Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಪ್ರವಾದಿ ಯೆಶಾಯನ ಕಾಲ ಸುಮಾರು ಕ್ರಿ. ಪೂ. 800-750. ಈತನ ವಾಸಸ್ಥಳ ಜೆರುಸಲೇಮ್. ಹಿರಿಯ ಪ್ರವಾದಿಗಳಲ್ಲಿ ಅಗ್ರಗಣ್ಯನಾದ ಈತನ ಗ್ರಂಥದಲ್ಲಿ ಮೂರು ಭಾಗಗಳಿವೆ :
(1) ಅಧ್ಯಾಯ 1ರಿಂದ 39
ಇಸ್ರಯೇಲಿನ ದಕ್ಷಿಣದಲ್ಲಿದ್ದ ಜುದೇಯ ನಾಡನ್ನು ನೆರೆಯ ಬಲಿಷ್ಠ ರಾಷ್ಟ್ರವಾದ ಅಸ್ಸೀರಿಯವು ಆಕ್ರಮಿಸಲಿದೆ. ಜುದೇಯ ನಾಡಿಗೆ ಬರಲಿರುವ ಈ ಗಂಡಾಂತರಕ್ಕೆ ಮೂಲಕಾರಣ ಅಸ್ಸೀರಿಯದ ಆಕ್ರಮಣ ಮಾತ್ರವಲ್ಲ, ಜುದೇಯ ಜನರ ಪಾಪ, ದೇವರನ್ನು ಕುರಿತ ಅವಿಶ್ವಾಸ, ಯೆಹೂದ್ಯರ ಅವಿಧೇಯತೆ ಎಂಬುದನ್ನು ಪ್ರವಾದಿ ಮನಗಾಣುತ್ತಾನೆ. ಎಂತಲೇ ಜುದೇಯ ನಾಡಿನ ಜನರು ಮತ್ತು ಅವರ ಮುಖಂಡರು ನ್ಯಾಯನೀತಿ, ದೇವರೊಂದಿಗೆ ಸತ್ಸಂಬಂಧವುಳ್ಳ ಜೀವನ ಇವುಗಳ ಕಡೆ ಗಮನ ಹರಿಸಬೇಕು; ಇಲ್ಲದೆಹೋದರೆ, ನ್ಯಾಯತೀರ್ಪು, ಸಂಪೂರ್ಣ ವಿನಾಶ, ಅವರಿಗೆ ಕಟ್ಟಿಟ್ಟ ಬುತ್ತಿ ಎಂದು ಪ್ರವಾದಿ ಮನಮುಟ್ಟುವಂತೆ ಹರಿತವಾದ ಮಾತುಗಳಿಂದಲೂ ಸೂಚಕಕಾರ್ಯಗಳಿಂದಲೂ ಎಚ್ಚರಿಸುತ್ತಾನೆ. ಕಾಲ ಬರಲಿದೆ, ವಿಶ್ವದಲ್ಲೆಲ್ಲ ಶಾಂತಿಸ್ಥಾಪನೆಯಾಗಲಿದೆ, ದಾವೀದವಂಶಜನೊಬ್ಬನು ಆದರ್ಶಪ್ರಾಯ ಅರಸನಾಗಲಿದ್ದಾನೆ ಎಂದು ಪ್ರವಾದಿ ಮುಂತಿಳಿಸುತ್ತಾನೆ.
(2) ಅಧ್ಯಾಯ 40-55
ಜುದೇಯ ನಾಡಿನ ಅನೇಕ ಜನರು ದೇಶಭ್ರಷ್ಟರಾಗಿದ್ದಾರೆ, ಅನ್ಯನಾಡಾದ ಬಾಬಿಲೋನಿಯಾದಲ್ಲಿ ಗುಲಾಮರಾಗಿದ್ದಾರೆ. ಶೋಷಣೆಗಳಿಗೆ ಗುರಿಯಾಗಿ ನಿರಾಶೆಗೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿರುವ ಜನರಿಗೆ ಪ್ರವಾದಿ ಅಭಯ ನೀಡುತ್ತಾನೆ. ದೇವರು ತಮ್ಮ ಜನರಿಗೆ ಸ್ವಾತಂತ್ರ್ಯನೀಡುವರು, ಸ್ವದೇಶಕ್ಕೆ ಹಿಂತಿರುಗುವಂತೆ ಮಾಡುವರು, ಹೊಸಜೀವನವನ್ನು ಪ್ರಾರಂಭಿಸಲು ಹುರಿದುಂಬಿಸುವರು ಎಂದು ಘೋಷಣೆ ಮಾಡುತ್ತಾನೆ. ದೇವರೇ ಇತಿಹಾಸದ ಪ್ರಭು. ತಮ್ಮ ಜನರ ಬಗ್ಗೆ ಅವರಿಗಿರುವ ಯೋಜನೆಯಲ್ಲಿ ಧರ್ಮಪ್ರಚಾರವು ಅಖಿಲ ರಾಷ್ಟ್ರಗಳಿಗೆ ಇಸ್ರಯೇಲರ ಮುಖಾಂತರವೇ ಆಗಬೇಕು; ಇದರ ಪರಿಣಾಮವಾಗಿ ದೈವದತ್ತ ಸೌಭಾಗ್ಯದಲ್ಲಿ ಸರ್ವರೂ ಪಾಲುಗಾರರಾಗುವರು - ಇವೇ ಮುಂತಾದ ಅಂಶಗಳನ್ನು ಈ ದ್ವಿತೀಯ ಭಾಗದಲ್ಲಿ ಕಾಣುತ್ತೇವೆ.
ಈ ಭಾಗದಲ್ಲಿ ಕಂಡುಬರುವ “ದೇವರ ದಾಸ"ನನ್ನು ಕುರಿತ ವಚನಗಳು ಹಳೆಯ ಒಡಂಬಡಿಕೆಯಲ್ಲೇ ಸುಪ್ರಸಿದ್ಧವಾದುವು.
(3) ಅಧ್ಯಾಯ 56-66
ಸೆರೆಹೋಗಿದ್ದ ಇಸ್ರಯೇಲ್ ಜನತೆ ಮರಳಿ ಜೆರುಸಲೇಮಿಗೆ ಬಂದಿದೆ. ದೇವರು ರಾಷ್ಟ್ರಕ್ಕೆ ಕೊಟ್ಟ ವಾಗ್ದಾನ ನೆರವೇರುವುದನ್ನು ಅದು ಎದುರು ನೋಡುತ್ತಿದೆ. ಇಂಥ ಜನರನ್ನು ಸಂಬೋಧಿಸಿ ಪ್ರವಾದಿ ಉಪದೇಶ ನೀಡುತ್ತಾನೆ. ದೇವರೊಡನೆ ಸತ್ಸಂಬಂಧ, ನ್ಯಾಯ ನೀತಿಪಾಲನೆ, ಸಬ್ಬತ್‍ದಿನದ ಆಚರಣೆ, ಪ್ರಾರ್ಥನೆ, ಬಲಿಯರ್ಪಣೆ - ಇವುಗಳ ಅವಶ್ಯಕತೆಯನ್ನು ಪ್ರವಾದಿ ಒತ್ತಿ ಹೇಳುತ್ತಾನೆ. ಅಧ್ಯಾಯ 61:1-3ರ ವಚನಗಳು ಯೇಸು ಸ್ವಾಮಿಗೆ ಅನ್ವಯಿಸುತ್ತವೆ. ಇದನ್ನು ಕುರಿತು, ಯೇಸುವೇ ತಮ್ಮ ಬಾಹ್ಯ ಜೀವನದ ಆದಿಯಲ್ಲೇ ಉದ್ಧರಿಸುತ್ತಾರೆ.
ಪರಿವಿಡಿ
1. ಎಚ್ಚರಿಕೆ ಮತ್ತು ವಾಗ್ದಾನ 1:1—12:6
2. ರಾಷ್ಟ್ರಗಳಿಗೆ ಬರಲಿರುವ ದಂಡನೆ 13:1—23:18
3. ಜಗತ್ತಿಗೆ ದೇವರು ನೀಡುವ ನ್ಯಾಯತೀರ್ಪು 24:1—27:13
4. ಮುನ್ನೆಚ್ಚರಿಕೆ ಹಾಗೂ ಭರವಸೆ 28:1—35:10
5. ಜುದೇಯ ನಾಡಿನ ಅರಸ ಹಿಜ್ಕೀಯ ಮತ್ತು ಅಸ್ಸೀರಿಯ ನಾಡು 36:1—39:8
6. ವಾಗ್ದಾನ ಹಾಗೂ ಅಭಯದಾನ 40:1—55:13
7. ಇತರ ವಾಗ್ದಂಡನೆಗಳು ಹಾಗೂ ಅಭಯ ವಚನಗಳು 56:1—66:24

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು