ಯೆಹೆಜ್ಕೇಲನು 35 - ಕನ್ನಡ ಸತ್ಯವೇದವು C.L. Bible (BSI)ಎದೋಮಿನ ಬೆಟ್ಟ ಕುರಿತ ದೈವೋಕ್ತಿ 1 ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು - 2 “ನರಪುತ್ರನೇ, ನೀನು ಸೇಯೀರ ಬೆಟ್ಟದ ಸೀಮೆಗೆ ಅಭಿಮುಖನಾಗಿ ಅದಕ್ಕೆ ಈ ದೈವೋಕ್ತಿಯನ್ನು ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ : - 3 ಎದೋಮೇ ಇಗೋ, ನಿನಗೆ ನಾ ವಿರೋಧಿಯಾಗಿರುವೆ ನಿನ್ನ ನಾಡಿನ ಮೇಲೆ ಕೈಯೆತ್ತಿ ನಾಶಪಡಿಸುವೆ. 4 ನಿನ್ನ ಪಟ್ಟಣಗಳು ಹಾಳಾಗುವುವು; ನೀ ಕಾಡಾಗುವೆ. ಆಗ ನಾನೇ ಸರ್ವೇಶ್ವರನೆಂದು ನೀನು ತಿಳಿದುಕೊಳ್ಳುವೆ. 5 “ನೀನು ಇಸ್ರಯೇಲಿನ ಮೇಲೆ ದೀರ್ಘ ದ್ವೇಷವಿಟ್ಟು, ಅವರ ಅಪರಾಧದ ಕಡೆಗಾಲದಲ್ಲಿ ಆಪತ್ತು ಸಂಭವಿಸಿದಾಗ, ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದ್ದೆ. 6 ಆದುದರಿಂದ ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯಮಾಡುವೆನು. ರಕ್ತದ ಕೋಡಿ ನಿನ್ನನ್ನು ಹಿಂದಟ್ಟುವುದು; ನೀನು ರಕ್ತ ಸುರಿಸುವುದಕ್ಕೆ ಹೇಸದೆ ಹೋದ ಕಾರಣ, ರಕ್ತಪ್ರವಾಹವೇ ನಿನ್ನ ಬೆನ್ನಹತ್ತುವುದು; ಇದು ಸರ್ವೇಶ್ವರನಾದ ದೇವರ ನುಡಿ. 7 ಸೆಯೀರ್ ಬೆಟ್ಟವೇ, ನಾನು ನಿನ್ನ ಸೀಮೆಯನ್ನು ಹಾಳುಪಾಳು ಮಾಡಿ ಅದರೊಳಗೆ ಹೋಗುವವರನ್ನೂ ಬರುವವರನ್ನೂ ಕತ್ತರಿಸಿಬಿಟ್ಟು, 8 ನಿನ್ನ ಪರ್ವತಗಳನ್ನು ನಿನ್ನವರ ಶವಗಳಿಂದ ತುಂಬಿಸುವೆನು; ಖಡ್ಗಹತರು ನಿನ್ನ ಗುಡ್ಡತಗ್ಗು ತೊರೆಗಳಲ್ಲಿ ಬಿದ್ದುಹೋಗುವರು. 9 ನಾನು ನಿನ್ನನ್ನು ನಿತ್ಯನಾಶನಕ್ಕೆ ಈಡುಮಾಡುವೆನು; ನಿನ್ನ ಪಟ್ಟಣಗಳು ನಿರ್ಜನವಾಗುವುವು; ಆಗ ನಾನೇ ಸರ್ವೇಶ್ವರ ಎಂದು ನಿನ್ನವರಿಗೆ ನಿಶ್ಚಿತವಾಗುವುದು. 10 “ನೀನು ‘ಇವೆರಡು ಜನಾಂಗಗಳೂ ಇವೆರಡು ದೇಶಗಳೂ ನನ್ನ ವಶವಾಗುವುವು, ನಾವು ಅವುಗಳನ್ನು ಅನುಭವಿಸುವೆವು’ ಎಂದುಕೊಂಡು ಅಲ್ಲಿನ ನನ್ನ ಸಾನ್ನಿಧ್ಯವನ್ನು ಅಲಕ್ಷ್ಯಮಾಡಿದ್ದೆ. 11 ಆದುದರಿಂದ ನನ್ನ ಜೀವದಾಣೆ, ನೀನು ನನ್ನ ಜನರನ್ನು ದ್ವೇಷಿಸಿ, ಅವರ ಮೇಲಿಟ್ಟ ಕೋಪಕ್ಕೂ ಮಾತ್ಸರ್ಯಕ್ಕೂ ನಾನು ನಿನಗೆ ಪ್ರತೀಕಾರಮಾಡುವೆನು; ನಿನ್ನನ್ನು ದಂಡಿಸುವಾಗ ನಾನು ಅವರಿಗೆ ಗೋಚರವಾಗುವೆನು. ಇದು ಸರ್ವೇಶ್ವರನಾದ ದೇವರ ನುಡಿ. 12 ನೀನು ಇಸ್ರಯೇಲಿನ ಪರ್ವತಗಳನ್ನು ನೋಡಿ, - ‘ಆಹಾ, ಹಾಳಾದವು, ನಮಗೆ ತಿನ್ನುವ ತುತ್ತಾಗಿವೆ,’ ಎಂದು ಮಾಡಿದ ದೂಷಣೆಗಳು ಸರ್ವೇಶ್ವರನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು. 13 ನಿನ್ನವರು ದೊಡ್ಡ ಬಾಯಿಮಾಡಿ ನನ್ನ ಮೇಲೆ ಆಡಿದ ಅತಿಯಾದ ಹರಟೆಗಳನ್ನು ಕೇಳಿದ್ದೇನೆ.” 14 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ನಿನ್ನನ್ನು ಹಾಳುಮಾಡಿ ಜಗವನ್ನೆಲ್ಲಾ ಸಂತೋಷಪಡಿಸುವೆನು. 15 ಇಸ್ರಯೇಲರ ಸೊತ್ತಿನ ನಾಶನಕ್ಕೆ ಜಗವೆಲ್ಲಾ ಸಂತೋಷಪಡುವಂತೆ ಮಾಡುವೆನು; ಸೆಯೀರ್ ಬೆಟ್ಟವೇ, ನೀನು ಹಾಳಾಗುವೆ; ಹೌದು, ಎದೋಮ್ ಸೀಮೆಯೆಲ್ಲಾ ತೀರಾ ಹಾಳಾಗುವುದು; ಆಗ ನಾನೇ ಸರ್ವೇಶ್ವರ ಎಂದು ವ್ಯಕ್ತವಾಗುವುದು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India