ಯೆಹೆಜ್ಕೇಲನು 27 - ಕನ್ನಡ ಸತ್ಯವೇದವು C.L. Bible (BSI)ವ್ಯಾಪಾರದ ನಾವೆಯಂತಿದ್ದ ಟೈರ್ ನಗರದ ಶೋಕಗೀತೆ 1 ಸರ್ವೇಶ್ವರಸ್ವಾಮಿ ನನಗೆ ಅನುಗ್ರಹಿಸಿದ ಮತ್ತೊಂದು ವಾಣಿ: 2 “ನರಪುತ್ರನೇ, ಟೈರ್‍ನಗರ ಕುರಿತ ಶೋಕಗೀತೆಯೊಂದನ್ನು ಹಾಡಿ, ಹೀಗೆಂದು ಹೇಳು: 3 ಸಮುದ್ರದ್ವಾರದಲ್ಲಿ ವಾಸಿಸುವ ನಗರಿಯೇ, ರಾಷ್ಟ್ರಗಳಿಗೂ ಹಲವಾರು ದ್ವೀಪಗಳಿಗೂ ನಡುವೆ ವ್ಯಾಪಾರ ನಡೆಸುವವಳೇ, ಸರ್ವೇಶ್ವರನಾದ ದೇವರು ಹೇಳುವುದನ್ನು ಕೇಳು: “ಟೈರ್ ನಗರಿಯೇ, ‘ನಾನೋರ್ವ ನಾವೆ,’ ‘ಸರ್ವಾಂಗ ಸುಂದರಿ ನಾನಾಗಿರುವೆ,’ ಎಂದು ಕೊಚ್ಚಿಕೊಂಡೆಯಲ್ಲವೆ? 4 ನಿನ್ನ ನೆಲೆಯಿರುವುದು ಸಮುದ್ರಗಳ ನಡುವೆ ನಿನ್ನ ನಿರ್ಮಿಸಿಹರು ಸರ್ವಾಂಗ ಸುಂದರಿಯಾಗಿಯೇ! 5 ನಿನ್ನ ಪಕ್ಕಗಳ ಮಾಡಿಹರು ಸೆನೀರಿನ ತುರಾಯಿ ಹಲಗೆಗಳಿಂದ ನಿನ್ನ ಸ್ತಂಭ ರಚಿಸಿಹರು ಲೆಬನೋನಿನ ದೇವದಾರು ಮರಗಳಿಂದ. 6 ನಿನ್ನ ಹುಟ್ಟುಗಳು ರೂಪಿಸಲಾಗಿವೆ ಬಾಷಾನಿನ ಅಲ್ಲೋನ್ ಮರದಿಂದ ನಿನ್ನ ಮೇಲ್ಮಾಳಿಗೆ ಕಟ್ಟಲಾಗಿದೆ ಕಿತ್ತೀಮ್ ದ್ವೀಪದ ತಿಲಕ ಹಲಗೆಯಿಂದ, ಕೆತ್ತಲಾಗಿದೆ ದಂತದಿಂದ. 7 ನಿನ್ನ ಹಾಯಿ ನಿನಗೆ ಧ್ವಜವಾಗಲೆಂದೆ ಮಾಡಿಹರು ಈಜಿಪ್ಟಿನ ಕಸೂತಿಯ ನಾರುಮಡಿಯಿಂದ. ನಿನ್ನ ಮೇಲ್ಕಟ್ಟು ಚಿತ್ರಿತವಾಗಿದೆ ಎಲೀಷ ಕರಾವಳಿಯ ಊದಾ ಕಡುಗೆಂಪುಗಳಿಂದ. 8 ನಿನಗೆ ಹುಟ್ಟುಹಾಕುವರು ಸಿದೋನಿನವರು, ಅರ್ವಾದಿನವರು. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು. 9 ನಿನ್ನ ಕಂಡಿಗಳ ಭದ್ರಪಡಿಸಿಹರು, ನಿನ್ನಲ್ಲಿ ಸೇರಿದ್ದ ಗೆಬಲಿನ ಜಾಣರು, ಹಿರಿಯರು. ನಿನಗೆ ಸರಕುಗಳ ತಂದೊಪ್ಪಿಸುತ್ತಿದ್ದರು ಸಕಲ ನಾವೆಗಳು, ಸಕಲ ನಾವಿಕರು. 10 “ಪಾರಸಿಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯದ ಭಟರಾಗಿದ್ದರು. ಖೇಡ್ಯ ಶಿರಸ್ತ್ರಾಣಗಳನ್ನು ನಿನ್ನಲ್ಲಿ ನೇತುಹಾಕಿ ನಿನ್ನನ್ನು ಭೂಷಿಸುತ್ತಿದ್ದರು. 11 ಅರ್ವಾದಿನವರೂ ನಿನ್ನ ಸೈನಿಕರೂ ಸುತ್ತುಮುತ್ತಲು ನಿನ್ನ ತೆನೆಗೋಡೆಗಳಲ್ಲಿ ನಿಂತಿದ್ದರು; ಗಮ್ಮಾದ್ಯರು ನಿನ್ನ ಕೊತ್ತಲಗಳಲ್ಲಿ ಕಾವಲಾಗಿದ್ದರು; ಎಲ್ಲರು ತಮ್ಮ ಖೇಡ್ಯಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳಿಗೆ ನೇತುಹಾಕಿ ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದ್ದರು. 12 ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದುದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು. 13 ಯಾವಾನಿನವರು, ತೂಬಲಿನವರು ಮತ್ತು ಮೆಷೆಕಿನವರು ನಿನ್ನ ಪರವಾಗಿ ವ್ಯಾಪಾರಮಾಡಿ ನರಪ್ರಾಣಿಗಳನ್ನು ಹಾಗು ತಾಮ್ರದ ಪಾತ್ರೆಗಳನ್ನು ನಿನಗೆ ಸರಬರಾಜು ಮಾಡುತ್ತಿದ್ದರು; 14 ತೋಗರ್ಮವಂಶದವರು ಕುದುರೆ, ಜಾತಿಯ ಕುದುರೆ, ಹೇಸರಗತ್ತೆ, ಇವುಗಳನ್ನು ನಿನಗಾಗಿ ತರುತ್ತಿದ್ದರು. 15 ದೆದಾನಿನವರು ನಿನ್ನ ವರ್ತಕರಾಗಿದ್ದರು; ಬಹುದ್ವೀಪಗಳ ಉತ್ಪತ್ತಿ ನಿನ್ನ ಕೈಗೆ ಸೇರಿತ್ತು. ಗಜದಂತಗಳನ್ನೂ, ಕರೀಮರವನ್ನೂ ನಿನಗೆ ಕಪ್ಪವಾಗಿ ಸಲ್ಲಿಸುತ್ತಿದ್ದರು. 16 ಕೈಕೆಲಸದ ವಸ್ತುಗಳು ನಿನಗೆ ಅಪಾರವಾಗಿದ್ದವು; ಆದುದರಿಂದ ಅರಾಮಿನವರೂ ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಲು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಮಡಿ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿಯುತ್ತಿದ್ದರು. 17 ಯೆಹೂದ್ಯರೂ, ಇಸ್ರಯೇಲ್ ನಾಡಿನವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ, ಗೋಧಿ, ‘ಪನ್ನಗ್’, ಜೇನು, ಎಣ್ಣೆ, ಸುಗಂಧತೈಲ, ಈ ಸಾಮಗ್ರಿಗಳನ್ನು ನಿನಗೆ ಸೇರಿಸುತ್ತಿದ್ದರು. 18 ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು. 19 “ವೆದಾನಿನವರೂ, ಯಾವಾನಿನವರೂ ಉಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸುತ್ತಿದ್ದರು. ಉಕ್ಕು, ಬಜೆ, ಲವಂಗ, ಚಕ್ಕೆಗಳು ನಿನಗೆ ಆಮದಾಗುತ್ತಿದ್ದವು. 20 ದೆದಾನಿನವರು ಹಲ್ಲಣಕ್ಕೆ ಸರಿಯಾದ ಒಳ್ಳೆಯ ಜಮಖಾನೆಗಳನ್ನು ನಿನಗೆ ತರುತ್ತಿದ್ದ ವ್ಯಾಪಾರಿಗಳಾಗಿದ್ದರು. 21 “ಅರಾಬ್ಯರೂ, ಕೇದಾರಿನ ಪ್ರಮುಖರೂ ನಿನ್ನ ಕೈಕೆಳಗಣ ವರ್ತಕರು: ಕುರಿ, ಟಗರು, ಹೋತಗಳನ್ನು ನಿನಗಾಗಿ ಸಾಗಿಸಿಕೊಂಡು ಬರುತ್ತಿದ್ದರು. 22 ಶೆಬದವರೂ ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ ಕನಕ, ಮುಖ್ಯ ಮುಖ್ಯ ಸುಗಂಧದ್ರವ್ಯ, ಸಮಸ್ತ ಅಮೂಲ್ಯರತ್ನ, ಈ ವಸ್ತುಗಳನ್ನು ನಿನಗಾಗಿ ತರುತ್ತಿದ್ದರು. 23 ಹಾರಾನ್ ಕನ್ನೆ, ಏದೆನ್ ಸ್ಥಳಗಳವರು ಹಾಗೂ ಶೆಬ, ಅಸ್ಸೀರಿಯಾ, ಕಿಲ್ಮದ್ ಪ್ರಾಂತ್ಯಗಳ ವರ್ತಕರು, 24 ನಿನ್ನ ವ್ಯಾಪಾರಿಗಳಾಗಿ ಉತ್ತಮಾಂಬರ ಕಸೂತಿಯ ಊದ ನಿಲುವಂಗಿ ಮೊದಲಾದ ಮಾಲುಗಳನ್ನೂ ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು. 25 ನಿನಗೆ ಬೇಕಾದ ದಿನಸುಗಳನು ತಂದವು ತಾರ್ಷೀಷಿನ ಹಡಗುಗಳು ಸಾಲುಸಾಲಾಗಿ ನೀನು ಭರ್ತಿಯಾಗಿ, ಸಮುದ್ರದ ಮಧ್ಯೆಯಿದ್ದೆ ಬಹು ಭಾರವಾಗಿ. 26 ಹುಟ್ಟುಹಾಕುವವರು ನಿನ್ನ ಸಿಕ್ಕಿಸಿಹರು ಮಹಾತರಂಗಗಳಿಗೆ ಸಾಗರಮಧ್ಯೆ ಒಡೆದು ಚೂರಾಗಿರುವೆ ಸಿಕ್ಕಿ ಮೂಡಣಗಾಳಿಗೆ. 27 ವಿನಾಶದಿನದೊಳು ಮುಳುಗಿಹೋಗುವುವು ಸಮುದ್ರದೊಳು ನಿನ್ನ ಆಸ್ತಿ, ನಿನ್ನ ದಿನಸು, ನಿನ್ನ ಸರಕುಗಳು ನಿನ್ನ ನಾವಿಕರು, ಅಂಬಿಗರು, ಕಂಡಿ ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ಸೈನಿಕರೆಲ್ಲರು, ನಿನ್ನ ಸಿಬ್ಬಂದಿಯೆಲ್ಲವು. 28 ನಡುಗುವುವು ಸಮೀಪದ ಪ್ರದೇಶಗಳು ಆ ನಾವಿಕರ ಕೂಗಾಟಕೆ. 29 ದುಃಖದಿಂದರಚುವರು ಹುಟ್ಟುಹಾಕುವವರು, ಅಂಬಿಗರು, ನಾವಿಕರೆಲ್ಲರು; 30 ತಮ್ಮ ತಮ್ಮ ಹಡಗುಗಳಿಂದಿಳಿದು, ನೆಲದ ಮೇಲೆ ನಿಂತು. ತಲೆಗೆ ದೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿಕೊಂಡು, 31 ತಲೆ ಬೋಳಿಸಿಕೊಂಡು, ಗೋಣಿತಟ್ಟನು ಸುತ್ತಿಕೊಂಡು, ದುಃಖಿಸಿ ಗೋಳಾಡುವರು, ಅಳುವರು ನಿನಗಾಗಿ ನಿಟ್ಟುಸಿರಿಟ್ಟು; 32 ರೋಧಿಸುವರು, ಪ್ರಲಾಪಿಸುವರು, ಹಾಡುವರು ಶೋಕಗೀತೆಯನ್ನು; ಕಡಲ ನಡುವೆ ಬಿಕೋ ಎನ್ನುವ ಟೈರನ್ನು ಏತಕೆ ಹೋಲಿಸೋಣ? ಎಂದು. 33 ಅಪಾರ ಐಶ್ವರ್ಯದಿಂದ, ವಾಣಿಜ್ಯ ದಿನಸುಗಳಿಂದ ನೀನು ತುಂಬಿಸಿದೆ ಬಹುರಾಷ್ಟ್ರಗಳನು, ಸಮೃದ್ಧಿಗೊಳಿಸಿದೆ ಭೂರಾಜರನು. ಈಗಾಗಿವೆ ಸಮುದ್ರದ ಪಾಲು ಆ ಸರಕು ಸಾಮಗ್ರಿಗಳೆಲ್ಲವು. 34 ಮುಳುಗಿಹೋದರು ಅಗಾಧ ಜಲದೊಳು ಸರಕುಸಮೇತ ನಿನ್ನ ಸೇರಿದ್ದ ಜನರು; ಹಾಳಾದೆ ನೀನು ಸಮುದ್ರ ಸಾಗರದೊಳು. 35 ನಿನ್ನೀ ಗತಿಗೆ ಬೆರಗಾಗಿಹರು ಕರಾವಳಿಯ ಸರ್ವನಿವಾಸಿಗಳು, ರೋಮಾಂಚಿತರಾಗಿಹರು ಮೊಗಗೆಟ್ಟು ರಾಜರಾಜರುಗಳು; 36 ನಿನ್ನ ನೋಡಿ ಸಿಳ್ಳುಹಾಕುವರು ರಾಷ್ಟ್ರಗಳ ವರ್ತಕರು. ನಾಶವಾದೆ ನೀನು ಪೂರ್ತಿಯಾಗಿ, ಇಲ್ಲವಾದೆ ಇನ್ನೆಂದಿಗು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India