Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 28 - ಕನ್ನಡ ಸತ್ಯವೇದವು C.L. Bible (BSI)


ಟೈರಿನ ಪ್ರಭುವಿನ ಅಹಂಭಾವ - ಅದರ ಖಂಡನೆ

1 ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸದರು -

2 “ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ.

3 ನೀನು ದಾನಿಯೇಲನಿಗಿಂತಲೂ ಬುದ್ಧಿವಂತನೋ? ಹಾಗಾದರೆ ನಿನಗೆ ಮರೆಯಾದ ರಹಸ್ಯ ಯಾವುದೂ ಇಲ್ಲ!

4 ನಿನ್ನ ಜ್ಞಾನವಿವೇಕಗಳಿಂದ ಐಶ್ವರ್ಯವನ್ನು ಗಳಿಸಿ, ನಿನ್ನ ಬೊಕ್ಕಸಗಳಲ್ಲಿ ಬೆಳ್ಳಿಬಂಗಾರವನ್ನು ತುಂಬಿಸಿಕೊಂಡಿರುವೆ.

5 ನಿನ್ನ ಅಧಿಕ ಜ್ಞಾನದಿಂದ ಹಾಗು ವ್ಯಾಪಾರದಿಂದ ಸಿರಿಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ಆದುದರಿಂದ ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಹೋಗಿದೆ.

6 ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ನಿನ್ನನ್ನೆ ದೇವರಿಗೆ ಸಮನಾಗಿಸಿಕೊಂಡಿರುವೆ.

7 ‘ಆದುದರಿಂದ ನಾನು ಅತಿಭಯಂಕರ ಜನಾಂಗದವರಾದ ಮ್ಲೇಚ್ಛರನ್ನು ನಿನ್ನ ಮೇಲೆ ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ಕತ್ತಿ ಹಿರಿದು, ನಿನ್ನ ಹೊಳಪನ್ನು ಹೊಲಸುಮಾಡುವರು.

8 ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು; ಸಮುದ್ರಮಧ್ಯೆ ಹತರಾದವರ ಗತಿ ನಿನಗೆ ಸಂಭವಿಸುವುದು.

9 ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ‘ನಾನು ದೇವರು’ ಎಂದು ಹೇಳಬಲ್ಲೆಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ!

10 ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ; ನಾನೇ ನುಡಿದಿದ್ದೇನೆ, ಇದು ಸರ್ವೇಶ್ವರನಾದ ದೇವರ ಸಂಕಲ್ಪ.”


ಟೈರಿನ ಅರಸನ ಪತನ

11 ಸರ್ವೇಶ್ವರ ದಯಪಾಲಿಸಿದ ಇನ್ನೊಂದು ವಾಣಿ ನನಗೆ ಹೀಗೆಂದಿತು:

12 “ನರಪುತ್ರನೇ, ನೀನು ಟೈರಿನ ಅರಸನನ್ನು ಕುರಿತು ಶೋಕಗೀತೆಯೊಂದನ್ನು ಹಾಡಿ ಅವನಿಗೆ ಹೀಗೆ ನುಡಿ: ಸರ್ವೇಶ್ವರನಾದ ದೇವರು ಹೀಗೆನ್ನುತ್ತಾರೆ: - “ನೀನು ಸರ್ವಸುಲಕ್ಷಣ ಶಿರೋಮಣಿ ಪರಿಪೂರ್ಣ ಸುಂದರ, ಪೂರ್ಣಜ್ಞಾನಿ!

13 ನೀನಿದ್ದೆ ದೇವರ ಉದ್ಯಾನವನದ ಏದೆನಿನೊಳು ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ಬೆರುಲ್ಲ, ವೈಡೂರ್ಯ, ನೀಲ, ಕೆಂಪರಲು, ಸ್ಫಟಿಕವೆಂಬ ನವರತ್ನಗಳಿಂದ ಭೂಷಿತನಾಗಿದ್ದೆ ನೀನು. ನಿನ್ನ ಕಿವಿಯೋಲೆ ಆಭರಣಗಳು ಸುವರ್ಣಖಚಿತವಾಗಿದ್ದವು. ನಿನ್ನ ಸೃಷ್ಟಿಯ ದಿನದಂದೇ ಸಿದ್ಧವಾಗಿದ್ದವವು.

14 ರೆಕ್ಕೆ ತೆರೆದು ನೆರಳು ನೀಡುವ ಕೆರೂಬಿ ನೀನಾಗಿದ್ದೆ ದೇವರ ಪರಿಶುದ್ಧ ಮರೆಯಲ್ಲಿ ನಿನ್ನ ನಾ ನೆಲೆಗೊಳಿಸಿದ್ದೆ. ಕೆಂಡದ ಮಡುಮಧ್ಯೆ ನೀ ವಿಹಾರಮಾಡುತ್ತಿದ್ದೆ.

15 ಹುಟ್ಟಿದ ದಿನದಿಂದ ಅಪರಾಧವೆಸಗುವವರೆಗೆ ನಿರ್ದೋಷವಾಗಿತ್ತು ನಿನ್ನ ನಡತೆ.

16 ನೀ ಪಾಪಿಯಾದೆ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಹಿಂಸಾಚಾರಗಳು ತುಂಬಿಕೊಂಡದ್ದರಿಂದ. ಎಂದೇ, ಹೊಲಸೆಂಬಂತೆ ನಿನ್ನ ತಳ್ಳಿಬಿಟ್ಟೆ ದೇವರ ಬೆಟ್ಟದಿಂದ ಕಿತ್ತೆಸೆದುಬಿಟ್ಟೆ ಕೆಂಡದ ನಡು ಮಡುವಿನ ನೆಲೆಯಿಂದ ನೆರಳು ನೀಡುವ ಕೆರೂಬಿಯೇ ಎಸೆಯಿತು ನಿನ್ನನ್ನು ಅಲ್ಲಿಂದ.

17 ಸೊಬಗಿನ ನಿಮಿತ್ತ ನೀ ಗರ್ವಿಯಾದೆ ಮೆರೆತದಿಂದ ಬುದ್ಧಿಯನ್ನು ಕಳೆದುಕೊಂಡೆ. ಎಂದೇ, ನಾ ನಿನ್ನನ್ನು ದೊಬ್ಬಿಬಿಟ್ಟೆ, ನೆಲಕೆ ಅರಸರ ಕಣ್ಮುಂದೆ ಎಸೆದೆ ಅವರಿಗೆ ಅವರಿಗೆ ನೋಟವಾಗಲೆಂದೆ.

18 ಅಪಾರ ಅಪರಾಧಗಳಿಂದ, ಅನ್ಯಾಯ ವ್ಯಾಪಾರಗಳಿಂದ ನಿನ್ನಲ್ಲಿನ ಪವಿತ್ರಾಲಯ ಅಶುದ್ಧವಾಯಿತು ನಿನ್ನಿಂದ. ಎಂದೇ, ನಾ ಬರಮಾಡಿದೆ ಬೆಂಕಿಯನು ನಿನ್ನೊಳಗಿಂದ ನೋಡ್ವರೆಲ್ಲರ ಮುಂದೆ ಸುಟ್ಟು ಭಸ್ಮ ಮಾಡಿತು ನಿನ್ನ.

19 ನಿನ್ನೀ ಗತಿ ನೋಡಿ ಬೆರಗಾದರು ನಿನ್ನನ್ನರಿತ ರಾಷ್ಟ್ರಗಳು ಪೂರ್ತಿಯಾಗಿ ನೀ ಧ್ವಂಸವಾದೆ, ಇಲ್ಲವಾದೆ ಇನ್ನೆಂದಿಗೂ.”


ಸಿದೋನನ್ನು ಕುರಿತ ದೈವೋಕ್ತಿ

20 ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:-

21 “ನರಪುತ್ರನೇ, ನೀನು ಸಿದೋನಿಗೆ ಅಭಿಮುಖನಾಗಿ ಅದರ ಬಗ್ಗೆ ಹೀಗೆ ನುಡಿ -

22 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಆಹಾ, ಸಿದೋನೇ, ನಾನು ನಿನಗೆ ವಿರುದ್ಧನಾಗಿ ನಿನ್ನ ಮಧ್ಯದಲ್ಲೆ ಪ್ರಖ್ಯಾತಿಗೊಳ್ಳುವೆನು ; ನಾನು ಈ ಪಟ್ಟಣವನ್ನು ದಂಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡ ಮೇಲೆ, ನಾನೇ ಸರ್ವೇಶ್ವರ ಎಂದು ಎಲ್ಲರಿಗು ಗೊತ್ತಾಗುವುದು.

23 ನಾನು ಅದರಲ್ಲಿ ವ್ಯಾಧಿಯನ್ನೂ ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟುಮಾಡುವೆನು; ಖಡ್ಗವು ಸುತ್ತುಮುತ್ತಲು ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ತಿಳಿದುಬರುವುದು.

24 ಇಸ್ರಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನಿರದು; ಹೀನೈಸುವ ನೆರೆಹೊರೆಯವರೆಂಬ ಕಂಟಕದ ಬಾಧೆ ಇನ್ನಾಗದು; ನಾನೇ ಸರ್ವೇಶ್ವರನಾದ ದೇವರು ಎಂದು ಅವರಿಗೆ ವ್ಯಕ್ತವಾಗುವುದು.”


ಇಸ್ರಯೇಲಿನ ಮುಂದಿನ ಸುಸ್ಥಿತಿ

25 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಜನಾಂಗಗಳಲ್ಲಿ ಚದುರಿಹೋಗಿರುವ ಇಸ್ರಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.

26 ಅಲ್ಲಿ ನಿರ್ಭಯವಾಗಿರುವರು; ಮನೆಗಳನ್ನು ಕಟ್ಟಿಕೊಂಡು, ತೋಟಗಳನ್ನು ಮಾಡಿಕೊಂಡು, ಸುಖವಾಗಿ ವಾಸಿಸುವರು; ಅವರನ್ನು ಹೀನೈಸುವ ನೆರೆಹೊರೆಯವರನ್ನು ನಾನು ದಂಡಿಸಿದ ಮೇಲೆ ನಾನೇ ತಮ್ಮ ದೇವರಾದ ಸರ್ವೇಶ್ವರ ಎಂದು ಅವರಿಗೆ ನಿಶ್ಚಯವಾಗುವುದು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು