Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 9 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿನ ದಂಡನೆ

1 ಆಮೇಲೆ ದೇವರು, “ಈ ಪಟ್ಟಣವನ್ನು ದಂಡಿಸಲಿರುವವರೇ, ನೀವೆಲ್ಲರೂ ನಿಮ್ಮ ಹತ್ಯದ ಆಯುಧಗಳನ್ನು ಹಿಡಿದು ಸಮೀಪಿಸಿರಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು.

2 ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಉತ್ತರಾಭಿಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ಕಂಚಿನ ಬಲಿಪೀಠದ ಪಕ್ಕದಲ್ಲಿ ನಿಂತುಕೊಂಡರು.

3 ಇಷ್ಟರಲ್ಲಿ ಇಸ್ರಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನನ್ನು ಸರ್ವೇಶ್ವರ ಕೂಗಿ ಅವನಿಗೆ,

4 “ನೀನು ಜೆರುಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಾಡಿ, ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗೆ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು,” ಎಂದು ಅಪ್ಪಣೆಕೊಟ್ಟರು.

5 ಮಿಕ್ಕವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ;

6 ವೃದ್ಧ, ಯುವಕ, ಯುವತಿ, ಮಹಿಳೆ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿ,” ಎಂದು ನನಗೆ ಕೇಳಿಸುವಂತೆ ಅಪ್ಪಣೆಮಾಡಿದರು. ಆಗ ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.

7 ದೇವರು ಅವರಿಗೆ, “ಹೊರಡಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿ,” ಎಂದು ಅಪ್ಪಣೆಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು.

8 ಅವರು ಹೊಡೆಯುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಸರ್ವೇಶ್ವರನಾದ ದೇವರೇ, ನೀವು ಜೆರುಸಲೇಮಿನ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿಸಿ ಇಸ್ರಯೇಲಿನ ಶೇಷವನ್ನೆಲ್ಲಾ ನಾಶಮಾಡುವಿರೋ?” ಎಂದು ಮೊರೆಯಿಟ್ಟೆ.

9 ಆಗ ಅವರು ನನಗೆ, “ಇಸ್ರಯೇಲ್ ಮತ್ತು ಯೆಹೂದ ವಂಶದವರ ಅಧರ್ಮ ತುಂಬಿಹೋಗಿದೆ; ನಾಡು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ನಾಡನ್ನು ಸರ್ವೇಶ್ವರ ತೊರೆದುಬಿಟ್ಟಿದ್ದಾರೆ, ಸರ್ವೇಶ್ವರ ನಮ್ಮನ್ನು ನೋಡುವುದಿಲ್ಲ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ;

10 ನಾನಂತು ಅವರನ್ನು ಕಟಾಕ್ಷಿಸೆನು, ಉಳಿಸೆನು, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು,” ಎಂದು ಹೇಳಿದರು.

11 ಕೂಡಲೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನು, “ನಿಮ್ಮ ಅಪ್ಪಣೆಯಂತೆಯೇ ಮಾಡಿದ್ದೇನೆ,” ಎಂದು ಅರಿಕೆಮಾಡಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು