ಯೆಹೆಜ್ಕೇಲನು 13 - ಕನ್ನಡ ಸತ್ಯವೇದವು C.L. Bible (BSI)ಕಳ್ಳ ಪ್ರವಾದಿಗಳಿಗೆ ಧಿಕ್ಕಾರ! 1 ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು: 2 “ನರಪುತ್ರನೇ, ಪ್ರವಾದನೆ ಮಾಡಿ ಸ್ವಕಲ್ಪಿತವಾದುದನ್ನೇ ಸಾರುತ್ತಲಿರುವ ಇಸ್ರಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತ ಹೀಗೆ ಹೇಳು: “ಸರ್ವೇಶ್ವರನ ವಾಕ್ಯವನ್ನು ಕೇಳಿರಿ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: 3 ‘ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖಪ್ರವಾದಿಗಳಿಗೆ ಧಿಕ್ಕಾರ! 4 ಇಸ್ರಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ಗುಳ್ಳೆನರಿಗಳಂತಿದ್ದಾರೆ! 5 ಸರ್ವೇಶ್ವರನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿಯ ಒಡಕುಗಳನ್ನೇರಲಿಲ್ಲ. ಇಸ್ರಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಗಟ್ಟಿಮಾಡಲೂ ಇಲ್ಲ. 6 ಸರ್ವೇಶ್ವರ ಇಂತೆನ್ನುತ್ತಾರೆಂದು ನುಡಿ: ಅಂಥವರಿಗೆ ಆದ ದರ್ಶನ ಮಿಥ್ಯ; ಕೇಳಿಸಿದ ವಾಣಿ ಸುಳ್ಳು; ಸರ್ವೇಶ್ವರ ಅವರನ್ನು ಕಳುಹಿಸಲಿಲ್ಲ. ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ. 7 ನಾನು ಮಾತಾಡದೆ ಇದ್ದರೂ ‘ಸರ್ವೇಶ್ವರ ಇಂತೆನ್ನುತ್ತಾರೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನ ಮಿಥ್ಯ, ನೀವು ಹೇಳಿದ ಭವಿಷ್ಯ ಸುಳ್ಳು.’ 8 ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನೀವು ವ್ಯರ್ಥವಾದುದನ್ನು ನುಡಿದು ಸುಳ್ಳಾದುದನ್ನು ಕಂಡದ್ದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ, ಇದು ಸರ್ವೇಶ್ವರನಾದ ದೇವರೆಂಬ ನನ್ನ ನುಡಿ. 9 ಮಿಥ್ಯದರ್ಶನ ಹೊಂದಿ ಸುಳ್ಳು ಭವಿಷ್ಯ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರಿಯ ಸಭೆಯಲ್ಲಿ ಸೇರಕೂಡದು, ಇಸ್ರಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರು ಲಿಖಿತವಾಗಬಾರದು, ಅವರು ಇಸ್ರಯೇಲ್ ನಾಡನ್ನು ಪ್ರವೇಶಿಸಲೂಬಾರದು. ನಾನೇ ಸರ್ವೇಶ್ವರನಾದ ದೇವರು ಎಂದು ನಿಮಗೆ ಗೊತ್ತಾಗುವುದು. 10 “ಅಶಾಂತಿಯಿರುವಾಗಲೂ ಅವರು ಶಾಂತಿಯಿದೆ ಎಂದು ಹೇಳಿ ನನ್ನ ಜನಗಳನ್ನು ವಂಚಿಸಿದ್ದಾರೆ. ಜನರು ದುರ್ಬಲ ಗೋಡೆಯನ್ನು ಕಟ್ಟಿದ್ದಾರೆ. ಅದಕ್ಕೆ ಆ ಪ್ರವಾದಿಗಳು ಸುಣ್ಣ ಬಳಿಯುತ್ತಾರೆ; 11 ಆದಕಾರಣ, ನೀನು ಸುಣ್ಣ ಬಳಿಯುವವರಿಗೆ ಹೀಗೆ ನುಡಿ: ‘ವಿಪರೀತ ಮಳೆಯಾಗಿ ಗೋಡೆ ಬಿದ್ದುಹೋಗುವುದು, ಆನೆಕಲ್ಲುಗಳು ಸುರಿಯುವುವು; ಬಿರುಗಾಳಿ ಗೋಡೆಯನ್ನು ಕೆಡವಿಹಾಕುವುದು; 12 ಇಗೋ, ಗೋಡೆ ಬಿದ್ದ ಮೇಲೆ, ‘ನೀವು ಬಳಿದ ಸುಣ್ಣ ಎಲ್ಲಿ?’ ಎಂದು ನಿಮ್ಮನ್ನು ಕೇಳುವರಲ್ಲವೆ?’ 13 “ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಕೆಡವಿಹಾಕುವೆನು; ಅದನ್ನು ನಾಶಮಾಡಲು ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು; ರೋಷದಿಂದ ಆನೆಕಲ್ಲುಗಳು ಸುರಿಯುವುವು. 14 ನೀನು ಸುಣ್ಣ ಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲಸಮಮಾಡಿ ಅದರ ಅಸ್ತಿವಾರವನ್ನು ಹೊರಗೆಡಹುವೆನು; ಅದು ಹೀಗೆ ಬಿದ್ದುಹೋಗುವಾಗ ನೀವು ಅದರೊಳಗೆ ಸಿಕ್ಕಿ ನಾಶವಾಗುವಿರಿ; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.’ 15 “ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು: 16 ‘ಇಸ್ರಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯ ದರ್ಶನಗಳನ್ನು ನೀವು ಕಂಡು ಜೆರುಸಲೇಮಿನ ಬಗ್ಗೆ ಪ್ರವಾದಿಸಿದ್ದೀರಲ್ಲವೆ? ಗೋಡೆ ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು; ಇದು ಸರ್ವೇಶ್ವರನಾದ ದೇವರ ನುಡಿ.’ ಸುಳ್ಳು ಪ್ರವಾದಿನಿಯರಿಗೆ ಧಿಕ್ಕಾರ! 17 “ನರಪುತ್ರನೇ, ಸ್ವಕಲ್ಪಿತವಾದದ್ದನ್ನು ಭವಿಷ್ಯವಾಣಿ ಎಂದು ಹೇಳುವ ನಿನ್ನ ಸ್ವಕುಲ ಮಹಿಳೆಯರ ಕಡೆಗೆ ಮುಖಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು: 18 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು, ಎಲ್ಲರ ಮೊಣಕೈಗಳಿಗೆ ತಾಯಿತಿಗಳನ್ನು ಕಟ್ಟಿ, ಉದ್ದವಾದವರಿಗೂ ಗಿಡ್ಡವಾದವರಿಗೂ ತಕ್ಕತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಮಹಿಳೆಯರಿಗೆ ಧಿಕ್ಕಾರ! ಮಹಿಳೆಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ, ನಿಮಗೆ ಬೇಕಾದವರ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ? 19 ನೀವು ಹಿಡಿಯುವಷ್ಟೆ ಜವೆಗೋಧಿಗೆ, ಚೂರುಪಾರು ರೊಟ್ಟಿಗೆ ಆಸೆಪಟ್ಟು, ಸುಳ್ಳುಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.” 20 ಹೀಗಿರಲು, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಅಕಟಾ! ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ನಾನು ಹೇಸಿ, ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತುಹಾಕುವೆನು; ನೀವು ಬೇಟೆಯಾಡುವ ಪ್ರಾಣಿಗಳನ್ನು ಬಿಡುಗಡೆಮಾಡಿ ಪಕ್ಷಿಗಳ ಹಾಗೆ ಸ್ವತಂತ್ರವಾಗಿಸುವೆನು. 21 ನಾನು ನಿಮ್ಮ ಮುಸುಕುಗಳನ್ನೂ ಹರಿದು, ನನ್ನ ಜನರನ್ನು ನಿಮ್ಮ ಕೈಯಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ; ನಾನೆ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು. 22 “ನಾನು ಎದೆಗುಂದಿಸದ ಶಿಷ್ಯನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನನ್ನು ಪ್ರೋತ್ಸಾಹಿಸಿದ್ದೀರಿ. 23 ಆದಕಾರಣ ನೀವು ಮಿಥ್ಯದರ್ಶನವನ್ನು ಹೊಂದಿ, ಸುಳ್ಳುಭವಿಷ್ಯ ಹೇಳುವ ಕೆಲಸ ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈವಶದಿಂದ ಬಿಡಿಸುವೆನು; ನಾನೆ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India