Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 58 - ಕನ್ನಡ ಸತ್ಯವೇದವು C.L. Bible (BSI)


ಉತ್ತಮವಾದ ಉಪವಾಸ

1 ಸರ್ವೇಶ್ವರ ಸ್ವಾಮಿ ಇಂತೆನ್ನುತ್ತಾರೆ : “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು;

2 ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೋ ಎಂಬಂತೆ, ಇವರು ದಿನದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.”

3 “ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ.

4 “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ : ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ.

5 ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣೀತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ?

6 “ನಾನು ಹೇಳುವುದನ್ನು ಕೇಳಿ : ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು,

7 ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ?

8 “ಇದನ್ನು ಆಚರಿಸುವಾಗ ನೀವು ಉದಯಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರ ಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು.

9 ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ

10 ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು.

11 ಸರ್ವೇಶ್ವರ ಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ.

12 ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ’ ಎಂಬ ಬಿರುದು ನಿಮಗೆ ಬರುವುದು.”


ಸಬ್ಬತ್‍ದಿನದ ಸದಾಚರಣೆ

13 “ನೀವು ಸಬ್ಬತ್‍ದಿನವನ್ನು ತಾತ್ಸಾರಮಾಡದೆ, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರ ಸ್ವಾಮಿಯ ಸಬ್ಬತ್‍ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೇ ಆದರೆ

14 ನೀವು ಸರ್ವೇಶ್ವರ ಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಾತಂಕವಾಗಿ ಅನುಭವಿಸುವಂತೆ ಮಾಡುವೆನು.” ಇದು ಸರ್ವೇಶ್ವರ ಸ್ವಾಮಿಯ ನುಡಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು