ಯೆಹೆಜ್ಕೇಲನು 26 - ಕನ್ನಡ ಸತ್ಯವೇದವು C.L. Bible (BSI)ಟೈರ್ ನಗರದ ವಿರುದ್ಧ ದೈವೋಕ್ತಿ 1 ಹನ್ನೊಂದನೆಯ ವರ್ಷದ ಒಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ದಯಪಾಲಿಸಿದರು: 2 “ನರಪುತ್ರನೇ, ಜೆರುಸಲೇಮಿನ ವಿಷಯವಾಗಿ ಟೈರ್ ನಗರವು ‘ಅಹಹ, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ, ನನ್ನ ಕಡೆಗೆ ತೆರೆದುಬಿದ್ದಿದೆ; ಜೆರುಸಲೇಮ್ ಹಾಳಾದ ಕಾರಣ ನಾನು ವೃದ್ಧಿಗೊಳ್ಳುವೆನು’ ಎಂದುಕೊಂಡಿತು.” 3 ಆದುದರಿಂದ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಟೈರೇ, ಇಗೋ ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತೆರೆಗಳನ್ನು ಎಬ್ಬಿಸುವಂತೆ ನಾನು ಬಹುಜನಾಂಗಗಳನ್ನು ನಿನ್ನ ವಿರುದ್ಧ ಎಬ್ಬಿಸುವೆನು. 4 ಅವು ಟೈರಿನ ಪೌಳಿಗೋಡೆಯನ್ನು ಉರುಳಿಸಿ, ಅದರ ಕೊತ್ತಲಗಳನ್ನು ಕೆಡವಿಹಾಕುವುವು; ನಾನು ಅದರ ಮಣ್ಣನ್ನು ಕೆರೆದು, ಅದನ್ನು ಬೋಳುಬಂಡೆಯಾಗಿ ಮಾಡುವೆನು; 5 ಅದು ಸಮುದ್ರದ ನಡುವೆ ಬಲೆಗಳಿಗೆ ಹಾಸುಬಂಡೆಯಾಗುವುದು; ನಾನೇ ಇದನ್ನು ನುಡಿದಿದ್ದೇನೆ, ಎಂದು ಸರ್ವೇಶ್ವರನಾದ ದೇವರು ಎನ್ನುತ್ತಾರೆ; ಅದು ಜನಾಂಗಗಳಿಗೆ ಸೂರೆಯಾಗುವುದು; 6 ಬಯಲು ಭೂಮಿಯಲ್ಲಿನ ಅವರ ಕುವರಿಯರು ಖಡ್ಗದಿಂದ ಹತರಾಗುವರು; ನಾನೇ ಸರ್ವೇಶ್ವರ ಎಂದು ಎಲ್ಲರಿಗೂ ಗೊತ್ತಾಗುವುದು.” 7 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಇಗೋ, ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು, ಅಶ್ವ, ರಥ, ರಾಹುತ, ಬಹುಸೈನ್ಯ ಪರಿವಾರ ಇವುಗಳಿಂದ ಕೂಡಿದವನಾಗಿ, ನಾನು ಉತ್ತರದಿಂದ ಟೈರಿನ ಮೇಲೆ ಬರಮಾಡುವೆನು. 8 ಅವನು ಬಯಲು ಭೂಮಿಯಲ್ಲಿ ನಿನ್ನ ಕುವರಿಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧ ಒಡ್ಡುಕಟ್ಟಿ, ದಿಬ್ಬಹಾಕಿ, ಗುರಾಣಿಯೆತ್ತಿರುವವರನ್ನು ಕಳುಹಿಸಿ, 9 ತನ್ನ ಭಿತ್ತಿಭೇದಕಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ, ತನ್ನ ಆಯುಧಗಳಿಂದ ನಿನ್ನ ಕೊತ್ತಲಗಳನ್ನು ಒಡೆದುಬಿಡುವನು. 10 ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ಧೂಳು ನಿನ್ನನ್ನು ಮುಸುಕುವುದು; ಒಡಕು ಬಿದ್ದ ಕೋಟೆಯೊಳಗೆ ಶತ್ರು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಸರಕುಗಾಡಿ, ರಥ, ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಅದರುವುವು. 11 ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ, ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲುಕಂಬಗಳನ್ನು ಕೆಡಹುವನು. 12 ಅವನ ಸೈನಿಕರು ನಿನ್ನ ಆಸ್ತಿಯನ್ನು ಸುಲಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಉರುಳಿಸಿ, ನಿನ್ನ ವಿನೋದಭವನಗಳನ್ನು ಕೆಡವಿ, ನಿನ್ನ ಕಲ್ಲುಮರಮಣ್ಣುಗಳನ್ನು ಸಮುದ್ರದ ಪಾಲುಮಾಡುವರು. 13 ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿ ಇನ್ನು ಕೇಳಿಸದು. 14 ನಾನು ನಿನ್ನನ್ನು ಬೋಳುಬಂಡೆಮಾಡುವೆನು; ನೀನು ಬಲೆಗಳಿಗೆ ಹಾಸುಬಂಡೆಯಾಗುವೆ; ಇನ್ನು ನೀನು ಪುನಃ ನಿರ್ಮಾಣ ಹೊಂದಲಾರೆ; ಸರ್ವೇಶ್ವರನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.” 15 ಸರ್ವೇಶ್ವರನಾದ ದೇವರು ಟೈರ್ ನಗರಕ್ಕೆ ಹೀಗೆ ಹೇಳುತ್ತಾರೆ - “ನಿನ್ನ ಮಧ್ಯದಲ್ಲಿ ಕಗ್ಗೊಲೆಯುಂಟಾಗಿ, ಗಾಯಗೊಂಡವರು ನರಳುತ್ತಿರಲು, ನೀನು ಧಡಮ್ಮನೆ ಬೀಳುವ ಶಬ್ದಕ್ಕೆ ದ್ವೀಪಗಳು ಅದರುವವಲ್ಲವೆ? 16 ಆಗ ಸಮುದ್ರದ ಸುತ್ತುಮುತ್ತಲಿನ ಎಲ್ಲ ಒಡೆಯರು ತಮ್ಮ ಸಿಂಹಾಸನಗಳಿಂದಿಳಿದು, ನಿಲುವಂಗಿಗಳನ್ನು ತೆಗೆದುಹಾಕಿ, ಕಸೂತಿ ವಸ್ತ್ರಗಳನ್ನು ಕಿತ್ತೆಸೆದು, ತತ್ತರವನ್ನೇ ಹೊದ್ದುಕೊಂಡು, ನೆಲದ ಮೇಲೆ ಕುಕ್ಕರಿಸಿ, ಕ್ಷಣಕ್ಷಣವೂ ನಡುಗುತ್ತಾ ನಿನಗೆ ಬೆಚ್ಚಿಬೆರಗಾಗುವರು. 17 “ಇವರು ನಿನ್ನ ಕುರಿತು, ‘ನಾವಿಕರ ನಿವಾಸವೇ, ಹೆಸರುವಾಸಿಯ ನಗರಿಯೇ, ಸಮುದ್ರದಿಂದ ಬಲಗೊಂಡ ಪಟ್ಟಣವೇ, ನೀನು ತೀರಾ ಹಾಳಾಗಿರುವೆ. ಸಮುದ್ರಸಂಚಾರಿಗಳಿಗೆಲ್ಲಾ ಭಯಾಸ್ಪದರಾಗಿದ್ದ ನಿನ್ನ ನಿವಾಸಿಗಳು ತೀರಾ ಹಾಳಾದರು. 18 ಈ ನಿನ್ನ ಪತನ ದಿನದಲ್ಲಿ ಕರಾವಳಿಯು ನಡುಗುತ್ತದೆ; ನೀನು ಅಳಿದುಹೋದುದಕ್ಕೆ ಸಮುದ್ರದ್ವೀಪಗಳು ತತ್ತರಿಸುತ್ತವೆ.’ ಎಂಬ ಶೋಕಗೀತೆಯನ್ನೆತ್ತುವರು.” 19 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ನಾನು ನಿನ್ನನ್ನು ಹಾಳೂರು ಮಾಡಿ ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಣುಗಿಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವೆನು. 20 ಆಗ ಪುರಾತನ ಕಾಲದಲ್ಲಿ ಹಾಳಾದ ಪಟ್ಟಣಗಳಂತೆ, ನಿನ್ನನ್ನು ಅಧೋಲೋಕಕ್ಕೆ ತಳ್ಳಿ, ಪಾತಾಳಕ್ಕೆ ಇಳಿದ ಪೂರ್ವಕಾಲದವರೊಂದಿಗೆ ವಾಸಿಸಮಾಡುವೆನು; ಹೌದು, ನೀನು ನಿನ್ನ ಮಹಿಮೆಯನ್ನು ಜೀವಲೋಕದಲ್ಲಿ ನೆಲೆಗೊಳಿಸದೆ, ನಿರ್ನಿವಾಸಿಯಾಗುವಂತೆ, ನಿನ್ನನ್ನು ಪಾತಾಳಕ್ಕೆ ಇಳಿದವರ ಸಹವಾಸದಲ್ಲೇ ಸೇರಿಸುವೆನು. 21 ನಿನ್ನನ್ನು ಪೂರ್ತಿಯಾಗಿ ಧ್ವಂಸಮಾಡುವೆನು; ನೀನು ಇಲ್ಲವಾಗುವೆ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವುದಿಲ್ಲ; ಇದು ಸರ್ವೇಶ್ವರನಾದ ದೇವರ ನುಡಿ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India