ಯೆಹೆಜ್ಕೇಲನು 22 - ಕನ್ನಡ ಸತ್ಯವೇದವು C.L. Bible (BSI)ಜೆರುಸಲೇಮಿನ ಘೋರಕೃತ್ಯಗಳು 1 ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು - 2 “ನರಪುತ್ರನೇ, ರಕ್ತಸಿಕ್ತವಾದ ಆ ಪಟ್ಟಣಕ್ಕೆ ನ್ಯಾಯತೀರಿಸಲು ಸ್ಥಿರಮನಸ್ಸು ಮಾಡಿರುವೆಯಾ? ಅದರ ದುರಾಚಾರಗಳನ್ನೆಲ್ಲಾ ಅದಕ್ಕೆ ಹೀಗೆ ತಿಳಿಸು - 3 ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಿನ್ನ ಮಧ್ಯೆ ರಕ್ತ ಸುರಿಸಿ, ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ನಗರಿಯೇ, ನಿನ್ನ ಕೇಡಿಗಾಗಿಯೇ ವಿಗ್ರಹಗಳನ್ನು ಮಾಡಿಕೊಂಡು ನಿನ್ನನ್ನೆ ಹೊಲೆಗೆಡಿಸಿಕೊಂಡ ನಗರಿಯೇ, 4 ನೀನು ಸುರಿಸಿದ ರಕ್ತದಿಂದ ಅಪರಾಧಿಯಾಗಿರುವೆ; ಮಾಡಿಕೊಂಡ ವಿಗ್ರಹಗಳಿಂದ ಅಶುದ್ಧವಾಗಿರುವೆ. ಹೀಗೆ ನಿನ್ನ ಸಮಯವನ್ನು ಹತ್ತಿರಕ್ಕೆ ತಂದುಕೊಂಡು ದಂಡನೆಯ ಕಾಲಕ್ಕೆ ಬಂದಿರುವೆ. ಆದಕಾರಣ ನಿನ್ನನ್ನು ಜನಾಂಗಗಳ ದೂಷಣೆಗೂ ಸಕಲ ದೇಶಗಳ ಹಾಸ್ಯಕ್ಕೂ ಗುರಿಮಾಡಿದ್ದೇನೆ. 5 ಕುಖ್ಯಾತನಗರವೇ, ಗದ್ದಲಕ್ಕೆ ಪ್ರಸಿದ್ಧವಾದ ಪಟ್ಟಣವೇ, ಹತ್ತಿರದವರೂ ದೂರದವರೂ ನಿನ್ನನ್ನು ಹಾಸ್ಯಮಾಡುವರು. 6 ಇಗೋ, ಇಸ್ರಯೇಲಿನ ಅರಸರು ತಮ್ಮ ತಮ್ಮ ಶಕ್ತ್ಯಾನುಸಾರ ನಿನ್ನಲ್ಲಿ ರಕ್ತ ಸುರಿಸುತ್ತಲೇ ಇದ್ದಾರೆ. 7 ನಿನ್ನವರು ತಾಯಿತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಯರನ್ನು ಬಾದಿಸಿದ್ದಾರೆ, ನಿನ್ನವರು ಅನಾಥರನ್ನೂ ವಿಧವೆಯರನ್ನೂ ಹಿಂಸಿಸಿದ್ದಾರೆ. 8 ನೀನು ನನ್ನ ಪವಿತ್ರವಸ್ತುಗಳನ್ನು ಅಲಕ್ಷ್ಯಮಾಡಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿರುವೆ. ಚಾಡಿಕೋರರು ನಿನ್ನಲ್ಲಿ ರಕ್ತ ಹರಿಸಿದ್ದಾರೆ; 9 ನಿನ್ನವರು ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದಿದ್ದಾರೆ; ನಿನ್ನ ಮಧ್ಯೆ ದುರಾಚಾರಗಳನ್ನು ನಡೆಸಿದ್ದಾರೆ. 10 ನಿನ್ನವರು ತಮ್ಮ ತಂದೆಯವರಿಗೆ ಮಾನಭಂಗಮಾಡಿದ್ದಾರೆ; ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ. 11 ನಿನ್ನಲ್ಲಿ ಒಬ್ಬನು ನೆರೆಯವನ ಹೆಂಡತಿಯೊಡನೆ ದುರಾಚಾರ ನಡೆಸಿದ್ದಾನೆ; ಇನ್ನೊಬ್ಬನು ಅತ್ಯಾಚಾರಮಾಡಿ ಸೊಸೆಯನ್ನು ಕೆಡಿಸಿದ್ದಾನೆ; ಮತ್ತೊಬ್ಬನು ತನ್ನ ತಂದೆಯ ಮಗಳೇ ಆದ ತಂಗಿಯ ಮಾನಭಂಗ ಮಾಡಿದ್ದಾನೆ. 12 “ನಿನ್ನವರು ರಕ್ತ ಸುರಿಸುವುದಕ್ಕೆ ಲಂಚಪಡೆದಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ಸುಲಿಗೆಮಾಡಿ, ನನ್ನನ್ನು ಮರೆತೇಬಿಟ್ಟಿದ್ದಾರೆ; ಇದು ಸರ್ವೇಶ್ವರನಾದ ದೇವರ ನುಡಿ. 13 “ಇಗೋ, ನೀನು ದೋಚಿಕೊಂಡ ಲಾಭವನ್ನೂ ನೀನು ಸುರಿದ ರಕ್ತವನ್ನೂ ನೋಡಿ ಕೈ ಎತ್ತಿದ್ದೇನೆ. 14 ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿಮಾಡಿಕೊಂಡಿರುವೆಯಾ? ಕೈಗಳನ್ನು ಬಲಪಡಿಸಿಕೊಂಡಿರುವೆಯಾ? ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ. ಅಂತೆಯೇ ನಡೆಸುತ್ತೇನೆ. 15 ನಾನು ನಿನ್ನನ್ನು ಜನಾಂಗಗಳಲ್ಲಿ ಚದರಿಸಿ, ದೇಶವಿದೇಶಗಳಿಗೆ ತೂರಿಬಿಟ್ಟು, ನಿನ್ನ ಹೊಲಸನ್ನು ನಿನ್ನೊಳಗಿಂದ ತೆಗೆದುಹಾಕುವೆನು. 16 ಜನಾಂಗಗಳ ದೃಷ್ಟಿಯಲ್ಲಿ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವೆ; ನಾನೇ ಸರ್ವೇಶ್ವರ ಎಂದು ಆಗ ನಿನಗೆ ಗೊತ್ತಾಗುವುದು.” ದೇವರ ಕುಲುಮೆ 17 ಆಮೇಲೆ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು - 18 “ನರಪುತ್ರನೇ, ಇಸ್ರಯೇಲ್ ವಂಶವೆಂಬ ಲೋಹವು ನನ್ನ ದೃಷ್ಟಿಯಲ್ಲಿ ಕಲ್ಮಷವಾಗಿದೆ; ಅದೆಲ್ಲಾ ಕುಲುಮೆಯಲ್ಲಿನ ತಾಮ್ರ, ತವರ, ಕಬ್ಬಿಣ, ಸೀಸ; ಅದು ಕಂದುಲೋಹ. 19 ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀವೆಲ್ಲರು ಕಲ್ಮಷವಾಗಿರುವುದರಿಂದ ಇಗೋ, ನಿಮ್ಮನ್ನು ಜೆರುಸಲೇಮಿನ ಒಳಕ್ಕೆ ಸೇರಿಸುವೆನು. 20 ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವುಗಳನ್ನು ಕುಲುಮೆಯೊಳಗೆ ಹಾಕಿ ಊದಿ, ಉರಿಹತ್ತಿಸಿ, ಕರಗಿಸುವಂತೆ ನಾನು ನಿಮ್ಮನ್ನು ನನ್ನ ಉಗ್ರಕೋಪಾಗ್ನಿಯಲ್ಲಿ ಇಟ್ಟು ಕರಗಿಸುವೆನು. 21 ಹೌದು, ನಾನು ನಿಮ್ಮನ್ನು ನನ್ನ ರೋಷಾಗ್ನಿಯಲ್ಲಿ ಹಾಕಿ ಊದಲು ನೀವು ಅದರೊಳಗೆ ಕರಗಿಹೋಗುವಿರಿ. 22 ಬೆಳ್ಳಿ ಕುಲುಮೆಯೊಳಗೆ ಕರಗುವಂತೆ ನೀವು ನನ್ನ ರೋಷಾಗ್ನಿಯಲ್ಲಿ ಕರಗಿಬಿಡುವಿರಿ; ನಿಮ್ಮ ಮೇಲೆ ರೋಷಾಗ್ನಿಯನ್ನು ಸುರಿಸಿದ ನಾನು ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.” ಇಸ್ರಯೇಲಿನ ಪ್ರಮುಖರ ಪಾಪಕೃತ್ಯಗಳು 23 ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು - “ನರಪುತ್ರನೇ, 24 ಆ ನಾಡಿಗೆ ಹೀಗೆ ಹೇಳು - ದೇವರ ಕೋಪದ ಈ ದಿನದಲ್ಲಿ ನೀನು ಶುದ್ಧಿಯಾಗದ ದೇಶ, ಮಳೆಯಿಲ್ಲದ ದೇಶ. 25 ಆ ನಾಡಿನೊಳಗೆ ಪ್ರವಾದಿಗಳು ಒಳಸಂಚು ಮಾಡಿಕೊಂಡಿದ್ದಾರೆ, ಬೇಟೆಯನ್ನು ಸೀಳುತ್ತಾ ಗರ್ಜಿಸುವ ಸಿಂಹದಂತಿದ್ದಾರೆ. ನರಪ್ರಾಣಿಗಳನ್ನು ನುಂಗಿದ್ದಾರೆ, ಆಸ್ತಿಯನ್ನೂ ಅಮೂಲ್ಯ ವಸ್ತುಗಳನ್ನೂ ದೋಚಿಕೊಂಡಿದ್ದಾರೆ; ದೇಶದಲ್ಲಿ ಬಹುಮಂದಿಯನ್ನು ವಿಧವೆಯರನ್ನಾಗಿ ಮಾಡಿದ್ದಾರೆ. 26 ಅಲ್ಲಿನ ಯಾಜಕರು ನನ್ನ ವಿಧಿಗಳನ್ನು ಉಲ್ಲಂಘಿಸಿದ್ದಾರೆ, ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಗೊಳಿಸಿದ್ದಾರೆ; ಮೀಸಲಾದುದಕ್ಕೂ ಮೀಸಲಲ್ಲದ್ದಕ್ಕೂ ಭೇದವೆಣಿಸಲಿಲ್ಲ. ಶುದ್ಧಾ ಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಕಡೆಗಣಿಸಿದ್ದಾರೆ. ಇದರಿಂದ ನಾನು ಅವರ ಮಧ್ಯೆ ಅಪಕೀರ್ತಿಗೆ ಗುರಿಯಾಗಿದ್ದೇನೆ. 27 ಅಲ್ಲಿನ ಪ್ರಮುಖರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ಕಬಳಿಸುವ, ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ. 28 ಅಲ್ಲಿನ ಪ್ರವಾದಿಗಳು ಇವರಿಗಾಗಿ ಮಿಥ್ಯ ದರ್ಶನವನ್ನು ಕಂಡು, ಸುಳ್ಳು ಕಣಿಯನ್ನು ಹೇಳಿ, ಸರ್ವೇಶ್ವರ ಮಾತಾಡದಿದ್ದರೂ ‘ಸರ್ವೇಶ್ವರ ದೇವರು ಇಂತೆನ್ನುತ್ತಾರೆ’ ಎಂದು ನುಡಿಯುತ್ತಾ ಮೇಲೆ ಮೇಲೆ ಸುಣ್ಣ ಬಳಿದಿದ್ದಾರೆ. 29 ಜನಸಾಮಾನ್ಯರೂ ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿದ್ದಾರೆ, ವಿದೇಶಿಗಳನ್ನು ಅನ್ಯಾಯವಾಗಿ ನಸುಕಿಬಿಟ್ಟಿದ್ದಾರೆ. 30 ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶ ರಕ್ಷಣೆಗಾಗಿ, ಪೌಳಿಯ ಒಡಕಿನಲ್ಲಿ ನಿಲ್ಲುವುದಕ್ಕೂ ಗೋಡೆಯನ್ನು ಗಟ್ಟಿಮಾಡುವುದಕ್ಕೂ ತಕ್ಕವನನ್ನು ನಾನು ಹುಡುಕಿದರೂ ಯಾರೂ ಸಿಕ್ಕಲಿಲ್ಲ. 31 ಆದಕಾರಣ, ನಾನು ನನ್ನ ಕೋಪವನ್ನು ಅವರ ಮೇಲೆ ಸುರಿಸಿ, ನನ್ನ ರೋಷಾಗ್ನಿಯಿಂದ ಅವರನ್ನು ಧ್ವಂಸಮಾಡಿ, ಅವರ ದುರ್ನಡತೆಯ ಹೊಣೆಯನ್ನು ಅವರ ಮೇಲೆ ಹೊರಿಸಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India