Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 13 - ಕನ್ನಡ ಸತ್ಯವೇದವು C.L. Bible (BSI)


ಸ್ವಾಧೀನವಾಗಬೇಕಿದ್ದ ಭೂಮಿ

1 ಯೆಹೋಶುವ ಹಣ್ಣುಹಣ್ಣು ಮುದುಕನಾದ. ಆಗ ಸರ್ವೇಶ್ವರ ಆತನಿಗೆ, “ನೀನೀಗ ಮುದುಕ. ಸ್ವಾಧೀನ ಮಾಡಿಕೊಳ್ಳಬೇಕಾದ ನಾಡುಗಳು ಇನ್ನೂ ಬಹಳ ಇವೆ.

2-3 ಅವು ಯಾವುವೆಂದರೆ - ಈಜಿಪ್ಟಿನ ಈಚೆಯಿರುವ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರ್, ಎಕ್ರೋನ್ ಎಂಬ ನಗರಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯ;

4 ಗೆಷೂರ್ಯರ ನಾಡು, ದಕ್ಷಿಣದಲ್ಲಿದ್ದ ಅವ್ವೀಯರ ನಾಡು; ಸಿದೋನ್ಯರಿಗೆ ಸೇರಿದ ಮೆಯರಾದಿಂದ ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ನಾಡು;

5 ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ತಪ್ಪಲಿನಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ಹಾದಿಯವರೆಗಿರುವ ಲೆಬನೋನಿನ ಪೂರ್ವಪ್ರದೇಶ;

6 ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗಿರುವ ಸಿದೋನ್ಯರ ಎಲ್ಲ ಪರ್ವತ ಪ್ರಾಂತ್ಯಗಳು.

7 “ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಯೇಲರ ಸಮ್ಮುಖದಿಂದ ಹೊರಡಿಸಿಬಿಡುವೆನು. ನೀನಾದರೋ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಯೇಲರಿಗೆ ನಾಡನ್ನು ಹಂಚಿಕೊಡುವಾಗ ಇವುಗಳನ್ನು ಕೂಡ ಸೇರಿಸಿ ನಾಡನ್ನೆಲ್ಲಾ ಒಂಬತ್ತು ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಪಾಲುಮಾಡಿಕೊಡು,” ಎಂದರು.


ನಾಡಿನ ವಿಭಜನೆ

8 ಮನಸ್ಸೆಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಜೋರ್ಡನಿನ ಆಚೆಕಡೆ ಈಗಾಗಲೇ ಮೋಶೆಯಿಂದ ಸ್ವಂತ ಭೂಮಿ ದೊರಕಿತ್ತು. ಸರ್ವೇಶ್ವರನ ದಾಸ ಮೋಶೆ ಅವರಿಗೆ ಕೊಟ್ಟ ಪ್ರಾಂತ್ಯಗಳು ಇವು :

9 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ ಮತ್ತು ಅದೇ ಕಣಿವೆಯಲ್ಲಿದ್ದ ಮತ್ತೊಂದು ನಗರ, ಇವುಗಳಿಂದ ದೀಬೋನಿನವರೆಗೆ ವಿಸ್ತರಿಸಿಕೊಂಡಿದ್ದ ಮೇದಬದ ತಪ್ಪಲ ನಾಡು;

10 ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಎಲ್ಲೆಗೆ ಈಚೆಕಡೆ ಇದ್ದಂಥ ಎಲ್ಲ ನಗರಗಳು;

11 ಗಿಲ್ಯಾದ್ ನಾಡು, ಗೆಷ್ಯೂರ ಮತ್ತು ಮಾಕತೀಯರ ಪ್ರಾಂತ್ಯಗಳು, ಹೆರ್ಮೋನ್ ಬೆಟ್ಟದ ಮೇಲಿನ ಪ್ರದೇಶ

12 ಅಷ್ಟರೋತ್, ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದು ಸಲ್ಕಾ ನಗರದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು. ಮೋಶೆಯೇ ಅವರನ್ನು ಜಯಿಸಿ ಅವರ ನಾಡುಗಳನ್ನು ಸ್ವಾಧೀನಮಾಡಿಕೊಂಡಿದ್ದನು.

13 ಇಸ್ರಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ನಾಡಿನೊಳಗಿಂದ ಅಟ್ಟಿಬಿಡಲಿಲ್ಲ. ಅವರು ಇಂದಿನವರೆಗೂ ಇಸ್ರಯೇಲರ ಮಧ್ಯದಲ್ಲೇ ಇದ್ದಾರೆ.

14 ಲೇವಿ ಕುಲದವರಿಗೆ ಮಾತ್ರ ಯಾವ ಪಾಲೂ ಸಿಕ್ಕಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನು ಆಜ್ಞಾಪಿಸಿದಂತೆ ಯಜ್ಞಶೇಷವೇ ಅವರ ಸೊತ್ತಾಗಿತ್ತು.


ರೂಬೇನ್ಯರ ಗೋತ್ರಗಳಿಗೆ ಕೊಡಲಾದ ಸೊತ್ತು

15 ಮೋಶೆ ರೂಬೇನ್ಯರ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು :

16 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ, ಅದೇ ಕಣಿವೆಯ ಮಧ್ಯೆಯಿದ್ದ ನಗರ;

17 ಮೇದೆಬದ ಬಯಲುನಾಡಿಗೆ ಸೇರಿದ ಹೆಷ್ಬೋನ್ ನಗರ, ಅಲ್ಲೆ ಎತ್ತರವಾದ ಬಯಲಿನಲ್ಲಿರುವ ದೀಬೋನ್, ಬಾಮೋತ್ ಬಾಳ್, ಬೇತ್ಬಾಳ್ಮೆಯೋನ್ ಯಹಚಾ,

18 ಕೆದೇಮೋತ್, ಮೆಫಾಯತ್,

19 ಕಿರ್ಯಾತಯಿಮ್, ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳು, ಕಣಿವೆಯಲ್ಲಿ ಇರುವ ಗುಡ್ಡದ ಮೇಲಿನ ಚೆರೆತ್ ಶಹರ್, ಬೇತ್ಪೆಗೋರ್ ಎಂಬ ನಗರಗಳು,

20 ಪಿಸ್ಗದ ಬುಡದಲ್ಲಿ ಇರುವ ಪ್ರದೇಶ, ಬೇತ್ ಯೆಷಿಮೋತ್ ನಗರ,

21 ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲ ನಗರಗಳು, ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸ ಸೀಹೋನನ ಸಮಸ್ತ ರಾಜ್ಯ. ಮೋಶೆ ಈ ನಾಡಿನಲ್ಲಿ ವಾಸವಾಗಿದ್ದ ಸೀಹೋನನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿದ್ದ ಅವನ ಸರದಾರರನ್ನೂ ಸದೆಬಡಿದನು.

22 ಇಸ್ರಯೇಲರು ಕತ್ತಿಗೆ ತುತ್ತಾಗಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಸೇರಿದ್ದನು.

23 ಜೋರ್ಡನ್ ನದಿ ರೂಬೇನ್ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಸಿಕ್ಕಿದ ಗ್ರಾಮನಗರಗಳು ಇವೇ.


ಗಾದ್ ಕುಲದ ಗೋತ್ರಗಳಿಗೆ ಕೊಡಲಾದ ಸೊತ್ತು

24 ಮೋಶೆ ಗಾದ್ ಕುಲದ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:

25 ಹೆಷ್ಬೋನಿನ ಅರಸ ಸೀಹೋನನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಗಿಲ್ಯಾದಿನ ಎಲ್ಲ ನಗರಗಳು, ರಬ್ಬಾ ಊರಿನ ಪೂರ್ವದಲ್ಲಿ ಇರುವ ಅರೋಯೇರ್ ನಗರದವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧರಾಜ್ಯ,

26 ಹೆಷ್ಬೋನಿನಿಂದ ರಾಮತ್ ಮಿಚ್ಫೆ, ಬೆಟೋನೀಮ್ ಎಂಬ ಊರುಗಳವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೇಬೀರ್ ಪ್ರಾಂತ್ಯದವರೆಗೆ ಇರುವ ನಾಡು,

27 ಜೋರ್ಡನ್ ಕಣಿವೆಯಲ್ಲಿರುವ ಬೇತ್ ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಫೋನ್ ಎಂಬ ನಗರಗಳು, ಕಿನ್ನೆರೆತ್ ಸರೋವರ, (ದಕ್ಷಿಣ ದಿಕ್ಕಿನ) ಮೂಲೆಯವರೆಗೆ ವಿಸ್ತರಿಸಿಕೊಂಡಿರುವ ಜೋರ್ಡನ್ ಪೂರ್ವಪ್ರದೇಶ.

28 ಈ ಎಲ್ಲ ಗ್ರಾಮನಗರಗಳು ಗಾದ್ ಕುಲದ ಆಸ್ತಿಪಾಸ್ತಿ ಆದವು.


ಮನಸ್ಸೆಕುಲದ ಅರ್ಧಗೋತ್ರಗಳಿಗೆ ಕೊಡಲಾದ ಸೊತ್ತು

29 ಮಹನಯಿಮಿನ (ಉತ್ತರದಲ್ಲಿದ್ದ) ಹಾಗೂ ಮೊದಲು ಬಾಷಾನಿನ ಅರಸ ಓಗನ ರಾಜ್ಯವಾಗಿದ್ದ ಬಾಷಾನ್ ನಾಡನ್ನು

30 ಮನಸ್ಸೆ ಕುಲದ ಅರ್ಧಕುಲಗಳಿಗೆ ಮೋಶೆ ಕೊಟ್ಟನು, ಯಾಯಿರನ ಗ್ರಾಮಗಳೆನಿಸಿಕೊಳ್ಳುವ ಅರವತ್ತು ಊರುಗಳು ಇದರಲ್ಲೆ ಇವೆ.

31 ಗಿಲ್ಯಾದಿನ ಅರ್ಧಭಾಗ ಓಗನ ರಾಜಧಾನಿಗಳಾಗಿದ್ದ ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ನಗರಗಳು ಮನಸ್ಸೆಯ ಮಗ ಮಾಕೀರನ ಗೋತ್ರದ ಅರ್ಧಜನರಿಗೆ ಸಿಕ್ಕಿದವು.

32 ಮೋಶೆ ಜೋರ್ಡನಿನ ಆಚೆ ಜೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲು ಪ್ರದೇಶದಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಂತ ಆಸ್ತಿಯಾಗಿ ಕೊಟ್ಟನು.

33 ಆದರೆ ಲೇವಿಯ ಕುಲಕ್ಕೆ ಮೋಶೆ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನೇ ಅವರ ಸೊತ್ತೆಂದು ವಾಗ್ದಾನ ಮಾಡಲಾಗಿತ್ತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು