ಯೆಶಾಯ 62 - ಕನ್ನಡ ಸತ್ಯವೇದವು C.L. Bible (BSI)1 ಸಿಯೋನಿನ ಸದ್ಧರ್ಮವು ಪ್ರಕಾಶಗೊಳ್ಳುವತನಕ ಜೆರುಸಲೇಮಿನ ಉದ್ಧಾರ ದೀಪವು ಬೆಳಗುವತನಕ ಸುಮ್ಮನಿರೆನು ನಾನು ಸಿಯೋನಿನ ಹಿತವನ್ನು ಲಕ್ಷಿಸದೆ, ಮೌನವಿರೆನು ಜೆರುಸಲೇಮಿನ ಸುಕ್ಷೇಮವನು ಚಿಂತಿಸದೆ. 2 ನೋಡುವರು ಜನಾಂಗಗಳು ನಿನ್ನ ಸದ್ಧರ್ಮವನು ಕಾಣುವರು ಸಕಲ ರಾಜರು ನಿನ್ನ ವೈಭವವನು ಪಡೆಯುವೆ ನೀನು ಸರ್ವೇಶ್ವರನೇ ಕೊಟ್ಟ ಹೊಸ ಹೆಸರನು. 3 ಸರ್ವೇಶ್ವರನ ಕೈಯಲ್ಲಿ ನೀನು ಸುಂದರ ಕಿರೀಟವಾಗಿ ಮೆರೆಯುವೆ ನಿನ್ನ ದೇವರ ಹಸ್ತದಲ್ಲಿ ರಾಜ ಮುಕುಟವಾಗಿ; 4 “ಎನ್ನ ಮನದನ್ನೆ” ಎನಿಸಿಕೊಳ್ಳುವೆ ನೀನು “ಸುವಿವಾಹಿತೆ” ಎನಿಸಿಕೊಳ್ಳುವುದು ನಿನ್ನ ನಾಡು. ನಿನ್ನಲ್ಲಿದೆ ಉಲ್ಲಾಸ ಸರ್ವೇಶ್ವರನಿಗೆ ವಿವಾಹವಾಗುವುದಿದೆ ನಿನ್ನ ನಾಡಿಗೆ. 5 ಯುವಕನು ಕನ್ಯೆಯುವತಿಯನು ವರಿಸುವಂತೆ ವರಿಸುವನು ಸೃಷ್ಟಿಕರ್ತನು ನಿನ್ನನು. ವರನು ವಧುವಿನಲಿ ಆನಂದಿಸುವಂತೆ ನಿನ್ನಲಿ ಆನಂದಿಸುವನು ನಿನ್ನ ದೇವನು. 6 ಜೆರುಸಲೇಮ್, ಕಾವಲಿಟ್ಟಿರುವೆ ನಿನ್ನ ಗೋಡೆ ಸುತ್ತಲು ಮೌನವಿರಕೂಡದು ಆ ಕಾವಲಿಗರು ಹಗಲಿರುಳು. 7 ಜೆರುಸಲೇಮನ್ನು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವತನಕ ನೆನಪಿಸುತ್ತಿರಬೇಕು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವತನಕ ನಿಮಗಿರದಿರಲಿ ವಿಶ್ರಾಂತಿ, ಆತನಿಗೂ ಕೊಡದಿರಿ ವಿರಾಮ. 8 ತನ್ನ ಬಲಗೈ ಮೇಲೆ, ಭುಜಬಲದ ಮೇಲೆ ಸರ್ವೇಶ್ವರನಿಟ್ಟ ಆಣೆ : “ಕೊಡೆನಿನ್ನು ನಿನ್ನ ದವಸಧಾನ್ಯವನು ಶತ್ರುಗಳ ಆಹಾರಕ್ಕೆ ನಿನ್ನ ದುಡಿಮೆಯ ದ್ರಾಕ್ಷಾರಸವನು ಅನ್ಯಜನರು ಕುಡಿಯಲಿಕ್ಕೆ. 9 ಬೆಳೆಮಾಡಿದವರೇ ಕಾಳನು ತಿಂದು ಸ್ತುತಿಸುವರು ಸರ್ವೇಶ್ವರನನು; ದ್ರಾಕ್ಷಿ ಕಿತ್ತವರೇ ಕುಡಿವರು ಈ ರಸವನು ನನ್ನಾಲಯದ ಅಂಗಳದೊಳು.” 10 ಹೊರಟುಬನ್ನಿ, ಹಾದುಬನ್ನಿ, ಪುರದ್ವಾರವನು ಬರಲಿರುವ ಜನರಿಗೆ ಸರಿಮಾಡಿರಿ ಹಾದಿಯನು ಎತ್ತರಿಸಿ ಹೆದ್ದಾರಿಯನು, ತೆಗೆದುಹಾಕಿ ಕಲ್ಲುಗಳನು ಹಾರಿಸಿ ಧ್ವಜವನು, ನೀಡಿ ರಾಷ್ಟ್ರಗಳಿಗೆ ಸೂಚನೆಯನು. 11 ಇಗೋ, ಸಮೀಪಿಸುತ್ತಿದೆ ನೀವು ಮುಕ್ತಿಹೊಂದುವದಿನ ಆತನೊಂದಿಗಿದೆ ಆತ ನೀಡುವ ಬಹುಮಾನ ಆತನ ಮುಂದಿದೆ ಆತ ಗಳಿಸಿದ ವರಮಾನ. ಇದನು ತಿಳಿಯಹೇಳಿರಿ ಸಿಯೋನೆಂಬಾಕೆಗೆ ಸರ್ವೇಶ್ವರನ ಆಜ್ಞೆಯಿದು ಜಗದ ದಿಗಂತದವರೆಗೆ. 12 ‘ಪವಿತ್ರ ಪ್ರಜೆ’ ಎನಿಸಿಕೊಳ್ಳುವುದು ನಿಮ್ಮ ಜನತೆ ‘ಸರ್ವೇಶ್ವರ ಸ್ವಾಮಿಯೇ ಉದ್ಧರಿಸಿದ ಜನತೆ’. ನಿನ್ನ ಹೆಸರೋ, ‘ಪ್ರಾಪ್ತ ನಗರಿ’ ಪತಿ ವರಿಸಿ ಕೈ ಬಿಡದ ಪುರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India