Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 53 - ಕನ್ನಡ ಸತ್ಯವೇದವು C.L. Bible (BSI)

1 ನಂಬುವರಾರು ನಾವು ಕೇಳಿದ ಸಂಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು?

2 ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ.

3 ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು.

4 ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು ನಾವು ಭಾವಿಸಿದ್ದಾದರು ಏನು? ಆತ ದೇವರಿಂದ ಬಾಧಿತನೆಂದು ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು!

5 ಗಾಯಗೊಂಡನಾತ ನಮ್ಮ ಪಾಪಗಳ ನಿಮಿತ್ತ ಜಜ್ಜರಿತನಾದ ನಮ್ಮ ದ್ರೋಹಗಳ ದೆಸೆಯಿಂದ. ಶಿಕ್ಷೆಗೊಳಗಾದ ನಮ್ಮ ರಕ್ಷೆಗಾಗಿ ಪೆಟ್ಟುತಿಂದ ನಮ್ಮ ಸ್ವಸ್ಥತೆಗಾಗಿ.

6 ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ.

7 ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ.

8 ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು ಜೀವಲೋಕದಿಂದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ.

9 ಮಾಡಲಿಲ್ಲ ಆತ ಯಾವ ಪಾಪಕೃತ್ಯ ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ ದುರುಳರ ಹಾಗೂ ದುಷ್ಕರ್ಮಿಗಳ ನಡುವೆ.

10 ಸರ್ವೇಶ್ವರನ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು ಪಡೆಯುವನು ಚಿರಜೀವವನು ತಾನೇ ನೆರವೇರಿಸುವೆನು ಸರ್ವೇಶ್ವರನ ಸಂಕಲ್ಪವನು.

11 ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹುಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು.

12 ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು