Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 61 - ಕನ್ನಡ ಸತ್ಯವೇದವು C.L. Bible (BSI)


ಸಿಯೋನಿಗೆ ಜೀವೋದ್ಧಾರ

1 ನನ್ನ ಮೇಲಿದೆ ಸರ್ವೇಶ್ವರ ಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ, ಕಳುಹಿಸಿಹನು ಆತ : ದೀನದಲಿತರಿಗೆ ಶುಭಸಂದೇಶ ಬೋಧಿಸಲೆಂದೆ ಮನನೊಂದವರನು ಸಂತೈಸಿ ಗುಣಪಡಿಸಲೆಂದೆ ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೆ; ಸೆರೆಯಾಳುಗಳಿಗೆ ಬಂಧವಿಮುಕ್ತಿಯಾಗುವುದನು,

2 ಸರ್ವೇಶ್ವರ ಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ.

3 ದುಃಖಿತರೆಲ್ಲರಿಗೆ ಸಾಂತ್ವನ ಸಾರಲೆಂದೇ ಕಳುಹಿಸಿದನಾತ ನನ್ನನು. ಸಿಯೋನಿನ ಶೋಕಾರ್ತರಿಗೆ ಬರಿಬೂದಿಗೆ ಬದಲು ಶಿರೋಭೂಷಣ, ದುಃಖತಾಪದ ಬದಲು ಆನಂದ ತೈಲ, ಸೊರಗಿದ್ದ ಮನಕೆ ಮೆಚ್ಚಿಕೆಯ ಮೇಲ್ವಸ್ತ್ರ ಒದಗಿಸಲೆಂದೇ ನನ್ನನ್ನು ಕಳುಹಿಸಿದನಾತ. ನೆಟ್ಟಿಹನು ಇವರನು ಸರ್ವೇಶ್ವರ ತನ್ನ ಮಹಿಮೆಯಾಗಿ ಹೆಸರ ಪಡೆವರಿವರು ‘ನೀತಿವೃಕ್ಷ’ಗಳೆಂಬುದಾಗಿ.

4 ಮರಳಿ ಕಟ್ಟುವರಿವರು ಪಾಳುಬಿದ್ದ ಪುರಾತನ ಮನೆಗಳನು ಮತ್ತೆ ಎಬ್ಬಿಸುವರು ಬಿದ್ದ ಹಳೆಯ ಕಟ್ಟಡಗಳನು ನೂತನಗೊಳಿಸುವರು ತಲಾಂತರದ ಹಾಳುಬೀಳು ಪಟ್ಟಣಗಳನು.

5 ವಿದೇಶಿಯರು, ಮಂದೆ ಕಾವಲುಗಾರರಾಗುವರು ನಿಮಗೆ ಅನ್ಯ ಜನರು ಉಳುವವರೂ ತೋಟಗಾರರಾಗುವರೂ ನಿಮಗೆ.

6 “ಸರ್ವೇಶ್ವರನ ಯಾಜಕರು’ ಎಂಬ ಬಿರುದು ನಿಮ್ಮದಾಗುವುದು “ನಮ್ಮ ದೇವರ ಪರಿಚಾರಕರು” ಎಂಬ ಹೆಸರು ನಿಮಗೆ ಬರುವುದು. ಅನುಭವಿಸುವಿರಿ ಅನ್ಯರಾಷ್ಟ್ರಗಳ ಸಂಪತ್ತನ್ನು ಹೆಮ್ಮೆಪಡುವಿರಿ ಆ ಸಿರಿ ನಿಮ್ಮದಾಯಿತೆಂದು.

7 ಸಿಗುವುದು ನಿಮಗಾದ ಅವಮಾನಕೆ ಇಮ್ಮಡಿ ಹಿರಿತನ ಆದ ತಿರಸ್ಕಾರಕೆ ಪ್ರತಿಯಾಗಿ ಸಂತಸ ಸಿರಿತನ. ದ್ವಿಗುಣವಾಗುವುದು ನಿಮಗೆ ನಾಡಿನ ಸಂಪದ ಅನಂತಕಾಲಕ್ಕು ನಿಮಗಿರುವುದು ಆನಂದ.

8 “ಸರ್ವೇಶ್ವರ ಆದ ನಾನು ನ್ಯಾಯಪ್ರಿಯ. ಸುಲಿಗೆ ಅನ್ಯಾಯ, ನನಗೆ ಅಸಹ್ಯ. ಪ್ರಾಮಾಣಿಕವಾಗಿ ನೀಡುವೆನು ಇವರಿಗೆ ಪ್ರತಿಫಲ ಮಾಡಿಕೊಳ್ಳುವೆನು ಇವರೊಡನೆ ಅಳಿಯದ ಒಪ್ಪಂದ.

9 ಪ್ರಖ್ಯಾತವಾಗುವುದು ಇವರ ಸಂತಾನ ವಿಶ್ವದಲ್ಲೆಲ್ಲ ಹೆಸರುವಾಸಿಯಾಗುವುದು ಇವರ ಸಂತತಿ ಅನ್ಯರಾಷ್ಟ್ರಗಳಲ್ಲೆಲ್ಲ. ಲಭಿಸುವುದು ಸರ್ವೇಶ್ವರನ ಆಶೀರ್ವಾದ ಈ ಜನತೆಗೆ ಖಚಿತವಾಗುವುದಿದು ನೋಡುವವರೆಲ್ಲರಿಗೆ.”

10 ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು.

11 ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು