Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 17 - ಕನ್ನಡ ಸತ್ಯವೇದವು C.L. Bible (BSI)


ಹದ್ದುಗಳ ಮತ್ತು ಗಿಡಗಳ ಸಾಮತಿ

1 ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ:

2 “ನರಪುತ್ರನೇ, ನೀನು ಇಸ್ರಯೇಲ್ ವಂಶದವರಿಗೆ ಈ ಸಾಮತಿಯನ್ನು ಒಗಟಾಗಿ ಹೇಳು -

3 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಗಲ ಹಾಗು ಉದ್ದವಾದ ರೆಕ್ಕೆಗಳುಳ್ಳ ವಿವಿಧ ವರ್ಣದ ಗರಿಗಳಿಂದ ಕೂಡಿದ ದೊಡ್ಡ ಹದ್ದೊಂದು ಲೆಬನೋನಿಗೆ ಬಂದು ದೇವದಾರು ಮರದ ಮೇಲ್ತುದಿಯ ರೆಂಬೆಯನ್ನು ಕಿತ್ತಿತು;

4 ತುಟ್ಟತುದಿಯ ಚಿಗುರುಗಳನ್ನು ಕಚ್ಚಿ ವಾಣಿಜ್ಯ ದೇಶಕ್ಕೆ ತೆಗೆದುಕೊಂಡುಹೋಗಿ ಬಹುಮಂದಿ ವರ್ತಕರಿರುವ ಪಟ್ಟಣದಲ್ಲಿ ಇಟ್ಟುಬಿಟ್ಟಿತು.

5 ಆಮೇಲೆ ಅದು ಆ ದೇವದಾರು ಇದ್ದ ದೇಶದ ಒಂದು ಬೀಜವನ್ನು ತೆಗೆದುಕೊಂಡು ಫಲವತ್ತಾದ ನೀರಾವರಿಯ ಭೂಮಿಯಲ್ಲಿ ನೆಟ್ಟು ನೀರವಂಜಿಯ ಹಾಗೆ ಬೆಳೆಸಿತು.

6 ಅದು ಗುಜ್ಜಾಗಿ ಬೆಳೆದು ದ್ರಾಕ್ಷಾಲತೆಯಾಗಿ ವಿಶಾಲವಾಗಿ ಹರಡಿಕೊಂಡು, ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ, ಅದರ ಕೆಳಗೂ ಬೇರು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು.

7 “ಆದರೆ ಅಗಲವಾದ ರೆಕ್ಕೆಗಳುಳ್ಳ ಗರಿತುಂಬಿದ ಮತ್ತೊಂದು ದೊಡ್ಡ ಹದ್ದು ಇತ್ತು; ಇಗೋ, ಆ ದ್ರಾಕ್ಷಾಲತೆ ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅದರಿಂದ ನೀರನ್ನು ಹಾಯಿಸುತ್ತಿತ್ತು.

8 ಅದು ಸೊಂಪಾದ ಲತೆಯಾಗಿ ರೆಂಬೆಗಳನ್ನು ಹರಡಿಸಿ, ಫಲಕೊಡುವುದಕ್ಕೆ ಅನುಕೂಲವಾದ ಒಳ್ಳೆಯ ನೀರಾವರಿಯ ನೆಲದಲ್ಲಿ ನಾಟಿಕೊಂಡಿತ್ತು.”

9 “ಈ ಮಾತನ್ನು ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅದು ಯಾವಾಗಲು ಸಮೃದ್ಧವಾಗಿಯೆ ಇರುವುದೇ? ಅದನ್ನು ನಾಟಿದ ಆ ಹದ್ದು ಅದರ ಬೇರುಗಳನ್ನು ಕಿತ್ತು ಅದರ ಫಲವನ್ನು ಕಡಿದುಬಿಡುವುದು . ಆಗ ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದನ್ನು ಬೇರುಸಹಿತ ಕೀಳಲು ಹೆಚ್ಚು ಬಲಬೇಕಾಗಿಲ್ಲ , ಬಹುಜನರ ಅಗತ್ಯವಿಲ್ಲ

10 ನಾಟಿಕೊಂಡಿದ್ದ ಆ ಲತೆ ಸಮೃದ್ಧವಾಗಿಯೇ ಇರುವುದೇ? ಮೂಡಣಗಾಳಿ ಬಡಿಯುವಾಗ ಅದು ಖಂಡಿತವಾಗಿ ಬಾಡುವುದಲ್ಲವೆ? ಬೆಳೆದ ಪಾತಿಯಲ್ಲಿಯೇ ಅದು ಒಣಗಿಹೋಗುವುದಲ್ಲವೆ?”


ಸಾಮತಿಯ ಅರ್ಥ

11 ಸರ್ವೇಶ್ವರ ದಯಪಾಲಿಸಿದ ಇನ್ನೊಂದು ವಾಣಿ:

12 “ದ್ರೋಹಿವಂಶದ ಈ ಜನರಿಗೆ ಹೀಗೆ ಹೇಳು - ಇದರ ಅರ್ಥ ನಿಮಗೆ ತಿಳಿಯಲಿ; ಇಗೋ, ಬಾಬಿಲೋನಿನ ಅರಸನು ಜೆರುಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದ;

13 ಮತ್ತು ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಪ್ಪಂದಮಾಡಿ ಅವನಿಂದ ಆಣೆಯಿಡಿಸಿದ.

14 ಅವನ ರಾಜ್ಯ ಏಳಿಗೆಗೆ ಬಾರದೆ ಗುಜ್ಜಾಗಿದ್ದು ಒಪ್ಪಂದಕ್ಕೆ ಬದ್ಧವಾಗಿರುವುದರಿಂದಲೇ ಅದು ನಿಲ್ಲದೆಂದು ಆ ದೇಶದ ಬಲಿಷ್ಠರನ್ನು ಗಡೀಪಾರುಮಾಡಿದ.

15 ಆದರೆ ಅವನು ಬಾಬಿಲೋನಿನ ಅರಸನ ವಿರುದ್ಧ ದಂಗೆಯೆದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಈಜಿಪ್ಟಿಗೆ ರಾಯಭಾರಿಗಳನ್ನು ಕಳುಹಿಸಿದ. ಆದರೂ ಇವನು ಗೆಲ್ಲುವನೇ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೇ? ಒಪ್ಪಂದವನ್ನು ಮೀರಿದವನು ತಪ್ಪಿಸಿಕೊಂಡಾನೇ?

16 “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ಇವನು ಯಾವನಿಂದ ಅರಸನಾಗಿ ನೇಮಕಗೊಂಡನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಪ್ಪಂದವನ್ನು ಮೀರಿದನೋ, ಆ ಅರಸನ ಬಳಿಯಲ್ಲೆ, ಅಂದರೆ ಬಾಬಿಲೋನೆಂಬ ಅವನ ವಾಸಸ್ಥಾನದಲ್ಲೆ, ಇವನು ಸಾಯುವುದು ಖಂಡಿತ.

17 ಫರೋಹನೂ ಅವನ ಮಹಾಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹುಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಬುರುಜುಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗದು.

18 ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಪ್ಪಂದವನ್ನೂ ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಭಾಷೆಮಾಡಿ ಪ್ರಯೋಜನವೇನು? ಅದನ್ನೆಲ್ಲಾ ಮುರಿದುಬಿಟ್ಟನಲ್ಲವೇ? ಇವನು ನನ್ನಿಂದ ಪಾರಾಗನು.

19 “ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನನಗೆ ಮಾಡಿದ ಪ್ರಮಾಣವನ್ನು ಅವನು ತಿರಸ್ಕರಿಸಿ ನನ್ನ ಒಡಂಬಡಿಕೆಯನ್ನು ಮೀರಿದ ದೋಷವನ್ನು ಅವನ ತಲೆಯ ಮೇಲೆ ಹೊರಿಸುವೆನು.

20 ನಾನು ಅವನಿಗೆ ನನ್ನ ಬಲೆಯೊಡ್ಡುವೆನು; ನಾನು ಹಾಕಿದ ಉರುಳಿನಲ್ಲಿ ಸಿಕ್ಕಿಬೀಳುವನು. ಅವನನ್ನು ಬಾಬಿಲೋನಿಗೆ ತಂದು, ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.

21 ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲ ಕಡೆಯ ಗಾಳಿಗೆ ತೂರಿಬಿಡುವೆನು; ಈ ಮಾತನ್ನು ಆಡಿದವನು ಸರ್ವೇಶ್ವರನಾದ ನಾನೇ ಎಂದು ನಿಮಗೆ ಗೊತ್ತಾಗುವುದು.”

22 ಸರ್ವೇಶ್ವರನಾದ ದೇವರ ವಾಣಿಯಿದು; ನಾನೇ ನೆಡುವೆನು ರೆಂಬೆಯೊಂದನು ಎತ್ತರದ ದೇವದಾರು ಮರದ ಮೇಲಿಂದ ತಂದು ತುಟ್ಟತುದಿಯ ಚಿಗುರುಗಳಲ್ಲೊಂದನ್ನು ತಂದು ಅತಿ ಕೋಮಲವಾದುದನ್ನು ಚಿವುಟಿ ತಂದು, ನೆಡುವೆನದನು ಉನ್ನತೋನ್ನತವಾದ ಪರ್ವತದಲ್ಲಿ.

23 ಹೌದು, ನೆಡುವೆನು ಇಸ್ರಯೇಲಿನಾ ಪರ್ವತಾಗ್ರದಲ್ಲಿ. ಆಗುವುದದು ಸೊಂಪಾದ ದೇವದಾರು ಮರ, ರೆಂಬೆಗಳನದು ಹರಡಿಕೊಂಡು ಕೊಡುವುದು ಫಲ. ಸಕಲವಿಧ ಪಕ್ಷಿಗಳು ವಾಸಿಸುವುವು ಅದರಲ್ಲಿ.

24 ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲಿ, ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು ತಗ್ಗಾದುದನು ಎತ್ತರಪಡಿಸುವವನು ಹಸುರಾದುದನು ಒಣಗಿಸುವವನು ಒಣಗಿದುದನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು ಇದ ನುಡಿದವ ನಾನು, ನುಡಿದುದನು ನಡೆಸುವವ ನಾನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು