Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 42 - ಕನ್ನಡ ಸತ್ಯವೇದವು C.L. Bible (BSI)


ದೇವಸ್ಥಾನದ ಹತ್ತಿರದ ಕಟ್ಟಡಗಳು

1 ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಣ ಪ್ರಾಕಾರಕ್ಕೆ ಬರಮಾಡಿ ದೀಕ್ಷಿತರ ಪ್ರಾಕಾರಕ್ಕೂ ಉತ್ತರದ ಪೌಳಿಗೋಡೆಗಳಿಗೂ ನಡುವಣ ಕೋಣೆಗಳಿಗೆ ಕರೆದುತಂದು

2 ಉತ್ತರದ ಬಾಗಿಲುಳ್ಳ ಕೋಣೆಗಳ ಸಾಲಿನ ಮುಂದೆ ನಿಲ್ಲಿಸಿದನು. ಆ ಸಾಲಿನ ಉದ್ದ ಐವತ್ತು ಮೀಟರ್.

3 ಒಳಗಣ ಪ್ರಾಕಾರಕ್ಕೆ ಸೇರಿದ ಹತ್ತು ಮೀಟರ್ ಅಗಲದ ದೀಕ್ಷಿತರ ಪ್ರಾಕಾರಕ್ಕೂ ಹೊರಗಣ ಪ್ರಾಕಾರದ ನೆಲಗಟ್ಟಿಗೂ ನಡುವೆಯಿದ್ದ ಆ ಪ್ರದೇಶ ಇಪ್ಪತ್ತೈದು ಮೀಟರ್ ಅಗಲ. ಅಲ್ಲಿನ ಎರಡು ಸಾಲುಗಳ ಮೂರನೆಯ ಅಂತಸ್ತಿನ ಅಂಚಿನ ದಾರಿಗಳು ಒಂದಕ್ಕೊಂದು ಎದುರಾಗಿದ್ದವು.

4 ಆ ಸಾಲುಗಳ ನಡುವೆ ಐವತ್ತು ಮೀಟರ್ ಉದ್ದದ, ಐದು ಮೀಟರ್ ಅಗಲದ ಓಣಿಯೊಂದಿತ್ತು; ಕೋಣೆಗಳ ಬಾಗಿಲುಗಳು ಉತ್ತರದ ಕಡೆಗಿದ್ದವು.

5 ಮೇಲಣ ಕೋಣೆಗಳು ನಡುವಣ ಮತ್ತು ಕೆಳಗಣ ಕೋಣೆಗಳಿಗಿಂತ ಇಕ್ಕಟ್ಟಾಗಿದ್ದವು. ಅಂಚಿನ ದಾರಿಗಳು ಅವುಗಳ ಅಗಲವನ್ನು ತಿಂದುಬಿಟ್ಟಿದ್ದವು.

6 ಕೋಣೆಗಳು ಮೂರಂತಸ್ತಾಗಿದ್ದವು; ಹೊರಗಿನ ಪ್ರಾಕಾರದ ಕೋಣೆಗಳಿಗೆ ಇದ್ದಂತೆ ಈ ಕೋಣೆಗಳಿಗೆ ಕೈಸಾಲೆಗಳಿರಲಿಲ್ಲ; ಆದುದರಿಂದ ನೆಲಕ್ಕೆತ್ತರದಲ್ಲಿನ ಮೇಲಿನ ಕೋಣೆಗಳು ಕೆಳಗಿನ ಮತ್ತು ನಡುವಣ ಕೋಣೆಗಳಿಗಿಂತ ಇಕ್ಕಟ್ಟಾಗಿದ್ದವು.

7 ಹೊರಗಿನ ಪ್ರಾಕಾರದ ಕಡೆಗಿರುವ ಕೋಣೆಗಳ ಸಾಲಿಗೆ ಸಮವಾಗಿ ಹೊರ ಗೋಡೆಯೊಂದಿತ್ತು. ಅದು ಇಪ್ಪತ್ತೈದು ಮೀಟರ್ ಉದ್ದವಾಗಿ ಎರಡನೆಯ ಸಾಲಿಗೆ ಎದುರಾಗಿತ್ತು.

8 ಹೊರಗಣ ಪ್ರಾಕಾರದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಇಪ್ಪತ್ತೈದು ಮೀಟರ್, ದೇವಸ್ಥಾನದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಐವತ್ತು ಮೀಟರ್.

9 ಕೋಣೆಗಳ ಪ್ರಾಕಾರದ ಪೂರ್ವದಲ್ಲಿ ಕೆಳಗಿನ ಮಟ್ಟದಲ್ಲಿ ಆ ಪ್ರಾಕಾರದ ಗೋಡೆಯ ನಡುವೆ ಹೊರಗಿನ ಪ್ರಾಕಾರದಿಂದ ಅಲ್ಲಿಗೆ ಸೇರುವ ಮಾರ್ಗವಿತ್ತು.

10 ಇದಲ್ಲದೆ, ಪೂರ್ವದಕಡೆ ದೀಕ್ಷಿತರ ಪ್ರಾಕಾರಕ್ಕೂ ಪೌಳಿಗೋಡೆಗೂ ನಡುವೆ ಕೊಠಡಿಗಳಿದ್ದವು.

11 ಇವುಗಳ ಮುಂದೆ ಓಣಿಯೊಂದಿತ್ತು; ಅವು ಉತ್ತರದ ಕೋಣೆಗಳಂತೆ ಕಾಣಿಸುತ್ತಿದ್ದವು. ಇವುಗಳ ಉದ್ದ ಹಾಗು ಅಗಲ ಅವುಗಳ ಉದ್ದ ಹಾಗು ಅಗಲ ಒಂದೆ. ಇವುಗಳ ರಚನಾಕ್ರಮದ್ವಾರ, ನಿರ್ಗಮಸ್ಥಾನಗಳೆಲ್ಲವೂ ಅವುಗಳಂತಿದ್ದವು, ದಕ್ಷಿಣ ಕೋಣೆಗಳು ಹಾಗೆಯೇ ಇದ್ದವು.

12 ಕೋಣೆಗಳ ಪ್ರಾಕಾರವನ್ನು ಪೂರ್ವದಲ್ಲಿ ಸೇರುವ ಕಡೆ, ಗೋಡೆಯ ಪಕ್ಕದಲ್ಲಿ ಇರುವ ದಾರಿಯ ಕೊನೆಯಲ್ಲಿ ಒಂದು ಬಾಗಿಲಿತ್ತು.

13 ಆಗ ನನಗೆ, ‘ದೀಕ್ಷಿತರ ಪ್ರಾಕಾರದ ಉತ್ತರ ದಕ್ಷಿಣ ಕಡೆಗಳಲ್ಲಿನ ಕೋಣೆಗಳು ಪರಿಶುದ್ಧವಾದವು; ಅಲ್ಲಿ ಸರ್ವೇಶ್ವರನ ಸನ್ನಿಧಿಸೇವಕರಾದ ಯಾಜಕರು ಮಹಾಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ, ಮತ್ತು ಧಾನ್ಯನೈವೇದ್ಯ ದೋಷಪರಿಹಾರಕಬಲಿದ್ರವ್ಯ, ಪ್ರಾಯಶ್ಚಿತ್ತಬಲಿದ್ರವ್ಯ ಎಂಬೀ ಮಹಾಪರಿಶುದ್ಧ ಪದಾರ್ಥಗಳನ್ನು ಅಲ್ಲಿಡುತ್ತಾರೆ. ಆ ಸ್ಥಳ ಪರಿಶುದ್ಧ.

14 ಯಾಜಕರು ಪರಿಶುದ್ಧ ಪ್ರಾಕಾರವನ್ನು ಪ್ರವೇಶಿಸಿದ ಮೇಲೆ ಅದನ್ನು ಬಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಕೂಡದು; ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲೇ ತೆಗೆದಿಟ್ಟುಕೊಳ್ಳಬೇಕು, ಅವೂ ಪರಿಶುದ್ಧವಾದುವು. ಆಮೇಲೆ ಬೇರೆ ವಸ್ತ್ರಗಳನ್ನು ಹಾಕಿಕೊಂಡು ಜನಸಾಮಾನ್ಯರ ಪ್ರಾಕಾರಕ್ಕೆ ಬರುತ್ತಾರೆ,’ ಎಂದನು.


ದೇವಾಲಯದ ಸುತ್ತಮುತ್ತಣ ಅಳತೆ

15 ಆ ಪುರುಷನು ಒಳಗಿನ ಮಂದಿರವನ್ನು ಅಳೆದ ನಂತರ ನನ್ನನ್ನು ಪೂರ್ವಹೆಬ್ಬಾಗಿಲ ಮಾರ್ಗವಾಗಿ ಈಚೆಗೆ ಕರೆದುತಂದು ಆಲಯವನ್ನೆಲ್ಲಾ ಸುತ್ತುಮುತ್ತಲು ಅಳೆದನು.

16 ಪೂರ್ವದಿಕ್ಕಿನಲ್ಲಿ ಉದ್ದಕ್ಕೂ ಅಳತೇ ಕೋಲಿನಿಂದ ಐನೂರು ಕೋಲಳೆದನು.

17 ಉತ್ತರ ದಿಕ್ಕಿನಲ್ಲಿ ಉದ್ದಕ್ಕೂ ಅಳತೇಕೋಲಿನಿಂದ ಐನೂರು ಕೋಲಳೆದನು.

18 ಪಶ್ಚಿಮ ಗೋಡೆಯ ಕಡೆಗೆ ತಿರುಗಿಕೊಂಡು ಅಳತೇಕೋಲಿನಿಂದ ಐನೂರು ಕೋಲಳೆದನು.

19 ದಕ್ಷಿಣ ದಿಕ್ಕಿನಲ್ಲಿ ಉದ್ದಕ್ಕೂ ಅಳತೇಕೋಲಿನಿಂದ ಐನೂರು ಕೋಲಳೆದನು.

20 ಆಲಯವನ್ನು ನಾಲ್ಕು ಪಾರ್ಶ್ವಗಳಲ್ಲಿಯೂ ಅಳೆದನು; ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಪ್ರದೇಶಗಳನ್ನು ವಿಂಗಡಿಸುವುದಕ್ಕೆ ಐನೂರಳತೇ ಕೋಲುದ್ದದ, ಐನೂರಳತೇ ಕೋಲಗಲದ ಗೋಡೆ ಸುತ್ತಮುತ್ತಲಿತ್ತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು