.

18 ಆಮೇಲೆ ನಾಡನ್ನು ನಿಮಗೆ ಕೊಟ್ಟಿರುತ್ತೇನೆ. ಅದರಲ್ಲಿ ಕಾಡುಗಳಿದ್ದರೂ ನೀವು ಅವುಗಳನ್ನು ಕಡಿದು ಹಾಕಬಹುದು. ಅದಕ್ಕೆ ಸೇರಿರುವ ಬಯಲುಭೂಮಿ ನಿಮ್ಮದೇ. ಕಾನಾನ್ಯರು ಬಲಿಷ್ಠರು ಹಾಗೂ ಕಬ್ಬಿಣದ ರಥಗಳುಳ್ಳವರು. ಆದರೂ ನೀವು ಅವರನ್ನು ಹೊರದೂಡಬಲ್ಲಿರಿ,” ಎಂದು ಉತ್ತರ ಕೊಟ್ಟನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು