ಯೆಶಾಯ 6 - ಕನ್ನಡ ಸತ್ಯವೇದವು C.L. Bible (BSI)ಯೆಶಾಯನಿಗೆ ದೇವಕರೆ 1 ಅರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ ಸರ್ವೇಶ್ವರಸ್ವಾಮಿಯಿಂದ ದರ್ಶನವಾಯಿತು: ಉನ್ನತೋನ್ನತ ಸಿಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲುವಸ್ತ್ರ ನೆರಿಗೆ ನೆರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು. 2 ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು. 3 ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ : “ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ ಜಗವೆಲ್ಲ ಆತನ ಪ್ರಭಾವಭರಿತ” ಎಂದು ಕೂಗಿ ಹೇಳಿದನು. 4 ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು. 5 ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ !” ಎಂದು ಕೂಗಿಕೊಂಡೆನು. 6 ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದುಕೊಂಡು ನನ್ನತ್ತ ಹಾರಿಬಂದನು. 7 ಆ ಉರಿಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿ: “ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು,” ಎಂದನು. 8 ಆಗ, “ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವರು ಯಾರು?” ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿ” ಎಂದೆನು. 9 ಅದಕ್ಕೆ, “ನೀನು ಜನರ ಬಳಿಗೆ ಹೋಗಿ ಹೀಗೆಂದು ಹೇಳು : ‘ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು. ಕಣ್ಣಾರೆ ಕಂಡರೂ ಗ್ರಹಿಸಬಾರದು.’ 10 ಅದೂ ಅಲ್ಲದೆ, ಆ ಜನರು: “ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ಗ್ರಹಿಸಿ, ನನಗೆ ಅಭಿಮುಖರಾಗಿ ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಅವರ ಹೃದಯವನ್ನು ಕೊಬ್ಬಿಸು, ಕಿವಿಗಳನ್ನು ಮಂದವಾಗಿಸು, ಕಣ್ಣುಗಳನ್ನು ಮಬ್ಬಾಗಿಸು,” ಎಂದು ನನಗೆ ಹೇಳಿದರು. 11 ಅದಕ್ಕೆ ನಾನು: “ಸ್ವಾಮಿ, ಈ ಪರಿಸ್ಥಿತಿ ಎಷ್ಟರ ತನಕ?” ಎಂದು ಕೇಳಿದೆನು. ಅದಕ್ಕೆ ಪ್ರತ್ಯುತ್ತರವಾಗಿ : 12 “ನಾನು ಜನರನ್ನು ದೂರ ತೊಲಗಿಸಿ, ನಾಡನ್ನು ನಾಶಗೊಳಿಸಿ, ನಗರಗಳನ್ನು ನಿರ್ಜನಗೊಳಿಸಿ, ಮನೆಗಳನ್ನು ಬರಿದಾಗಿಸಿ, ಧರೆಯನ್ನು ಪೂರ್ತಿಯಾಗಿ ನಾಶಗೊಳಿಸುವ ತನಕ ಪರಿಸ್ಥಿತಿ ಹೀಗಿರುವುದು. 13 “ನಾಡಿನ ಹತ್ತನೇ ಒಂದು ಭಾಗ ಉಳಿದಿದ್ದರೂ ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ” ಎಂದರು. ಹೀಗೆ ಉಳಿದ ಬುಡವು ಮುಂದೆ ದೇವಜನರಾಗಿ ಚಿಗುರುವುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India