Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 54 - ಕನ್ನಡ ಸತ್ಯವೇದವು C.L. Bible (BSI)


ಇಸ್ರಯೇಲಿನ ಮೇಲೆ ಸರ್ವೇಶ್ವರನಿಗಿರುವ ಅಚಲ ಪ್ರೀತಿ

1 ಆನಂದ ಗೀತೆಯನು ಹಾಡು ಹೆರದವಳೇ, ಬಂಜೆಯಾಗಿದ್ದವಳೇ; ಉಲ್ಲಾಸದಿಂದ ಅರಚು, ಬೇನೆಯನು ಅನುಭವಿಸದವಳೇ. ‘ಗಂಡನುಳ್ಳವಳಿಗಿಂತ ಹೆಚ್ಚು ಮಕ್ಕಳನ್ನು ಹೆರುವೆ’ ಎಂದು ಹೇಳುತ್ತಾರೆ ಸರ್ವೇಶ್ವರ ಸ್ವಾಮಿ ನಿನಗೆ.

2 ವಿಸ್ತರಿಸು ನಿನ್ನ ಗುಡಾರವನು, ಚಾಚು ಮುಂದಕೆ ಗುಡಾರದ ಬಟ್ಟೆಗಳನು, ಹೆದರಬೇಡ; ಉದ್ದಮಾಡು ಹಗ್ಗಗಳನು, ಬಲಪಡಿಸು ಗೂಟಗಳನು.

3 ಏಕೆಂದರೆ ಹಬ್ಬಿಕೊಳ್ಳುವೆ ನೀನು ಎಡಬಲದೊಳು ಎಲ್ಲೆಲ್ಲು, ವಶಮಾಡಿಕೊಳ್ಳುವರು ನಿನ್ನ ಸಂತಾನದವರು ಜನಾಂಗಗಳನು. ಜನಭರಿತವಾಗುವಂತೆ ಮಾಡುವರು ಪಾಳುಬಿದ್ದ ಪಟ್ಟಣಗಳನು.

4 ಅಂಜಬೇಡ, ನಿನಗಾಗುವುದಿಲ್ಲ ಅವಮಾನ ನಾಚಬೇಡ, ನಿನಗಾಗದು ಆಶಾಭಂಗ. ಮರೆವೆ ಯೌವನದಲ್ಲಿ ನಿನಗಾದ ಅವಮಾನವನು ವೈಧವ್ಯದಲ್ಲಾದ ನಿಂದೆ ನೆನಪಿಗೆ ಬಾರದಿನ್ನು.

5 ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ.

6 ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು :

7 “ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ.

8 ತಟ್ಟನೆ ಉಕ್ಕಿ ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ.

9 “ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇ‍ನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು.

10 ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.”


ಜೆರುಸಲೇಮಿನ ಭವ್ಯ ಭವಿಷ್ಯ

11 “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ ಗುರಿಯಾದವಳೇ, ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ ಅಸ್ತಿವಾರ ಹಾಕುವೆ ನಿನಗೆ ನೀಲಮಣಿಗಳಿಂದ.

12 ನಿರ್ಮಿಸುವೆ ನಿನ್ನ ಗೋಪುರಗಳನು ಮಾಣಿಕ್ಯಗಳಿಂದ ನಿನ್ನ ಪೌಳಿಗೋಡೆಯನು ಅನರ್ಘ್ಯ ರತ್ನಗಳಿಂದ.

13 ನಿನ್ನ ಮಕ್ಕಳು ಶಿಕ್ಷಿತರಾಗುವರು ನನ್ನಿಂದ ಸಮೃದ್ಧವಾಗಿ ಬಾಳುವರು ಅವರು ಸುಖಶಾಂತಿಯಿಂದ.

14 ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ನೀ ದೂರ, ಅವು ಬಾರವು ನಿನ್ನ ಹತ್ತಿರ.

15 ನಿನ್ನ ಮೇಲೆ ಆಕ್ರಮಣಕೆ ಬರುವವನು ಪಡೆದಿಲ್ಲ ಅನುಮತಿ ನನ್ನಿಂದ ನಿನ್ನ ಮೇಲೆ ಆಕ್ರಮಣ ಮಾಡುವವನು ಪಡೆವನು ಸೋಲನು ನಿನ್ನಿಂದ.

16 ಕೆಂಡ ಊದಿ ಕುಲುಮೆಯಲ್ಲಿ ಆಯುಧಮಾಡುವ ಕಮ್ಮಾರನನು ನಾನೇ ಸೃಷ್ಟಿಸಿದಾತ. ವಿನಾಶಮಾಡಲು ಬರುವ ಕೆಡುಕರನು ನಾನೇ ಉಂಟುಮಾಡಿದಾತ.

17 ಸಫಲವಾಗದು ನಿನ್ನ ವಿರುದ್ಧ ಪ್ರಯೋಗಿಸಿದ ಆಯುಧ ನ್ಯಾಯಸ್ಥಾನದಲ್ಲಿ ನಿನ್ನ ಪ್ರತಿವಾದಿ ಪಡೆವನು ಅಪಜಯ ನನ್ನ ದಾಸನನು ರಕ್ಷಿಸಿ ಆತನಿಗೆ ನೀಡುವೆ ವಿಜಯ” ಇದು ಸರ್ವೇಶ್ವರನ ವಾಕ್ಯ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು