ಯೆಶಾಯ 60 - ಕನ್ನಡ ಸತ್ಯವೇದವು C.L. Bible (BSI)ಜೆರುಸಲೇಮಿನ ಮುಂದಿನ ವೈಭವ 1 ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು. 2 ಇಗೋ ಜಗತ್ತನು ಮುತ್ತಿದೆ ಕತ್ತಲು ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು. 3 ರಾಷ್ಟ್ರಗಳು ಬರುವುವು ನಿನ್ನ ಬೆಳಕಿಗೆ ಅರಸರು ನಿನ್ನ ಉದಯದ ಶೋಭೆಗೆ. 4 ನೀ ನೋಡು ಸುತ್ತಮುತ್ತಲು ಕಣ್ಣೆತ್ತಿ ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು. 5 ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ. 6 ತುಂಬಿರುವುವು ನಿನ್ನೊಳು ಒಂಟೆಗಳ ಗುಂಪುಗಳು ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನು. 7 ನಿನ್ನಲ್ಲಿ ಕೂಡುವುವು ಕೇದಾರಿನ ಸಕಲ ಮಂದೆಗಳು ಬಲಿಯರ್ಪಣೆಗೊದಗುವುವು ನೆಬಾಯೋತಿನ ಟಗರುಗಳು. ಏರುವುವು ನನಗೆ ಸಮರ್ಪಕವಾದ ಹೋಮವಾಗಿ ಬಲಿಪೀಠವನು. ಚಂದಗೊಳಿಸುವೆನು ನನ್ನ ಸುಂದರವಾದ ಆಲಯವನು. 8 ಹಾರಿಬರುತ್ತಿರುವ ಇವರಾರು ಮೇಘಗಳಂತೆ? ಗೂಡುಗಳಿಗೆ ತ್ವರೆಮಾಡುವ ಪಾರಿವಾಳಗಳಂತೆ? 9 ನಿರೀಕ್ಷಿಸುತ್ತಿಹರು ನನ್ನನು ದೂರದ ನಿವಾಸಿಗಳು ಮುಂದಾಗಿ ಬರುತಿಹವು ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಸರ್ವೇಶ್ವರನ ಶ್ರೀನಾಮ ನಿಧಿಯಾದ ಇಲ್ಲಿಗೆ; ನಿನ್ನ ಘನಪಡಿಸಿದ ಇಸ್ರಯೇಲಿನ ಪರಮಪಾವನನ ಸನ್ನಿಧಿಗೆ. ಹೊತ್ತು ತರುತಿಹರು ನಿನ್ನ ಮಕ್ಕಳನು ಜೊತೆಗೆ ಅವರ ಬೆಳ್ಳಿಬಂಗಾರಗಳನು. 10 ಕಟ್ಟುವರು ವಿದೇಶಿಯರು ನಿನ್ನ ಪೌಳಿಗೋಡೆಗಳನು ಅರಸರು ಕೂಡ ಸಲ್ಲಿಸುವರು ನಿನಗೆ ಸೇವೆಯನು. ಶಿಕ್ಷಿಸಿದೆ ನಿನ್ನನ್ನು ಕೋಪದಿಂದ ಆದರೆ, ಕರುಣಿಸುವೆನು ಕೃಪೆಯಿಂದ. 11 ತರುತ್ತಿಹರು ರಾಷ್ಟ್ರಗಳ ಆಸ್ತಿಯನ್ನು ನಿನ್ನಲ್ಲಿಗೆ ಬರುತಿಹರು ಅವುಗಳ ಅರಸರು ಮೆರವಣಿಗೆಯೊಂದಿಗೆ. ನಿನ್ನ ದ್ವಾರಗಳು ತೆರೆದಿರುವುವು ಹಗಲಿರುಳು ಮುಚ್ಚದೆ. 12 ನಾಶವಾಗುವುವು ನಿನ್ನ ಸೇವೆಮಾಡಲೊಲ್ಲದ ರಾಜ್ಯಗಳು, ಜನಾಂಗಗಳು; ಹೌದು, ಸಂಪೂರ್ಣವಾಗಿ ಹಾಳಾಗುವುವು ಆ ಜನಾಂಗಗಳು. 13 ಬರುವುದು ನಿನ್ನಲ್ಲಿಗೆ ಲೆಬನೋನಿನ ವೈಭವವು ಅದರ ತುರಾಯಿ, ಅಗಸೆ, ತಿಲಕ ಈ ಮರಗಳಾವುವು. ಅಲಂಕರಿಸುವುವು ನನ್ನ ಪವಿತ್ರಾಲಯವನು ಮಹಿಮೆಪಡಿಸುವೆನು ನನ್ನ ಪಾದಪೀಠದ ಮಂದಿರವನು. 14 ನಿನ್ನ ತುಳಿದವರ ಸಂತಾನ ಬರುವುದು ನಿನ್ನ ಬಳಿಗೆ ತಲೆಬಾಗಿ ನಿನ್ನ ಬೇಡವೆಂದವರು ಬೀಳುವರು ಕಾಲಿಗೆ ಸಾಷ್ಟಾಂಗವಾಗಿ. ಹೊಗಳುವರು ‘ನೀನೇ ಸರ್ವೇಶ್ವರನ ನಗರವೆಂದು, ಇಸ್ರಯೇಲಿನ ಪರಮಪಾವನ ಸಿಯೋನ್’ ಎಂದು. 15 ಪರಿತ್ಯಕ್ತಳೂ ದ್ವೇಷಿತಳೂ ಆದ ನಿರ್ಜನ ನಗರಿಯೇ, ನಿತ್ಯಘನತೆಯನು, ಶಾಶ್ವತ ಸಂತೋಷವನು ನೀಡುವೆ ನಿನಗೆ. 16 ಮೊಲೆಯೂಡಿಸುವರು ಜನಾಧಿಪತಿಗಳು ನಿನಗೆ ಮೊಲೆಗೂಸಾಗುವೆ ನೀನು ಜನಾಂಗಗಳಿಗೆ. ಆಗ ತಿಳಿಯುವೆ ನಿನ್ನನುದ್ಧರಿಸಿದ ಸರ್ವೇಶ್ವರ ನಾನೆಂದು ನಿನ್ನ ವಿಮೋಚಕನು, ಯಕೋಬ್ಯರ ಪರಾಕ್ರಮಿಯು ನಾನೆಂದು. 17 ಒದಗಿಸುವೆ ನಿನಗೆ ಮರವಿದ್ದಲ್ಲಿ ತಾಮ್ರವನು ಹಿತ್ತಾಳೆಗೆ ಬದಲಾಗಿ ಬಂಗಾರವನು ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನು ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನು ಮಾಡುವೆ ಶಾಂತಿಯನ್ನೇ ನಿನಗೆ ಅಧಿಪತಿಯನ್ನಾಗಿ ಸದ್ಧರ್ಮವನ್ನೇ ನಿನಗೆ ಅಧಿಕಾರಿಯನ್ನಾಗಿ. 18 ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು ನಿನ್ನ ದೇಶದಲಿ ನಾಶವಿನಾಶಗಳ ವಾರ್ತೆಯೇ ಕೇಳಿಬರದು ನಿನ್ನ ಪ್ರಾಂತ್ಯಗಳಲಿ. ಆಗ ಹೆಸರಿಡುವೆ ನಿನ್ನ ಪೌಳಿಗೋಡೆಗೆ ‘ದೈವಮುಕ್ತಿ’ ಎಂದು ನಿನ್ನೀ ಪುರದ್ವಾರಗಳಿಗೆ “ದೈವಸ್ತುತಿ’ ಎಂದು. 19 ನಿನಗಿನ್ನು ಬೇಕಾಗಿಲ್ಲ ಸೂರ್ಯನ ಬೆಳಕು ಹಗಲೊಳು ನಿನಗೆಂದಿಗೂ ಬೇಕಾಗಿಲ್ಲ ಚಂದ್ರನ ಬೆಳಕು ಇರುಳೊಳು. ನಿನಗೆ ನಿತ್ಯಪ್ರಕಾಶ ಸರ್ವೇಶ್ವರನೆ, ನಿನ್ನ ಬೆಳಗುವ ತೇಜಸ್ಸು ನಿನ್ನ ದೇವನೆ. 20 ನಿನ್ನ ಸೂರ್ಯನು ಇನ್ನು ತೊಲಗನು. ನಿನ್ನ ಚಂದ್ರನು ಬಿಟ್ಟು ತೊಲಗನು. ಸರ್ವೇಶ್ವರನೇ ನಿನಗೆ ನಿತ್ಯಜ್ಯೋತಿ ನಿನ್ನ ದುಃಖ ದಿನಗಳಿಗಿದೆ ಸಮಾಪ್ತಿ. 21 ಸದ್ಧರ್ಮಿಗಳಾಗಿರುವರು ನಿನ್ನ ಜನರೆಲ್ಲರು ಆಗುವರವರು ನಾಡಿಗೆ ಶಾಶ್ವತ ಬಾಧ್ಯಸ್ಥರು ನನ್ನ ಮಹಿಮೆಗಾಗಿ ನಾ ನೆಟ್ಟ ಸಸಿಗಳವರು ನನ್ನ ಕೈಗಳು ಸೃಷ್ಟಿಸಿದ ಪ್ರಜೆಗಳವರು. 22 ದೊಡ್ಡ ಕುಲವಾಗಿಸುವೆನು ಚಿಕ್ಕವನಿಂದ ಬಲಿಷ್ಠ ರಾಷ್ಟ್ರವಾಗಿಸುವೆನು ದುರ್ಬಲನಿಂದ. ಸಾಧಿಸುವೆನು ಇದನು ಕ್ಲುಪ್ತಕಾಲದೊಳು ಸರ್ವೇಶ್ವರನಾದ ನಾನು, ಶೀಘ್ರದೊಳು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India