Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 65 - ಕನ್ನಡ ಸತ್ಯವೇದವು C.L. Bible (BSI)

1 ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ನನ್ನನ್ನು ವಿಚಾರಿಸದವರಿಗೂ ನಾ ದರ್ಶನವಿತ್ತೆ. ನನ್ನನ್ನು ಹುಡುಕದವರಿಗೂ ನಾ ಒಡನೆ ಸಿಕ್ಕಿದೆ. ನನ್ನ ನಾಮಸ್ಮರಣೆ ಮಾಡದ ಜನಾಂಗಕ್ಕೆ, ಇಗೋ, ‘ಇದ್ದೇನೆ, ಇಲ್ಲೇ ಇದ್ದೇನೆ’ ಎನ್ನುತ್ತಿದ್ದೆ.

2 ನನ್ನನ್ನು ತೊರೆದು ತಮಗೆ ಇಷ್ಟಬಂದ ಹಾದಿಯನ್ನು ಹಿಡಿದು ದುಷ್ಟಮಾರ್ಗದಲ್ಲೆ ನಡೆದ ಜನತೆಯನ್ನು ಕೈಚಾಚಿ ಕರೆದೆ.

3 ಈ ಜನರು ತೋಪುಗಳಲ್ಲಿ ಬಲಿಕೊಡುತ್ತಾರೆ. ಇಟ್ಟಿಗೆಯ ಪೀಠಗಳ ಮೇಲೆ ಧೂಪಾರತಿ ಎತ್ತುತ್ತಾರೆ.

4 ಗೋರಿಗಳಲ್ಲಿ ಕುಳಿತುಕೊಳ್ಳುತ್ತಾರೆ, ಗುಪ್ತಸ್ಥಳಗಳಲ್ಲಿ ರಾತ್ರಿಯನ್ನು ಕಳೆಯುತ್ತಾರೆ, ಹಂದಿಯ ಮಾಂಸವನ್ನು ತಿನ್ನುತ್ತಾರೆ, ಅಸಹ್ಯ ಪದಾರ್ಥಗಳ ಸಾರವನ್ನು ತಟ್ಟೆಗಳಲ್ಲಿ ಬಡಿಸಿಕೊಳ್ಳುತ್ತಾರೆ.

5 ಬೇರೆಯವರಿಗೆ, ‘ಅಲ್ಲೇ ನಿಲ್ಲು, ಹತ್ತಿರ ಬರಬೇಡ; ನಿನಗಿಂತ ನಾನು ಮಡಿವಂತ’ ಎನ್ನುತ್ತಾರೆ. ಹೀಗೆ ಇವರು ನನಗೆ ಉಸಿರುಕಟ್ಟುವ ಹೊಗೆಯಾಗಿದ್ದಾರೆ; ದಿನವೆಲ್ಲ ಉರಿಯುವ ಬೆಂಕಿಯಾಗಿದ್ದಾರೆ.

6 “ಇಗೋ, ಇವೆಲ್ಲ ನನ್ನ ಕಣ್ಣೆದುರಿಗೆ ಲಿಖಿತವಾಗಿವೆ; ನಾನು ಮುಯ್ಯಿ ತೀರಿಸಿಯೇ ತೀರಿಸುವೆನು, ಸುಮ್ಮನಿರಲಾರೆ.

7 ಇವರೂ ಇವರ ಪಿತೃಗಳೂ ಬೆಟ್ಟಗುಡ್ಡಗಳ ಮೇಲೆ ಧೂಪಾರತಿ ಎತ್ತಿ ನನ್ನನ್ನು ಅವಮಾನಗೊಳಿಸಿದ್ದಾರೆ. ತಕ್ಕ ಪ್ರತೀಕಾರವನ್ನು ಎಸಗುವೆನು ಈ ಅಪರಾಧಗಳಿಗೆ. ಹೌದು, ಮೊಟ್ಟಮೊದಲು ಪ್ರತೀಕಾರ ಇವರ ಕಾರ್ಯಕ್ಕೆ; ಅದನ್ನು ಸರಿಯಾಗಿ ಅಳೆದು ಸುರಿಸುವೆನು ಇವರ ಮಡಿಲಿಗೆ.”

8 ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ದ್ರಾಕ್ಷಿಯ ಗೊಂಚಲಿನಲ್ಲಿ ರಸವಿರುವ ತನಕ, ‘ಅದನ್ನು ಹಾಳುಮಾಡಬೇಡ, ಅದೊಂದು ಪ್ರಸಾದ,’ ಎನ್ನುತ್ತಾರೆ ಜನ. ಅಂತೆಯೇ ನಾನು ನನ್ನ ಭಕ್ತಾದಿಗಳನ್ನು ಲಕ್ಷ್ಯಕ್ಕೆ ತಂದುಕೊಂಡು ಜನರೆಲ್ಲರನ್ನು ಹಾಳುಮಾಡಬಾರದು ಎಂದುಕೊಂಡೆನು.

9 ಯಕೋಬನಿಂದ ಒಂದು ಸಂತಾನವನ್ನು ಉತ್ಪನ್ನಮಾಡುವೆನು; ಯೆಹೂದ ವಂಶದಿಂದ, ನನ್ನ ಪರ್ವತಗಳ ಸೊತ್ತಿಗೆ ಹಕ್ಕುಬಾಧ್ಯತೆಯುಳ್ಳ ಒಂದು ಸಂತತಿಯನ್ನು ಬರಮಾಡುವೆನು. ನನ್ನಿಂದ ಆಯ್ಕೆಯಾದವರು ಆ ಸೊತ್ತನ್ನು ಅನುಭವಿಸುವರು, ನನ್ನ ಭಕ್ತಾದಿಗಳು ಅಲ್ಲಿ ವಾಸಮಾಡುವರು.

10 ನನ್ನ ಜನರ ಹಿತಕ್ಕಾಗಿ ಶಾರೋನ್‍ಬಯಲು ಮಂದೆಗಳಿಗೆ ಹುಲ್ಲುಗಾವಲಾಗುವುದು; ಆಕೋರಿನ ಕಣಿವೆ ದನಕರುಗಳಿಗೆ ಕೊಟ್ಟಿಗೆಯಾಗುವುದು.

11 “ಆದರೆ ನನ್ನನ್ನು ತೊರೆದು ನನ್ನ ಪವಿತ್ರ ಪರ್ವತವನ್ನು ಮರೆತು, ‘ಗಾದ್’ ಎಂಬ ಅದೃಷ್ಟ ದೇವತೆಗೆ ಔತಣವನ್ನು ಅಣಿಮಾಡುವ, ‘ಮೆನೀ’ ಎಂಬ ಗತಿ ದೇವತೆಗೆ ಬೆರೆತ ಮದ್ಯವನ್ನು ಭರ್ತಿಮಾಡುವ, ನಿಮಗೆ ಕತ್ತಿಯನ್ನೇ ಗತಿಯನ್ನಾಗಿ ಮಾಡುವೆನು.

12 ನೀವೆಲ್ಲರು ಕೊಲೆಗೆ ಗುರಿಯಾಗುವಿರಿ, ಕತ್ತಿಗೆ ತುತ್ತಾಗುವಿರಿ. ಏಕೆಂದರೆ, ನಾನು ಕೂಗಿದಾಗ ನೀವು ಉತ್ತರಕೊಡಲಿಲ್ಲ, ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೇ ನಡೆಸಿ ನನಗೆ ಇಷ್ಟವಿಲ್ಲದ್ದನ್ನೇ ಆಯ್ಕೆಮಾಡಿಕೊಂಡಿರಿ.

13 ಇಗೋ, ನನ್ನ ಭಕ್ತರು ಊಟಮಾಡುವರು, ನೀವಾದರೋ ಹಸಿದಿರುವಿರಿ. ನನ್ನ ಭಕ್ತರು ಪಾನಮಾಡುವರು, ನೀವಾದರೋ ದಾಹಗೊಳ್ಳುವಿರಿ. ನನ್ನ ಭಕ್ತರು ಉಲ್ಲಾಸಗೊಳ್ಳುವರು; ನೀವಾದರೋ ಲಜ್ಜೆಗೊಳ್ಳುವಿರಿ.

14 ನನ್ನ ಭಕ್ತರು ಹೃದಯಾನಂದದಿಂದ ಹಿಗ್ಗಿ ಹಾಡುವರು; ನೀವಾದರೋ ಮನನೊಂದು ಮೊರೆಯಿಡುವಿರಿ; ದುಃಖದಿಂದ ಅಳುವಿರಿ.

15 ಆಯ್ಕೆಯಾದವರಿಗೆ ನಿಮ್ಮ ಹೆಸರು ಶಾಪದ ಹೆಸರಾಗಿಯೇ ಉಳಿಯುವುದು. ಏಕೆಂದರೆ, ಸ್ವಾಮಿ ಸರ್ವೇಶ್ವರ ಆದ ನಾನು ನಿಮ್ಮನ್ನು ಕೊಲೆಗೀಡುಮಾಡುವೆನು. ನನ್ನ ಭಕ್ತಾದಿಗಳಿಗಾದರೋ ಹೊಸ ಹೆಸರನ್ನು ಕೊಡುವೆನು.

16 ಹಳೆಯ ಕಷ್ಟದುಃಖಗಳು ಇನ್ನು ಕಣ್ಮರೆಯಾಗಿಹೋಗುವುವು: ನಾಡಿನಲ್ಲಿ ಆಶೀರ್ವಾದ ಪಡೆಯುವವನು ಸತ್ಯಸ್ವರೂಪನಾದ ದೇವರ ಹೆಸರಿನಲ್ಲಿ ಆಶೀರ್ವಾದ ಪಡೆಯುವನು. ಶಪಥ ಮಾಡುವವನು ಸತ್ಯಸ್ವರೂಪನಾದ ದೇವರ ಹೆಸರಿನಲ್ಲಿ ಶಪಥಮಾಡುವನು.”


ನವಯುಗದ ಸೊಬಗು

17 ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುವೆನು; ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು.

18 ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ : ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು.

19 ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು.

20 ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಸದ ಮುದುಕನಾಗಲಿ ಇನ್ನು ಇಲ್ಲಿರನು. ನೂರು ವರ್ಷ ಬಾಳುವವನು ‘ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ‘ಶಾಪಗ್ರಸ್ತ’ ಎನಿಸಿಕೊಳ್ಳುವನು.

21 ಜನರು ಅಲ್ಲೇ ಮನೆಮಾಡಿ ನಿವಾಸಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.

22 ತಾವು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಾಗಲಿ, ತಾವು ನೆಟ್ಟ ತೋಟಗಳ ಫಲವನ್ನು ಬೇರೆಯವರು ಅನುಭವಿಸುವುದಾಗಲಿ ಇನ್ನು ಸಂಭವಿಸದು. ಏಕೆಂದರೆ, ನನ್ನ ಜನರು ಮರಗಳಂತೆ ಬಹುಕಾಲ ಬಾಳುವರು. ನನ್ನಿಂದ ಆಯ್ಕೆಯಾದವರು ತಮ್ಮ ದುಡಿಮೆಯ ಫಲವನ್ನು ದೀರ್ಘಕಾಲ ಅನುಭವಿಸುವರು.

23 ಅವರು ವ್ಯರ್ಥವಾಗಿ ದುಡಿಯರು, ಅನಾಹುತಕ್ಕಾಗಿ ಮಕ್ಕಳನ್ನು ಹಡೆಯರು. ಸದಾಕಾಲ ಅವರೂ ಅವರ ಸಂತತಿಯವರೂ ಸರ್ವೇಶ್ವರನಿಂದ ಅನುಗ್ರಹಗೊಂಡ ಗೋತ್ರವಾಗುವರು.

24 ಅವರು ಮೊರೆಯಿಡುವುದಕ್ಕೆ ಮುಂಚೆಯೇ ನಾ ಕಿವಿಗೊಡುವೆನು; ಅವರು ಪ್ರಾರ್ಥಿಸುವಾಗಲೇ ನಾನು ಸದುತ್ತರ ನೀಡುವೆನು.

25 ತೋಳವೂ ಕುರಿಮರಿಯೂ ಒಂದಾಗಿ ಮೇಯುವುವು; ಸಿಂಹವು ಗೋವಿನಂತೆ ಹುಲ್ಲು ತಿನ್ನುವುದು; ಹಾವಿಗೆ ಮಣ್ಣೇ ಆಹಾರವಾಗುವುದು. ನನ್ನ ಪವಿತ್ರಪರ್ವತದೊಳೆಲ್ಲೂ ಅವು ಯಾವ ಕೇಡು ಮಾಡವು, ಹಾಳುಮಾಡವು.” ಇದು ಸರ್ವೇಶ್ವರ ಸ್ವಾಮಿಯ ನುಡಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು