ಯೆಹೆಜ್ಕೇಲನು 38 - ಕನ್ನಡ ಸತ್ಯವೇದವು C.L. Bible (BSI)ಗೋಗನು ಸರ್ವೇಶ್ವರನ ಒಂದು ಅಸ್ತ್ರ 1 ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು: 2 “ನರಪುತ್ರನೇ, ರೋಷಿನವರನ್ನು, ಮೆಷೆಕಿನವರನ್ನು ಹಾಗು ತೂಬಲಿನವರನ್ನು ಆಳುವ ಮಾಗೋಗ್ ದೇಶದ ದೊರೆಯಾದ ಗೋಗನ ಕಡೆಗೆ ಮುಖಮಾಡಿ ಅವನಿಗೆ ಈ ದೈವೋಕ್ತಿಯನ್ನು ನುಡಿ: 3 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ, ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ರಾಜನಾದ ಗೋಗನೇ, 4 ಇಗೋ, ನಾನು ನಿನಗೆ ವಿರುದ್ಧವಾಗಿ ನಿನ್ನನ್ನು ತಿರುಗಿಸಿ, ನಿನ್ನ ದವಡೆಗೆ ಕೊಕ್ಕೆಹಾಕಿ ಈಚೆಗೆ ಎಳೆಯುವೆನು. ಅಶ್ವಾರೂಢರು, ಖೇಡ್ಯಪ್ರಾಣಿಗಳು, ಎಲ್ಲ ವಿಚಿತ್ರಾಂಬರು ಹಾಗು ಖಡ್ಗಹಸ್ತರು ಆದ ರಾಹುತರ ದೊಡ್ಡ ತಂಡದಿಂದ ಕೂಡಿದ ನಿನ್ನ ಸೈನ್ಯವೆಲ್ಲವನ್ನು, 5 ಮತ್ತು ಎಲ್ಲ ಖೇಡ್ಯಶಿರಸ್ತ್ರಾಣಧಾರಿಗಳಾದ ಪರ್ಷಿಯರು, ಕೂಸ್ಯರು, ಪೂಟ್ಯರು ಇವರನ್ನು ಹಾಗು 6 ಪಡೆಪಡೆಯಾದ ಗೋಮೆರ್ಯರನ್ನು, ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಪಡೆಪಡೆಯಾದ ತೋಗರ್ಮದವರನ್ನು, ಹೀಗೆ ಅನೇಕಾನೇಕ ಜನಾಂಗಗಳನ್ನು ನಿನ್ನೊಂದಿಗೆ ಬರಮಾಡುವೆನು. 7 ಸಿದ್ಧವಾಗಿರು, ನಿನ್ನಲ್ಲಿಗೆ ಕೂಡಿಬಂದಿರುವ ಎಲ್ಲ ತಂಡಗಳೊಡನೆ ನಿನ್ನನ್ನು ಸಿದ್ಧಮಾಡಿಕೋ; ನೀನು ಅವುಗಳಿಗೆ ಪಾಲಕನಾಗಿರು. 8 ಬಹುದಿನಗಳ ಮೇಲೆ ನಿನಗೆ ಅಪ್ಪಣೆಯಾಗಿರುವುದು; ಖಡ್ಗದಿಂದ ನಾಶವಾಗಿ, ಪುನರ್ಜೀವಿತವಾದ ದೇಶದೊಳಗೆ ನೀನು ಕಾಲಾನುಕಾಲಕ್ಕೆ ನುಗ್ಗಿ, ಅನೇಕ ಜನಾಂಗಗಳಿಂದ ಒಟ್ಟುಗೂಡಿದ ನನ್ನ ಜನರ ಮೇಲೆ ಬೀಳುವೆ; ಹೌದು, ಜನಾಂಗಗಳಿಂದ ಪಾರಾದ ಆ ಜನರೆಲ್ಲರು ಬಹುಕಾಲ ಹಾಳಾಗಿದ್ದ ಇಸ್ರಯೇಲಿನ ಪರ್ವತಗಳಲ್ಲಿ ನೆಮ್ಮದಿಯಾಗಿ ವಾಸಿಸುತ್ತಿರುವಾಗ ನೀನು ಅವರ ಮೇಲೆ ಬೀಳುವೆ. 9 ನೀನೂ ನಿನ್ನ ಎಲ್ಲ ಪಡೆಗಳೂ ನಿನ್ನೊಂದಿಗಿರುವ ಬಹು ಜನಾಂಗಗಳೂ ಬಿರುಗಾಳಿಯಂತೆ ಹೊರಟುಬರುವಿರಿ; ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವಿರಿ.’ 10 “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಆಗ ನಿನ್ನ ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವುವು: 11 ನೀನು, ‘ಆಹಾ, ನಾನು ಪೌಳಿಗೋಡೆಯಿಲ್ಲದ, ಹಳ್ಳಿಪಳ್ಳಿಗಳು ತುಂಬಿದ ದೇಶವನ್ನು ನುಗ್ಗಿ, ಅಗುಳಿ ಬಾಗಿಲು ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು,’ ಎಂದುಕೊಂಡು ಸೂರೆಗೈಯಲು ಆಶಿಸುವೆ; 12 ‘ಕೊಳ್ಳೆಹೊಡೆಯಬೇಕು, ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳ ಮೇಲೆ ಕೈಮಾಡಬೇಕು ಹಾಗು ಜನಾಂಗಗಳಿಂದ ಒಟ್ಟುಗೂಡಿ, ದನ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು ಲೋಕದ ನಟ್ಟನಡುವೆ ವಾಸಿಸುವವರನ್ನು ಹತಿಸಬೇಕು’ ಎಂದು ಕುತಂತ್ರ ಕಲ್ಪಿಸುವೆ. 13 ಶೆಬದವರು, ದೆದಾನಿನವರು, ತಾರ್ಷೀಷಿನ ವರ್ತಕರು ಹಾಗು ಅದರ ಸಿಂಹಪ್ರಾಯರೆಲ್ಲರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲಿಕ್ಕೆ ಬಂದಿಯೋ? ಕೊಳ್ಳೆಹೊಡೆದು ಬೆಳ್ಳಿಬಂಗಾರವನ್ನು ದೋಚಿಕೊಂಡು, ದನ ಮುಂತಾದ ಸೊತ್ತನ್ನು ಅಪಹರಿಸಿ, ಅಪಾರವಾದ ಆಸ್ತಿಯನ್ನು ಸುಲಿದುಕೊಂಡು ಹೋಗಲು ನಿನ್ನ ತಂಡವನ್ನು ಕೂಡಿಸಿಕೊಂಡು ಬಂದಿಯೋ?’ ಎಂದು ಕೇಳುವರು. 14 “ಹೀಗಿರಲು ನರಪುತ್ರನೇ, ನೀನು ಗೋಗನಿಗೆ ಈ ದೈವೋಕ್ತಿಯನ್ನು ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನನ್ನ ಜನರಾದ ಇಸ್ರಯೇಲರು ನೆಮ್ಮದಿಯಾಗಿ ವಾಸಿಸುವ ಕಾಲದಲ್ಲಿ ಆ ನೆಮ್ಮದಿಯು ನನಗೆ ಗೊತ್ತಾಗುವುದಿಲ್ಲವೆ? 15 ನೀನು ನಿನ್ನ ಸ್ಥಳವನ್ನು ಬಿಟ್ಟು, ಅಶ್ವಬಲದ ಮಹಾಸೈನ್ಯವಾಗಿ ಗುಂಪುಕೂಡಿದ ಬಹುಜನಾಂಗಗಳೊಡನೆ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರುವೆ. 16 ನನ್ನ ಜನರಾದ ಇಸ್ರಯೇಲರ ಮೇಲೆ ಬಿದ್ದು ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವೆ. ಗೋಗನೇ, ಜನಾಂಗಗಳ ಕಣ್ಣೆದುರಿಗೆ ನಿನ್ನ ನಾಶದಿಂದ ನನ್ನ ಗೌರವವನ್ನು ಕಾಪಾಡಿಕೊಂಡು, ನಾನೇ ಸರ್ವೇಶ್ವರ ಎಂದು ಜನಾಂಗಗಳಿಗೆ ಗೋಚರನಾಗುವಂತೆ ನಾನು ನಿನ್ನನ್ನು ಕಾಲಾನುಕಾಲಕ್ಕೆ ನನ್ನ ನಾಡಿನ ಮೇಲೆ ಬೀಳಮಾಡುವೆನು. 17 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನನ್ನ ದಾಸರಾದ ಇಸ್ರಯೇಲಿನ ಪ್ರವಾದಿಗಳು ಪುರಾತನಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ ನಾನು ಒಬ್ಬನನ್ನು ಇಸ್ರಯೇಲರ ಮೇಲೆ ಬೀಳಮಾಡುವೆನು, ಎಂದು ಮುಂತಿಳಿಸಿದ್ದರು; ನಾನು ಅವರ ಮುಖಾಂತರ ಮುಂತಿಳಿಸಿದವನು ನೀನೇ ಅಲ್ಲವೇ?’ ಗೋಗನಿಗಾದ ದಂಡನೆ 18 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಗೋಗನು ಇಸ್ರಯೇಲ್ ನಾಡಿನ ಮೇಲೆ ಬೀಳುವ ದಿನದಲ್ಲಿ ನಾನು ಸಿಟ್ಟಿನಿಂದ ಬುಸುಗುಟ್ಟುವೆನು. 19 ನಾನು ರೋಷಾನಿಷ್ಟನಾಗಿ ಕೋಪದಿಂದುರಿಯುತ್ತಾ ಹೀಗೆ ನುಡಿದಿದ್ದೇನೆ: ಆಹಾ, ಆ ದಿನದಲ್ಲಿ, ಇಸ್ರಯೇಲ್ ನಾಡಿನೊಳಗೆ ಅದ್ಭುತಕಂಪನವಾಗುವುದು ಖಂಡಿತ; 20 ಸಮುದ್ರದ ಮೀನುಗಳು, ಆಕಾಶದ ಪಕ್ಷಿಗಳು, ಭೂಜಂತುಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಹಾಗು ಜಗದ ಸಕಲ ಮಾನವರು ನನ್ನೆದುರಿಗೆ ನಡುಗುವರು; ಪರ್ವತಗಳು ಉರುಳಿಹೋಗುವುವು, ಝರಿಗಳು ಕವಚಿಕೊಳ್ಳುವುವು, ಎಲ್ಲ ಗೋಡೆಗಳು ನೆಲಸಮವಾಗುವುವು. 21 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ಖಡ್ಗವು ನನ್ನ ಪರ್ವತಗಳಲ್ಲೆಲ್ಲಾ ಗೋಗನವರನ್ನು ಸಂಹರಿಸಲಿ,’ ಎಂದು ಅಪ್ಪಣೆಕೊಡುವೆನು; ಒಬ್ಬರಿಂದೊಬ್ಬರು ಹತರಾಗುವರು. 22 ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡುವೆನು. ಅವನ ಮೇಲೂ ಅವನ ಪಡೆಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು. 23 ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಬಹುಜನಾಂಗಗಳು ನಾನೇ ಸರ್ವೇಶ್ವರ ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India