ಯೆಶಾಯ 59 - ಕನ್ನಡ ಸತ್ಯವೇದವು C.L. Bible (BSI)ರಕ್ಷಣೆಗೆ ಪಾಪದ ಅಡಚಣೆ 1 ನಾನು ಹೇಳುವುದನ್ನು ಕೇಳಿ : ಸರ್ವೇಶ್ವರ ಸ್ವಾಮಿಯ ಕೈ ನಿಮ್ಮನ್ನು ರಕ್ಷಿಸಲಾಗದಂಥ ಮೋಟುಗೈಯಲ್ಲ, ಅವರ ಕಿವಿ ಕಿವುಡಲ್ಲ. 2 ಬದಲಿಗೆ, ನಿಮ್ಮ ಅಪರಾಧಗಳೇ ನಿಮ್ಮನ್ನು ಜೀವದಿಂದ ಬೇರ್ಪಡಿಸುತ್ತಾ ಬಂದಿವೆ. ಅವರು ನಿಮಗೆ ಕಿವಿಗೊಡದಂತೆ ನಿಮ್ಮ ಪಾಪಗಳೇ ಅವರನ್ನು ವಿಮುಖರನ್ನಾಗಿ ಮಾಡಿವೆ. 3 ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾದುವು, ನಿಮ್ಮ ಬೆರಳುಗಳು ಅಕ್ರಮದಿಂದ ಮಲಿನವಾಗಿವೆ, ನಿಮ್ಮ ತುಟಿಗಳು ಸುಳ್ಳು ನುಡಿಯುತ್ತವೆ. ನಿಮ್ಮ ನಾಲಿಗೆ ಕೆಡುಕನ್ನು ಗೊಣಗುತ್ತದೆ. 4 ನ್ಯಾಯಸ್ಥಾನದಲ್ಲಿ ನ್ಯಾಯಾನುಸಾರ ವಾದಿಸುವವನು ಯಾರೂ ಇಲ್ಲ; ಸತ್ಯಾನುಸಾರ ತೀರ್ಪುಕೊಡುವವನು ಯಾರೂ ಇಲ್ಲ; ನೀವು ಶೂನ್ಯವಾದುದ್ದನ್ನೇ ನಂಬುತ್ತೀರಿ, ಅಬದ್ಧವಾದುದನ್ನೇ ಆಡುತ್ತೀರಿ, ಕೇಡನ್ನು ಬಸಿರಿಸಿ ಅಕ್ರಮವನ್ನು ಹೆರುತ್ತೀರಿ. 5 ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತೀರಿ, ಜೇಡರ ಹುಳುವಿನಂತೆ ಬಲೆಯನ್ನು ನೇಯುತ್ತೀರಿ. ಆ ಮೊಟ್ಟೆಗಳನ್ನು ತಿನ್ನುವವನು ಸಾಯುತ್ತಾನೆ, ಅವನ್ನು ಹೊಡೆದುಬಿಡುವವನು ವಿಷದ ಮರಿಗಳು ಹೊರಬರುವಂತೆ ಮಾಡುತ್ತಾನೆ. 6 ನಿಮ್ಮ ಆ ಬಲೆಯು ನೂಲು ಬಟ್ಟೆಯಾಗದು. ನೀವು ನೇಯ್ದದ್ದು ಹೊದಿಕೆಯಾಗದು. ನಿಮ್ಮ ಕಾರ್ಯಗಳು ಅಕ್ರಮವಾದುವು. ನಿಮ್ಮ ಕೈಕೆಲಸಗಳು ಹಿಂಸಾತ್ಮಕವಾದುವು. 7 ನಿಮ್ಮ ಕಾಲುಗಳು ಓಡುವುದು ಕೇಡಿಗಾಗಿ, ನೀವು ತವಕಪಡುವುದು ನಿರಪರಾಧಿಯ ರಕ್ತಪಾತಕ್ಕಾಗಿ. ನಿಮ್ಮ ಈ ಆಲೋಚನೆಗಳು ದುಷ್ಟವಾದುವು, ನೀವು ಹಿಡಿದ ಹಾದಿಗಳು ತರುವುದು ನಾಶವಿನಾಶವನ್ನೇ. 8 ಶಾಂತಿಸಮಾಧಾನದ ಮಾರ್ಗವನ್ನು ನೀವು ಅರಿಯಿರಿ. ನಿಮ್ಮ ನಡತೆಯಲ್ಲಿ ನ್ಯಾಯನೀತಿ ಎಂಬುದು ಇಲ್ಲ. ನಿಮ್ಮ ಮಾರ್ಗ ಅಂಕುಡೊಂಕಾಗಿದೆ, ಅವುಗಳಲ್ಲಿ ನಡೆಯುವವನು ಶಾಂತಿಸಮಾಧಾನವನ್ನು ಮುಟ್ಟನು. ಪಾಪಗಳಿಗಾಗಿ ಪಶ್ಚಾತ್ತಾಪ 9 ಆಗ ಜನರು ಹೀಗೆನ್ನುತ್ತಾರೆ : ಈ ಕಾರಣದಿಂದಲೇ ನ್ಯಾಯನಿರ್ಣಯವು ನಮ್ಮಿಂದ ದೂರವಾಗಿದೆ, ಸದ್ಧರ್ಮವು ನಮಗೆ ದೊರಕದೆ ಇದೆ. ಬೆಳಕಿಗಾಗಿ ಕಾದಿರುವ ನಮ್ಮನ್ನು ಕತ್ತಲು ಆವರಿಸಿದೆ. ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಮ್ಮನ್ನು ಅಂಧಕಾರವೇ ಬೆನ್ನಟ್ಟುತ್ತಿದೆ. 10 ಗೋಡೆಯನ್ನು ತಡವರಿಸುತ್ತೇವೆ ಕುರುಡರಂತೆ, ಹೌದು, ತಡಕಾಡುತ್ತೇವೆ ಕಣ್ಣಿಲ್ಲದವರಂತೆ. ನಡುಹಗಲಲ್ಲೇ ಎಡವುತ್ತೇವೆ ಇಳಿಹೊತ್ತಿನಲ್ಲೋ ಎಂಬಂತೆ. ಸಜೀವದಿಂದಿರುವವರ ನಡುವೆ ಇದ್ದೇವೆ ಸತ್ತವರಂತೆ. 11 ಗುರುಗುಟ್ಟುತ್ತೇವೆ ಕರಡಿಗಳಂತೆ, ಮುಲುಗುತ್ತೇವೆ ಪಾರಿವಾಳಗಳಂತೆ. ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಗದಿದೆ; ಜೀವೋದ್ಧಾರವನ್ನು, ನಿರೀಕ್ಷಿಸಿದರೂ ಅದು ನಮ್ಮಿಂದ ದೂರವಿದೆ. 12 “ಸರ್ವೇಶ್ವರಾ, ನಿಮಗೆ ವಿರುದ್ಧ ನಾವು ಗೈದ ಅಪರಾಧಗಳು ಹಲವು. ನಮ್ಮ ಪಾಪಗಳೇ ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ. ನಮ್ಮ ಅಪರಾಧಗಳು ನಮ್ಮೊಡನೆಯೇ ಇವೆ. ನಮ್ಮ ದ್ರೋಹಗಳನ್ನು ನಾವು ಬಲ್ಲೆವು. 13 ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು. 14 ನ್ಯಾಯವನ್ನು ಓಡಿಸಿಬಿಟ್ಟಿದ್ದೇವೆ; ನೀತಿ ಸಮೀಪಿಸದಂತೆ ಮಾಡಿದ್ದೇವೆ. ಸತ್ಯವು ಸಾರ್ವಜನಿಕ ಚೌಕದಲ್ಲಿ ಬಿದ್ದುಹೋಗಿದೆ; ಸದಾಚಾರವು ಪ್ರವೇಶಿಸಲಾಗದಿದೆ. 15 ಸತ್ಯವು ಅದೃಶ್ಯವಾಗಿದೆ. ಕೇಡನ್ನು ಕೈಬಿಟ್ಟವನೇ ಖೂನಿಗೆ ಗುರಿಯಾಗುತ್ತಾನೆ.” ಬರಲಿದೆ ರಕ್ಷಣೆ 16 ಸರ್ವೇಶ್ವರ ಸ್ವಾಮಿ ಇದನ್ನು ನೋಡಿದ್ದಾರೆ. ನ್ಯಾಯವೇ ಇಲ್ಲದ್ದನ್ನು ಕಂಡು ಖಿನ್ನರಾಗಿದ್ದಾರೆ. ಮುಂದೆ ಬಂದು ಉದ್ಧಾರಮಾಡಬಲ್ಲ ವ್ಯಕ್ತಿ ಯಾರೂ ಇಲ್ಲದಿರುವುದನ್ನು ಅರಿತು ಸ್ತಬ್ಧರಾಗಿದ್ದಾರೆ. ಎಂತಲೇ, ಅವರು ಸ್ವಂತ ಶಕ್ತಿಯನ್ನು ಪ್ರಯೋಗಿಸಿ ಜಯಪ್ರದರಾಗುವರು. ನ್ಯಾಯನೀತಿಯೇ ಅವರಿಗೆ ಆಧಾರ. 17 ಅವರು ನ್ಯಾಯನೀತಿಯನ್ನು ವಜ್ರಕವಚವನ್ನಾಗಿ ತೊಟ್ಟುಕೊಳ್ಳುವರು. ರಕ್ಷಣೆ ಎಂಬ ಶಿರಸ್ತ್ರಾಣವನ್ನು ಧರಿಸಕೊಳ್ಳುವರು. ಪ್ರತೀಕಾರವೆಂಬ ಉಡುಪನ್ನು ಉಟ್ಟುಕೊಳ್ಳುವರು. ಆಗ್ರಹ ಎಂಬ ನಿಲುವಂಗಿಯನ್ನು ಹಾಕಿಕೊಳ್ಳುವರು. 18 ಅವರವರ ಕೃತ್ಯಗಳಿಗೆ ತಕ್ಕಂತೆ ದೂರದ ನಾಡುಗಳವರೆಗೂ ಮುಯ್ಯಿ ತೀರಿಸುವರು. ವಿರೋಧಿಗಳಿಗೆ ಪ್ರತೀಕಾರ ಎಸಗುವರು; ಶತ್ರುಗಳಿಗೆ ಸೇಡನ್ನು ತೀರಿಸುವರು. 19 ಪೂರ್ವದಿಂದ ಪಶ್ಚಿಮದವರೆಗೆ ಎಲ್ಲರೂ ಸರ್ವೇಶ್ವರ ಸ್ವಾಮಿಯ ನಾಮಕ್ಕೆ ಹೆದರುವರು. ಅವರ ಘನತೆಗೆ ಅಂಜುವರು. ರಭಸದಿಂದ ನುಗ್ಗುವ ಪ್ರವಾಹದಂತೆಯೂ ವೇಗವಾಗಿ ಬೀಸುವ ಗಾಳಿಯಂತೆಯೂ ಸರ್ವೇಶ್ವರ ಸ್ವಾಮಿ ಬಂದೇ ಬರುವರು. 20 ಸರ್ವೇಶ್ವರ ಸ್ವಾಮಿ ಜನರಿಗೆ ಹೀಗೆನ್ನುತ್ತಾರೆ : “ಸಿಯೋನಿಗೆ ಹಾಗೂ ಪಾಪವನ್ನು ತೊರೆದುಬಿಟ್ಟ ಯಕೋಬ್ಯರ ಬಳಿಗೆ ನಾನು ಉದ್ಧಾರಕನಾಗಿ ಬರುವೆನು. 21 ಅವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ: ನಿಮ್ಮ ಮೇಲೆ ನೆಲೆಸಿರುವ ನನ್ನ ಆತ್ಮವೂ ಮತ್ತು ನಿಮ್ಮ ಬಾಯಲ್ಲಿ ನಾನಿಟ್ಟಿರುವ ವಾಕ್ಯಗಳೂ ನಿಮ್ಮ ಬಾಯಿಂದಾಗಲಿ, ನಿಮ್ಮ ಸಂತತಿಯ ಬಾಯಿಂದಾಗಲಿ, ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ, ಇಂದಿನಿಂದ ಎಂದಿಗೂ ತೊಲಗುವುದಿಲ್ಲ.” ಇದು ಸರ್ವೇಶ್ವರ ಸ್ವಾಮಿಯ ನುಡಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India