ಯೆಹೆಜ್ಕೇಲನು 47 - ಕನ್ನಡ ಸತ್ಯವೇದವು C.L. Bible (BSI)ದೇವಸ್ಥಾನದಿಂದ ಹೊರಡುವ ಪ್ರವಾಹ 1 ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದುತಂದನು; ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. 2 ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. 3 ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ಮೀಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು. 4 ಅವನು ಪುನಃ ಐನೂರು ಮೀಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ಮೀಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು. 5 ಅವನು ಮತ್ತೆ ಅಳೆದು ಐನೂರು ಮೀಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು. 6 ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. 7 ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು. 8 ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. 9 ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧ ಜಲಜಂತುಗಳು ಬದುಕಿ ಬಾಳುವುವು; ಮೀನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. 10 ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್‍ಗೆದಿಯಿಂದ ಏನ್ಎಗ್ಲಯಿಮಿನವರೆಗೆ ದಡವೆಲ್ಲಾ ಬಲೆಹಾಸುವ ಸ್ಥಳವಾಗುವುದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿರಾಶಿಯಾಗಿ ಸಿಕ್ಕುವುವು. 11 ಆದರೆ ಅದರ ಸುತ್ತಣ ಜವುಗುನೆಲವೂ ಸವುಳುಹೊಂಡಗಳೂ ಸಿಹಿಯಾಗುವುದಿಲ್ಲ, ಅವು ಉಪ್ಪಿನ ಗಣಿಯಾಗುವುವು. 12 ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.” ಇಸ್ರಯೇಲ್ ನಾಡಿನ ಎಲ್ಲೆ ಮೇರೆಗಳು 13 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನೀವು ಇಸ್ರಯೇಲಿನ ಹನ್ನೆರಡು ಕುಲಗಳಿಗೆ ನಾಡನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಜೋಸೆಫಿಗೆ ಎರಡು ಪಾಲು ಸೇರಲಿ. 14 ನಾನು ನಿಮ್ಮ ಪಿತೃಗಳಿಗೆ ಪ್ರಮಾಣವಾಗಿ ವಾಗ್ದಾನಮಾಡಿದ ಈ ನಾಡನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸಿರಿ; ಇದು ನಿಮಗೆ ಸೊತ್ತಾಗಿಯೇ ಇರುವುದು. 15 “ನಿಮ್ಮ ನಾಡಿನ ಮೇರೆಗಳು ಹೀಗಿರಬೇಕು: ಉತ್ತರದ ಮೇಲೆ ದೊಡ್ಡ ಸಮುದ್ರದಿಂದ ಆರಂಭವಾಗಿ ಚೆದಾದಿನ ದಾರಿಯಲ್ಲಿನ 16 ಹೆತ್ಲೋನಿನ ಮಾರ್ಗವಾಗಿ ಬಂದು ಹಮಾತ್, ಬೇರೋತ, ದಮಸ್ಕದ ಎಲ್ಲೆಗೂ ಹಮಾತಿನ ಎಲ್ಲೆಗೂ ನಡುವಣ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಸರಹದ್ದಿಗೆ ಹತ್ತಿರವಾದ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು. 17 ಹೀಗೆ ಉತ್ತರದ ಮೇರೆಯು ಸಮುದ್ರದಿಂದ, ದಮಸ್ಕದ ಸರಹದ್ದಿನಲ್ಲಿರುವ ಹಚರ್ ಐನೋನಿನವರೆಗೆ ಹಬ್ಬುವುದು; ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು. ಇದು ಉತ್ತರ ಮೇರೆ. 18 “ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಯೇಲ್ ನಾಡಿಗೂ ಮಧ್ಯೆ ಜೋರ್ಡನ್ ಹೊಳೆ ಎಲ್ಲೆಯಾಗಿರುವುದು; ಉತ್ತರದ ಮೇರೆಯಿಂದ ಪೂರ್ವದ ಸಮುದ್ರದವರೆಗೆ ನೀವು ಗುರುತುಹಾಕಿಕೊಳ್ಳಬೇಕು. ಇದು ಪೂರ್ವದಿಕ್ಕಿನ ಮೇರೆ. 19 “ದಕ್ಷಿಣದ ಮೇರೆ ತಾಮಾರಿನಿಂದ ಹೊರಟು ಮೆರೀಬೋತ್‍ಕಾದೇಶಿನ ಹಳ್ಳದ ಮೇಲೆ, ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟಬೇಕು. ಇದು ದಕ್ಷಿಣದ ಮೇರೆ. 20 “ಪಶ್ಚಿಮದಲ್ಲಿ ಉತ್ತರದ ಮೇರೆಯಿಂದ ಹಮಾತಿನ ದಾರಿಗೆ ಎದುರಿನ ಕರಾವಳಿಯ ತನಕ ದೊಡ್ಡ ಸಮುದ್ರವು ಎಲ್ಲೆಯಾಗಿರುವುದು. ಇದು ಪಶ್ಚಿಮದ ಮೇರೆ. 21 “ಈ ನಾಡನ್ನು, ನೀವು ಇಸ್ರಯೇಲಿನ ಕುಲಕುಲಕ್ಕೂ ಹಂಚಿಕೊಳ್ಳಬೇಕು. 22 ನಿಮಗೂ ನಿಮ್ಮ ಮಧ್ಯೆ ಪ್ರವಾಸಮಾಡುತ್ತಾ ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ನಾಡನ್ನು ಬಾಧ್ಯವಾಗಿ ಹಂಚಬೇಕು; ಅವರು ಇಸ್ರಯೇಲರ ಮಧ್ಯೆ ನಿಮಗೆ ಸ್ವದೇಶಿಗಳಂತೆಯೇ ಇರತಕ್ಕದ್ದು; ಇಸ್ರಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸೊತ್ತಿರಲಿ. 23 ಯಾವ ಕುಲದಲ್ಲಿ ವಿದೇಶಿಯು ನೆಲೆಯಾಗಿರುತ್ತಾನೋ ಅಲ್ಲಿ ಅವನಿಗೆ ಸೊತ್ತನ್ನು ಕೊಡಬೇಕು; ಇದು ಸರ್ವೇಶ್ವರನಾದ ದೇವರ ನುಡಿ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India