ಯೆಹೆಜ್ಕೇಲನು 46 - ಕನ್ನಡ ಸತ್ಯವೇದವು C.L. Bible (BSI)ಹಬ್ಬದಾಚರಣೆಯಲ್ಲಿ ರಾಜನ ಪಾತ್ರ 1 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ವಾರದೊಳಗೆ ಕೆಲಸ ನಡೆಯುವ ಆರು ದಿವಸಗಳಲ್ಲಿ ಒಳಗಿನ ಪ್ರಾಕಾರದ ಪೂರ್ವ ಹೆಬ್ಬಾಗಿಲು ಮುಚ್ಚಿರಬೇಕು; ಆದರೆ ಸಬ್ಬತ್ ದಿನದಲ್ಲೂ ಅಮಾವಾಸ್ಯೆಯಲ್ಲೂ ತೆರೆದಿರಬೇಕು. 2 ರಾಜನು ಹೊರಗಿನ ಕೈಸಾಲೆಯ ಮಾರ್ಗವಾಗಿ ಆ ಹೆಬ್ಬಾಗಿಲನ್ನು ಪ್ರವೇಶಿಸಿ ಬಾಗಿಲ ನಿಲವುಕಂಬದ ಪಕ್ಕದಲ್ಲಿ ನಿಂತುಕೊಂಡು, ತಾನು ಒಪ್ಪಿಸಿದ ದಹನಬಲಿ ಪ್ರಾಣಿಯನ್ನು ಶಾಂತಿಸಮಾಧಾನ ಬಲಿಪ್ರಾಣಿಯನ್ನೂ ಯಾಜಕರು ಅರ್ಪಿಸುತ್ತಿರುವಾಗ ಬಾಗಿಲ ಹೊಸ್ತಿಲಿನಲ್ಲಿ ಅಡ್ಡಬೀಳಲಿ; ಆಮೇಲೆ ಹೊರಟುಹೋಗಲಿ; ಅಂದು ಸಂಜೆಯ ತನಕ ಬಾಗಿಲನ್ನು ಮುಚ್ಚಬಾರದು. 3 ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲೂ ನಾಡಿನ ಜನರು ಆ ಹೆಬ್ಬಾಗಿಲ ದ್ವಾರದ ಮುಂದೆ ಸರ್ವೇಶ್ವರನ ಸಮ್ಮುಖವಾಗಿ ಅಡ್ಡಬೀಳಲಿ. 4 “ಸಬ್ಬತ್‍ದಿನದಲ್ಲಿ ರಾಜನು ಸರ್ವೇಶ್ವರನಿಗೆ ಕಳಂಕರಹಿತವಾದ ಆರು ಕುರಿಗಳನ್ನೂ ಕಳಂಕರಹಿತವಾದ ಒಂದು ಟಗರನ್ನೂ ದಹನಬಲಿಯಾಗಿ ಅರ್ಪಿಸತಕ್ಕದ್ದು. 5 ಟಗರಿನೊಡನೆ ಮೂವತ್ತು ಸೇರು ಗೋದಿಹಿಟ್ಟನ್ನೂ ಕುರಿಗಳೊಡನೆ ಸಾಧ್ಯವಿದ್ದಷ್ಟು ಗೋದಿಹಿಟ್ಟನ್ನೂ ಮೂವತ್ತು ಮೂವತ್ತು ಸೇರು ಗೋದಿಹಿಟ್ಟಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಕೊಡಲಿ. 6 ಅಮಾವಾಸ್ಯೆಯಲ್ಲಿ ಅವನು ಕಳಂಕರಹಿತವಾದ ಒಂದು ಹೋರಿಯನ್ನೂ ಆಡುಕುರಿಗಳನ್ನೂ ಒಂದು ಟಗರನ್ನೂ ಒಪ್ಪಿಸತಕ್ಕದ್ದು; ಅವು ಕಳಂಕರಹಿತವಾಗಿಯೇ ಇರಬೇಕು. 7 ಮತ್ತು ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಯೊಡನೆ ಸಾಧ್ಯವಿದ್ದಷ್ಟು ಗೋದಿಹಿಟ್ಟನ್ನೂ ಮೂವತ್ತು ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು. 8 “ರಾಜನು ಪ್ರವೇಶಮಾಡುವಾಗ ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಬಂದು ಅದೇ ಮಾರ್ಗವಾಗಿ ಹೊರಡಲಿ. 9 ನಾಡಿನ ಜನರಾದರೋ ಹಬ್ಬಗಳಲ್ಲಿ ಸರ್ವೇಶ್ವರನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿಂದ ಆರಾಧಿಸುವುದಕ್ಕೆ ಪ್ರವೇಸಿಸಿದವರು ದಕ್ಷಿಣ ಬಾಗಿಲಿಂದ ಹೊರಡಲಿ; ದಕ್ಷಿಣ ಬಾಗಿಲಿಂದ ಪ್ರವೇಶಿಸಿದವನು ಉತ್ತರ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ. 10 ಜನರು ಪ್ರವೇಶಿಸುವಾಗ ರಾಜನು ಅವರ ಮಧ್ಯೆ ಪ್ರವೇಶಿಸಲಿ ಅವರು ಹೊರಡುವಾಗ ಅವನೂ ಹೊರಡಲಿ. 11 ರಾಜನು ಉತ್ಸವಗಳಲ್ಲೂ ಹಬ್ಬಗಳಲ್ಲೂ ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಸಾಧ್ಯವಿದ್ದಷ್ಟು ಸೇರು ಗೋದಿಹಿಟ್ಟನ್ನೂ ಮೂವತ್ತು ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು. 12 “ರಾಜರು ಸ್ವಂತ ಇಚ್ಛೆಯಿಂದ ಕಾಣಿಕೆಯನ್ನಾಗಲಿ, ದಹನಬಲಿಯನ್ನಾಗಲಿ, ಶಾಂತಿಸಮಾಧಾನಬಲಿಗಳನ್ನಾಗಲಿ ಸರ್ವೇಶ್ವರನಿಗೆ ಸಮರ್ಪಿಸಬೇಕೆಂದಿರುವಾಗ ಅವನಿಗಾಗಿ ಪೂರ್ವಹೆಬ್ಬಾಗಿಲನ್ನು ತೆರೆಯಬೇಕು; ಅವನು ಸಬ್ಬತ್‍ದಿನದಲ್ಲಿ ಸಮರ್ಪಿಸುವಂತೆ ದಹನಬಲಿಪ್ರಾಣಿಯನ್ನೂ ಶಾಂತಿಸಮಾಧಾನ ಬಲಿಪ್ರಾಣಿಗಳನ್ನೂ ಸಮರ್ಪಿಸಿ ಹೊರಡಲಿ; ಹೊರಟ ಮೇಲೆ ಬಾಗಿಲನ್ನು ಮುಚ್ಚಬೇಕು. ದಿನನಿತ್ಯದ ಕಾಣಿಕೆ 13 “ನೀನು ಕಳಂಕರಹಿತವಾದ ಒಂದು ವರ್ಷದ ಕುರಿಯನ್ನು ಸರ್ವೇಶ್ವರನಿಗೆ ದಹನಬಲಿಯಾಗಿ ದಿನಂಪ್ರತಿ ಅರ್ಪಿಸಬೇಕು; ಪ್ರತಿದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು. 14 ಅದರೊಂದಿಗೆ ಪ್ರತಿದಿನ ಬೆಳಿಗ್ಗೆ ಧಾನ್ಯನೈವೇದ್ಯವಾಗಿ ಐದು ಸೇರು ಗೋದಿಹಿಟ್ಟನ್ನೂ ಅದನ್ನು ನೆನೆಯಿಸುವುದಕ್ಕೆ ಎರಡು ಸೇರು ಎಣ್ಣೆಯನ್ನೂ ನೀನು ಸಮರ್ಪಿಸಬೇಕು; ಇವುಗಳನ್ನು ಪ್ರತಿನಿತ್ಯವೂ ಸರ್ವೇಶ್ವರನಿಗೆ ಧಾನ್ಯನೈವೇದ್ಯವಾಗಿ ಅರ್ಪಿಸತಕ್ಕದ್ದು; ಇದು ಶಾಶ್ವತ ನಿಯಮ. 15 ಯಾಜಕರು ಕುರಿಯನ್ನೂ ಧಾನ್ಯನೈವೇದ್ಯವನ್ನೂ ಎಣ್ಣೆಯನ್ನೂ ನಿತ್ಯದಹನ ಬಲಿಯಾಗಿ ಪ್ರತಿದಿನ ಬೆಳಿಗ್ಗೆ ಸಮರ್ಪಿಸಬೇಕು.” ರಾಜನ ಸೊತ್ತು ಪರಾಧಿನವಾಗಕೂಡದು 16 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ರಾಜನು ತನ್ನ ಮಕ್ಕಳಲ್ಲಿ ಒಬ್ಬನಿಗೆ ಭೂದಾನ ಮಾಡಿದರೆ ಅದು ತಂದೆಯ ಸೊತ್ತಾದ ಕಾರಣ ಮಕ್ಕಳಿಗೆ ಹಕ್ಕು ಬರುವುದು, ಅದು ಬಾಧ್ಯವಾಗಿ ಸಿಕ್ಕಿದ ಸೊತ್ತೇ. 17 ಆದರೆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನಮಾಡಿದರೆ, ಬಿಡುಗಡೆಯ ವರ್ಷದವರೆಗೆ ಅದು ಅವನ ಅಧೀನವಾಗಿರುವುದು; ಆಮೇಲೆ ಅದು ಪುನಃ ರಾಜನ ವಶವಾಗುವುದು. ಆದರೆ ರಾಜನು ತನ್ನ ಮಕ್ಕಳಿಗೆ ಕೊಟ್ಟ ಸೊತ್ತು ಅವರಿಗೇ ಸೇರಿಬಿಡುವುದು. 18 ಇದಲ್ಲದೆ ರಾಜನು ಪ್ರಜೆಗಳ ಪಿತ್ರಾರ್ಜಿತ ಭೂಮಿಯನ್ನು ಸ್ವಾಧೀನಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು. ಸ್ವಂತ ಭೂಮಿಯನ್ನೇ ವಿಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ; ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗಬೇಕಾಗುವುದು.” ದೇವಾಲಯದ ಪಾಕಶಾಲೆಗಳು 19 ಬಳಿಕ ಆ ಪುರುಷ ನನ್ನನ್ನು ಹೆಬ್ಬಾಗಿಲ ಪಕ್ಕದಲ್ಲಿನ ಪ್ರವೇಶದ ಮಾರ್ಗವಾಗಿ ಉತ್ತರಕ್ಕೆ ಅಭಿಮುಖನಾಗಿ ಹಾಗು ಯಾಜಕರಿಗೆ ನೇಮಕವಾಗಿ ಇರುವ ಪರಿಶುದ್ಧವಾದ ಕೋಣೆಗಳಿಗೆ ಬರಮಾಡಿದನು. ಇಗೋ, ಅವುಗಳ ಹಿಂದೆ ಪಶ್ಚಿಮದಲ್ಲಿ ಒಂದು ಸ್ಥಳವಿತ್ತು. 20 ಆಗ ಅವನು ನನಗೆ, “ಯಾಜಕರು ಹವಿಸ್ಸನ್ನು ಹೊರಗಣ ಪ್ರಾಕಾರಕ್ಕೆ ಒಯ್ದು ಜನರನ್ನು ಶುದ್ಧಿಮಾಡದ ಹಾಗೆ, ಪ್ರಾಯಶ್ಚಿತ್ತ ಬಲಿಪಶುವಿನ ಮತ್ತು ದೋಷಪರಿಹಾರಕ ಬಲಿಪಶುವಿನ ಮಾಂಸವನ್ನು ಬೇಯಿಸುವುದಕ್ಕೂ ಧಾನ್ಯನೈವೇದ್ಯವನ್ನು ಪಕ್ವಮಾಡುವುದಕ್ಕೂ ಈ ಸ್ಥಳ ಏರ್ಪಟ್ಟಿದೆ,” ಎಂದು ಹೇಳಿದನು. 21 ತರುವಾಯ ಅವನು ನನ್ನನ್ನು ಹೊರಗಿನ ಪ್ರಾಕಾರಕ್ಕೆ ಬರಮಾಡಿ ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರೆದುಕೊಂಡುಹೋದನು. ಇಗೋ, ಪ್ರಾಕಾರದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು. 22 ಹೌದು, ಪ್ರಾಕಾರದ ನಾಲ್ಕು ಮೂಲೆಗಳಲ್ಲೂ ಇಪ್ಪತ್ತು ಮೀಟರ್ ಉದ್ದದ, ಹದಿನೈದು ಮೀಟರ್ ಅಗಲದ ಪ್ರತ್ಯೇಕವಾದ ಅಂಗಳಗಳು ಇದ್ದವು; ಮೂಲೆಗಳಲ್ಲಿನ ಆ ನಾಲ್ಕು ಅಂಗಳಗಳು ಒಂದೇ ಅಳತೆಯಾಗಿದ್ದವು. 23 ಅವುಗಳೊಳಗೆ ಸುತ್ತಲು, ಅಂದರೆ ಆ ನಾಲ್ಕು ಅಂಗಳಗಳ ಸುತ್ತುಮುತ್ತಲು ಕಲ್ಲಿನ ವರಸೆಯು ಚಾಚಿಕೊಂಡಿತ್ತು; ಆ ವರಸೆಗಳ ಕೆಳಗೆ ಒಲೆಗಳು ಸುತ್ತಲೂ ಕಟ್ಟಿದ್ದವು. 24 ಆಗ ಅವನು ನನಗೆ, “ಇವು ದೇವಾಲಯದ ಸೇವಕರು ಬಲಿಪ್ರಾಣಿಗಳನ್ನು ತಂದ ಜನರಿಗಾಗಿ ಅವುಗಳ ಮಾಂಸವನ್ನು ಬೇಯಿಸುವ ಪಾಕಶಾಲೆಗಳು,” ಎಂದು ಹೇಳಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India