Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 14 - ಕನ್ನಡ ಸತ್ಯವೇದವು C.L. Bible (BSI)


ಜೋರ್ಡನಿನ ಪಶ್ಚಿಮದಿಕ್ಕಿನ ಭೂಮಿಯ ವಿಭಜನೆ

1 ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು ಹಾಗೂ ಇಸ್ರಯೇಲ್ ಕುಲಾಧಿಪತಿಗಳು

2 ಸರ್ವೇಶ್ವರಸ್ವಾಮಿ ಮೋಶೆಯ ಮೂಲಕ ಆಜ್ಞಾಪಿಸಿದಂತೆ ಜೋರ್ಡನಿನ ಪಶ್ಚಿಮದ ಕಾನಾನ್ ನಾಡನ್ನು ಚೀಟುಹಾಕಿ ಇಸ್ರಯೇಲರ ಒಂಬತ್ತುವರೆ ಕುಲದವರಿಗೆ ಸ್ವಂತ ಆಸ್ತಿಯಾಗಿ ಹಂಚಿಕೊಟ್ಟರು.

3 ಉಳಿದ ಎರಡುವರೆ ಕುಲಗಳ ಜನರಿಗೆ ಜೋರ್ಡನಿನ ಆಚೆಯಲ್ಲಿ ಮೋಶೆಯೇ ಸೊತ್ತನ್ನು ಕೊಟ್ಟಿದ್ದನು. ಲೇವಿಯರಿಗೆ ಮಾತ್ರ ಕೊಡಲಿಲ್ಲ.

4 ಜೋಸೆಫ್ಯರರು ಮನಸ್ಸೆ ಮತ್ತು ಎಫ್ರಯಿಮ್ ಎಂಬ ಎರಡು ಕುಲಗಳಾಗಿ ಎಣಿಸಲ್ಪಟ್ಟಿದ್ದರು. ಲೇವಿಯರಿಗೆ, ತಂಗುವುದಕ್ಕೆ ಕೆಲವು ನಗರಗಳು ಹಾಗು ಅವರ ದನಕುರಿಗಳಿಗೆ ಅಲ್ಲಿನ ಕೆಲವು ಹುಲ್ಲುಗಾವಲುಗಳನ್ನು ಬಿಟ್ಟರೆ ಬೇರೇನೂ ಸಿಕ್ಕಲಿಲ್ಲ.

5 ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ನಾಡನ್ನು ಹಂಚಿಕೊಂಡರು.


ಕಾಲೇಬನ ಪಾಲಿಗೆ ಬಂದ ಆಸ್ತಿ

6 ಯೆಹೋಶುವನು ಗಿಲ್ಗಾಲಿನಲ್ಲಿದ್ದಾಗ ಯೆಹೂದ ಕುಲದವರು ಅವನ ಬಳಿಗೆ ಬಂದರು. ಅವರಲ್ಲಿ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಯೆಹೋಶುವನಿಗೆ, “ಸರ್ವೇಶ್ವರ ಕಾದೇಶ್ ಬರ್ನೇಯದಲ್ಲಿ ನಮ್ಮಿಬ್ಬರ ವಿಷಯವಾಗಿ ದೇವರ ಭಕ್ತನಾದ ಮೋಶೆಗೆ ಹೇಳಿದ್ದು ನಿಮಗೆ ಚೆನ್ನಾಗಿ ಗೊತ್ತಿದೆ.

7 ಸರ್ವೇಶ್ವರನ ದಾಸನಾದ ಮೋಶೆ ಈ ನಾಡನ್ನು ಸಂಚರಿಸಿ ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ನನ್ನನ್ನು ಕಳಿಸಿದಾಗ ನನಗೆ ನಾಲ್ವತ್ತು ವರುಷ.

8 ನನ್ನ ಜೊತೆಯಲ್ಲಿ ಬಂದಿದ್ದ ಸಹೋದರರು ಜನರನ್ನು ಎದೆಗೆಡಿಸಿದರು. ನಾನಾದರೋ ನನ್ನ ದೇವರಾದ ಸರ್ವೇಶ್ವರನನ್ನೇ ಸಂಪೂರ್ಣವಾಗಿ ನಂಬಿ ಶ್ರದ್ಧೆಯಿಂದ ಅನುಸರಿಸಿದೆ.

9 ಮೋಶೆ ಅಂದು ನನಗೆ, ‘ನೀನು ಪೂರ್ಣ ಮನಸ್ಸಿನಿಂದ ನನ್ನ ದೇವರಾದ ಸರ್ವೇಶ್ವರನನ್ನೇ ಶ್ರದ್ಧೆಯಿಂದ ಅನುಸರಿಸಿದ ಕಾರಣ ನೀನು ಸಂಚರಿಸಿದ ಪ್ರದೇಶ ನಿನಗೂ ನಿನ್ನ ಸಂತಾನದವರಿಗೂ ಶಾಶ್ವತ ಸೊತ್ತಾಗುವುದು,’ ಎಂದು ಪ್ರಮಾಣಮಾಡಿ ಹೇಳಿದನು.

10 ಸರ್ವೇಶ್ವರ ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಯೇಲರು ಅರಣ್ಯದಲ್ಲಿ ಅಲೆಯುತ್ತಿದ್ದ ವರ್ಷಗಳೂ ಸೇರಿ ನಾಲ್ವತ್ತೈದು ವರ್ಷಗಳು ದಾಟಿದವು. ಸರ್ವೇಶ್ವರ ತಾವು ನುಡಿದಂತೆಯೇ ಈ ಕಾಲವೆಲ್ಲ ನನ್ನನ್ನು ಜೀವದಿಂದುಳಿಸಿದ್ದಾರೆ. ಈಗ ನನಗೆ ಎಂಬತ್ತೈದು ವರ್ಷ.

11 ಮೋಶೆ ನನ್ನನ್ನು ಕಳಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟೇ ಬಲವಿದೆ. ಯುದ್ಧಮಾಡುವುದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವುದಕ್ಕೂ ನನಗೆ ಮುಂಚಿನಂತೆಯೇ ಶಕ್ತಿಯಿದೆ.

12 ಹೀಗಿರಲು ಸರ್ವೇಶ್ವರ ಆ ದಿನದಂದು ಸೂಚಿಸಿದಂತೆ ಈ ಮಲೆನಾಡನ್ನು ನನಗೆ ಕೊಡು. ‘ಇದರಲ್ಲಿ ಎತ್ತರದ ವ್ಯಕ್ತಿಗಳಿದ್ದಾರೆ, ದೊಡ್ಡ ದೊಡ್ಡ ನಗರಗಳಿವೆ, ಕೋಟೆಕೊತ್ತಲಗಳಿವೆ’ ಎಂದು ಆ ಕಾಲದಲ್ಲಿ ನೀನು ಕೇಳಿದ್ದುಂಟು. ಅವರೆಲ್ಲರನ್ನು ಓಡಿಸಿಬಿಡಲು ಸರ್ವೇಶ್ವರ ತಮ್ಮ ಮಾತಿಗನುಸಾರ ನನಗೆ ಸಹಾಯಮಾಡುವರೆಂಬ ನಂಬಿಕೆ ನನಗಿದೆ,” ಎಂದನು.

13 ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ, ಹೆಬ್ರೋನ್ ನಗರವನ್ನು ಅವನಿಗೆ ಸೊತ್ತಾಗಿ ಕೊಟ್ಟನು.

14 ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಯೇಲಿನ ದೇವರಾದ ಸರ್ವೇಶ್ವರನನ್ನು ಸಂಪೂರ್ಣವಾಗಿ ಶ್ರದ್ಧೆಯಿಂದ ಅನುಸರಿಸಿದ್ದರಿಂದ ಹೆಬ್ರೋನ್ ಅವನಿಗೆ ಸೊತ್ತಾಗಿ ಸಿಕ್ಕಿತು.ಅದು ಇಂದಿನವರೆಗೂ ಅವನದೇ ಆಗಿದೆ.

15 ಅದರ ಹಿಂದಿನ ಹೆಸರು, ‘ಕಿರ್ಯತ್ ಅರ್ಬ’ ಎಂದು. ಅರ್ಬ ಎಂಬವನು ಈ ಎತ್ತರದ ವ್ಯಕ್ತಿಗಳಲ್ಲಿ ಪ್ರಮುಖನು. ಯುದ್ಧವು ನಿಂತಿತು. ನಾಡಿನಲ್ಲಿ ಶಾಂತಿಸಮಾಧಾನ ನೆಲೆಸಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು