Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 9 - ಕನ್ನಡ ಸತ್ಯವೇದವು C.L. Bible (BSI)


ಬರಲಿರುವ ರಾಜಾಧಿರಾಜ

1 ಆದರೂ ಕಷ್ಟಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆಗೌರವ ಬಂದೊದಗುವುದು.

2 ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಾಡಿಗರಿಗೆ.

3 ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.

4 ಮುರಿದುಹಾಕಿದೆ ಭಾರವಾದ ಅವರ ನೊಗವನು ಅವರ ಬೆನ್ನನ್ನು ಬಡಿದ ಬೆತ್ತವನು ದಬ್ಬಾಳಿಕೆ ನಡೆಸಿದವರ ದೊಣ್ಣೆಯನು; ಮಿದ್ಯಾನನ್ನು ಗೆದ್ದ ದಿನದಂದು ಹಾಗೆಯೆ ಮಾಡಿದೆಯಲ್ಲವೆ ನೀನು?

5 ಅಗ್ನಿಕುಂಡಕ್ಕೆ ಆಹುತಿಯಾಗುವುವು ಯುದ್ಧಕ್ಕೆ ಬಂದ ಯೋಧರ ಪಾದರಕ್ಷೆಗಳು ರಕ್ತಸಿಕ್ತವಾದವರ ದೇಹದ ಕವಚಗಳು.

6 ಮಗುವೊಂದು ಹುಟ್ಟಿತೆಮಗೆ ವರಪುತ್ರನನು ಕೊಟ್ಟರೆಮಗೆ. ಆತನ ಕೈಯಲ್ಲಿಹುದು ರಾಜ್ಯಾಡಳಿತ ‘ಅದ್ಭುತಶಾಲಿ’, ಮಂತ್ರಿಶ್ರೇಷ್ಠ’ ‘ಪರಾಕ್ರಮದೇವ’, ‘ಅನಂತ ಪಿತ’, ‘ಶಾಂತಿ ನೃಪ’ - ಇವು ಆತನ ನಾಮಾಂಕಿತ.

7 ಅಂತ್ಯವಿರದಾತನ ರಾಜ್ಯಾಭಿವೃದ್ಧಿಗೆ ಕೊನೆಯಿರದಾ ರಾಜ್ಯದ ಶಾಂತಿಗೆ. ಆಸೀನನಾಗುವನಾತ ದಾವೀದನ ಸಿಂಹಾಸನದ ಮೇಲೆ ಅಧಿಕಾರ ನಡೆಸುವನು ಆ ಸಾಮ್ರಾಜ್ಯದ ಮೇಲೆ. ಬಲಪಡಿಸುವನು ನ್ಯಾಯನೀತಿಯಿಂದದನು ಇಂದಿಗೂ ಎಂದೆಂದಿಗೂ ಸ್ಥಿರಪಡಿಸುವನದನು. ಸರ್ವಶಕ್ತಸ್ವಾಮಿಯ ಆಗ್ರಹವೆ ಸಾಧಿಸುವುದದನು.


ಇಸ್ರಯೇಲಿಗೆ ಶಾಪದ ಸಂದೇಶ

8 ಯಕೋಬ ಕುಲದವರಿಗೆ‍ ಶಾಪದ ಸಂದೇಶ ಒಂದನ್ನು ಸರ್ವೇಶ್ವರ ಕಳುಹಿಸಿರುವರು. ಅದು ಇಸ್ರಯೇಲರ ಮೇಲೆ ಎರಗುವುದು.

9 “ಇಟ್ಟಿಗೆಗಳು ಬಿದ್ದುಹೋಗಿವೆ. ಕೆತ್ತನೆ ಕಲ್ಲುಗಳಿಂದ ಮರಳಿ ಕಟ್ಟುವೆವು. ಕಡಿದಿರುವರು ಅತ್ತಿಮರಗಳನ್ನು, ಅಲ್ಲೇ ನೆಡುವೆವು ದೇವದಾರು ವೃಕ್ಷಗಳನ್ನು,” ಎಂದು ಗರ್ವದಿಂದ ಕೊಚ್ಚಿಕೊಳ್ಳುವ

10 ಎಫ್ರಯಿಮ್ ಜನರಿಗೂ ಸಮಾರ್ಯದ ನಿವಾಸಿಗಳಿಗೂ ಅದು ಗೊತ್ತಾಗುವುದು.

11 ಸ್ವಾಮಿಯು ರೆಚೀನನ ಶತ್ರುಗಳನ್ನು ಅವರ ವಿರುದ್ಧವಾಗಿ ಎತ್ತಿಕಟ್ಟಿರುವರು. ಅವರ ಮುಂದೆ ಸೀರಿಯರನ್ನು, ಅವರ ಹಿಂದೆ ಫಿಲಿಷ್ಟಿಯರನ್ನು - ಹೀಗೆ ಎಲ್ಲಾ ಶತ್ರುಗಳನ್ನು ಎಬ್ಬಿಸಿರುವರು.

12 ಇವರು ಇಸ್ರಯೇಲರನ್ನು ನುಂಗಿಬಿಡಲು ಬಾಯಿ ತೆರೆದಿದ್ದಾರೆ. ಇಷ್ಟಾದರೂ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.

13 ಆದರೂ ತಮ್ಮನ್ನು ಶಿಕ್ಷಿಸಿದ ದೇವರಿಗೆ ಇಸ್ರಯೇಲರು ಅಭಿಮುಖರಾಗಲಿಲ್ಲ. ಸೇನಾಧೀಶ್ವರಸ್ವಾಮಿಯನ್ನು ಅರಸಲಿಲ್ಲ.

14-15 ಆದಕಾರಣ, ಇಸ್ರಯೇಲಿನ ತಲೆಬಾಲಗಳನ್ನೂ ತುದಿಬುಡವನ್ನೂ ಹುಲ್ಲಿನಂತೆ ಸ್ವಾಮಿ ಒಂದೇ ದಿನದಲ್ಲಿ ಕಡಿದುಬಿಡುವರು; ಅಂದರೆ ಸನ್ಮಾನ್ಯ ಹಿರಿಯರನ್ನು, ಸುಳ್ಳುಬೋಧನೆ ಮಾಡುವ ಪ್ರವಾದಿಗಳನ್ನು ಸಂಹರಿಸಿಬಿಡುವರು.

16 ಈ ಜನರನ್ನು ನಡೆಸುವವರು ತಪ್ಪುದಾರಿಗೆ ಎಳೆಯುವಂಥವರು. ಅವರನ್ನು ಹಿಂಬಾಲಿಸುವವರೆಲ್ಲ ನಾಶವಾಗುವರು.

17 ಎಂದೇ ಅವರ ಯುವಕ ಯುವತಿಯರ ಬಗ್ಗೆ ಸ್ವಾಮಿಗೆ ಸಂತೋಷವಿಲ್ಲ; ಅವರ ಅನಾಥರ ಮತ್ತು ವಿಧವೆಯರ ಬಗ್ಗೆ ಸಹಾನುಭೂತಿಯಿಲ್ಲ. ಪ್ರತಿಯೊಬ್ಬನೂ ಧರ್ಮಭ್ರಷ್ಟನೂ ಅತಿ ದುಷ್ಟನೂ ಆಗಿದ್ದಾನೆ. ಪ್ರತಿಯೊಬ್ಬನ ಬಾಯಿ ನುಡಿಯುವುದು ಕೆಡುಕನ್ನೇ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.

18 ದುಷ್ಟತನ ಬೆಂಕಿಗೆ ಸಮಾನ. ಅದು ಮುಳ್ಳುಗಿಳ್ಳುಗಳನ್ನು ಸುಟ್ಟುಹಾಕುತ್ತದೆ. ಕಾಡುಪೊದೆಗಳನ್ನು ಭಸ್ಮಮಾಡುತ್ತದೆ. ಹೊಗೆಯಾಡುತ್ತಾ ಮುಗಿಲಂತೆ ಮೇಲೆ ಬೀಳುತ್ತದೆ.

19 ಸೇನಾಧೀಶ್ವರಸ್ವಾಮಿಯ ಕೋಪಾಗ್ನಿಯಿಂದ ನಾಡು ಸುಟ್ಟುಹೋಗಿದೆ. ಪ್ರಜೆಗಳು ಅಗ್ನಿಗೆ ಆಹುತಿಯಾಗಿದ್ದಾರೆ. ಅಣ್ಣನಿಗೆ ತಮ್ಮನ ಮೇಲೆ ದಯೆ ಇಲ್ಲದಾಗಿದೆ.

20 ಅತ್ತ ಕಿತ್ತುತಿಂದರೂ ಅವರಿಗೆ ತೃಪ್ತಿಯಿಲ್ಲ. ಇತ್ತ ಕುಡಿದು ಕಬಳಿಸಿದರೂ ಅವರ ಹಸಿವು ನೀಗುವುದಿಲ್ಲ. ಒಬ್ಬೊಬ್ಬನೂ ತನ್ನ ಕಂದನನ್ನೇ ಕೊಂದು ತಿನ್ನುತ್ತಾನೆ.

21 ಮನಸ್ಸೆ ಎಫ್ರಯಿಮನ್ನು ಎಫ್ರಯಿಮ್ ಮನಸ್ಸೆಯನ್ನು ಕಬಳಿಸುತ್ತದೆ. ಇವೆರಡೂ ಸೇರಿ ಜುದೇಯಕ್ಕೆ ವಿರುದ್ಧವಾಗಿ ಎದ್ದು ನಿಂತಿವೆ. ಇಷ್ಟಾದರೂ ಸಹ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು