ಯೆಹೆಜ್ಕೇಲನು 19 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲ್ ಅರಸರನ್ನು ಕುರಿತ ಶೋಕಗೀತೆ 1 “ಇಸ್ರಯೇಲ್ ಅರಸರನ್ನು ಕುರಿತ ಈ ಶೋಕ ಗೀತೆಯನ್ನು ಹಾಡು: 2 ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನು, ಯುವ ಸಿಂಹಗಳ ನಡುವೆ ಪವಡಿಸಿ. 3 ಯುವ ಸಿಂಹವಾಯಿತು ಆಕೆ ಬೆಳೆಸಿದಾ ಮರಿಯೊಂದು, ನರಭಕ್ಷಕ ಆಗಲಾರಂಭಿಸಿತದು ಬೇಟೆಯನು ಕಲಿತು. 4 ಇದ ಕೇಳಿದ ರಾಷ್ಟ್ರಗಳು ಹಿಡಿದವದನ್ನು ಗುಂಡಿತೋಡಿ, ಈಜಿಪ್ಟ್ ದೇಶಕೊಯ್ದವು ಅದಕ್ಕೆ ಬಿಗಿದು ಸರಪಣಿ. 5 ತನ್ನ ನಂಬಿಕೆ ನಿರೀಕ್ಷೆ ಹಾಳಾಯಿತೆಂದುಕೊಂಡಾ ಸಿಂಹಿಣಿ, ಪ್ರಾಯಕ್ಕೆ ತಂದಳು ತನ್ನ ಮರಿಗಳಲ್ಲಿ ಇನ್ನೊಂದನ್ನು ಸಾಕಿ. 6 ಇದು ಕೂಡ ಯುವಸಿಂಹವಾಯಿತು ಇತರ ಸಿಂಹಗಳ ನಡುವೆ ತಿರುಗಾಡಿತು. ಬೇಟೆಯಾಡುವುದನು ಕಲಿತು ತಾನೂ ನರಭಕ್ಷಕನಾಗಲಾರಂಭಿಸಿತು. 7 ನೆಲಸಮ ಮಾಡಿತು ಪಟ್ಟಣಗಳನೆ ನಾಶಮಾಡಿತು ಕೋಟೆಕೊತ್ತಲುಗಳನೆ ನಾಡಿಗೆ ನಾಡೇ ನಡುಗಿತು ಅದರ ಗರ್ಜನೆಗೆ. 8 ಆಗ ಬಂದವು ಸುತ್ತಲಿನ ರಾಷ್ಟ್ರಗಳು ಒಟ್ಟುಗೂಡಿ, ಸಿಕ್ಕಿಸಿದವು ಅದನ್ನು ಬಲೆಯೊಡ್ಡಿ, ಗುಂಡಿತೋಡಿ. 9 ಒಯ್ದವು ಅದನ್ನು ಬಾಬಿಲೋನಿನ ಅರಸನ ಬಳಿಗೆ ಬಿಗಿದು ಸರಪಣಿ, ಹಾಕಿ ಪಂಜರದೊಳಗೆ. ಅದರ ಗರ್ಜನೆ ಇಸ್ರಯೇಲಿನ ಗಿರಿಗಳಿಗೆ ಕೇಳಿಸದಂತೆ, ಸೇರಿಸಿಬಿಟ್ಟವು ಅದನ್ನು ಸುಭದ್ರ ಕೋಟೆಯೊಳಗೆ. 10 ನಿನ್ನ ಹೆತ್ತ ತಾಯಿ ದ್ರಾಕ್ಷಾಲತೆಯಂತೆ ನೀರಾವರಿಯಲಿ ನಾಟಿದ್ದಾ ಲತೆಯಂತೆ ಬೆಳೆದಿತ್ತದು ಫಲವತ್ತಾಗಿ, ಹುಲುಸಾಗಿ, ಅತಿ ತಂಪಾಗಿಯೆ. 11 ಅದರಲ್ಲಿದ್ದವು ರಾಜದಂಡ ಯೋಗ್ಯವಾದ ಗಟ್ಟಿ ಕೊಂಬೆಗಳು ಮಿಕ್ಕ ರೆಂಬೆಗಳಿಗಿಂತ ಅಧಿಕವಾಗಿತ್ತವುಗಳ ಎತ್ತರವು ಹಲವಾರು ರೆಂಬೆಗಳ ಮಧ್ಯೆ ಉದ್ದುದ್ದವಾಗಿ ಕಾಣಿಸಿದವು. 12 ಕಿತ್ತು ಬಿಸಾಡಿದರು ಕ್ರೋಧಿಗಳು ಆ ಲತೆಯನು ಬಾಡಿಸಿತು ಅದರ ಫಲವನು ಮೂಡಣಗಾಳಿಯು ಮುದುರಿ ಒಣಗಿಹೋದುವು ಅದರ ಗಟ್ಟಿಕೊಂಬೆಗಳು. 13 ದಹಿಸಿಬಿಟ್ಟಿತು ಅವುಗಳನು ಅಗ್ನಿಜ್ವಾಲೆಯು, ಈಗದು ನಾಟಿಕೊಂಡಿದೆ ನೀರಿಲ್ಲದ ಬೆಂಗಾಡಿನೊಳು. 14 ಅದರ ಕಾಂಡದಿಂದ ಹೊರಟ ಬೆಂಕಿಯು ದಹಿಸಿಬಿಟ್ಟಿದೆ ಅದರ ಫಲಗಳನು ಎಂದೇ ಇನ್ನು ಉಳಿದಿಲ್ಲ ಅದರೊಳು ರಾಜದಂಡಕೆ ಯೋಗ್ಯವಾದ ಗಟ್ಟಿಕೊಂಬೆಯು.” ಇದೊಂದು ಶೋಕ ಗೀತೆ; ರೂಢಿಯಲ್ಲಿ ಇರುವ ಜಾನಪದ ಗೀತೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India