Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 52 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿನ ಬಿಡುಗಡೆ

1 ಎಚ್ಚರಗೊಳ್ಳು, ಎಚ್ಚರಗೊಳ್ಳು ಓ ಸಿಯೋನೇ, ಶಕ್ತಿಶಾಲಿಯಾಗು ಪವಿತ್ರನಗರ ಜೆರುಸಲೇಮೆ. ಧರಿಸಿಕೊ ನಿನ್ನ ಚಂದದ ಉಡುಪನು ನಿನ್ನೊಳಗೆ ಪ್ರವೇಶಿಸರು ಇನ್ನು ಅಪವಿತ್ರರು, ಅನ್ಯಧರ್ಮೀಯರು.

2 ಖೈದಿಯಾಗಿ ಬಿದ್ದಿರುವ ಸಿಯೋನ್ ಕನ್ಯೆಯೆ, ಕಿತ್ತುಬಿಡು ಬಂಧನವನು ನಿನ್ನ ಕುತ್ತಿಗೆಯಿಂದ ಸಿಂಹಾಸನಾರೂಢಳಾಗು ಜೆರುಸಲೇಮೆ ಝಾಡಿಸಿ ಎದ್ದುನಿಂತು ದುಂಬುಧೂಳಿನಿಂದ!

3 ಏಕೆಂದರೆ ಸರ್ವೇಶ್ವರ ಹೀಗೆಂದು ಹೇಳಿದ್ದಾರೆ - ‘ಬೆಲೆಯಿಲ್ಲದೆ ಮಾರಲ್ಪಟ್ಟಿರಿ; ಹಣವಿಲ್ಲದೆ ಮುಕ್ತರಾಗುವಿರಿ.’

4 ದೇವರಾದ ಸರ್ವೇಶ್ವರ ಹೇಳಿಕೊಳ್ಳುವುದೇನೆಂದರೆ : “ಹಿಂದೆ ನನ್ನ ಜನರು ಈಜಿಪ್ಟಿನಲ್ಲೆ ಇಳಿದುಕೊಳ್ಳಲು ಹೋದರು. ಕೊನೆಗೆ ಅಸ್ಸೀರಿಯರು ಅವರನ್ನು ನಿಷ್ಕಾರಣವಾಗಿ ಹಿಂಸಿಸಿದರು.

5 ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಕರೆದೊಯ್ದಿದ್ದಾರೆ. ಇಲ್ಲಿ ನಾನು ಸುಮ್ಮನಿರುವುದಾದರೂ ಹೇಗೆ? ಆಳುತ್ತಿರುವವರು ನನ್ನ ಪ್ರಜೆಯಾದವರನ್ನು ಗೋಳಿಡಿಸುತ್ತಿದ್ದಾರೆ, ಎಡೆಬಿಡದೆ ನನ್ನ ಶ್ರೀ ನಾಮವು ದಿನವೆಲ್ಲ ದೂಷಣೆಗೆ ಗುರಿಯಾಗುತ್ತಿದೆ.

6 ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ವವನ್ನು ಒಂದು ದಿನ ಅರಿತುಕೊಳ್ಳುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ.

7 ಶುಭಕರ ಸಮಾಚಾರವನು ತರುವ ಶಾಂತಿಸಮಾಧಾನವನು ಸಾರುವ ಸಂತಸದ ಸಂದೇಶವನು ಅರುಹುವ ಜೀವೋದ್ಧಾರವನು ಪ್ರಕಟಿಸುವ ‘ನಿನ್ನ ದೇವರೇ ರಾಜ್ಯಭಾರ ವಹಿಸುವ ಎಂದು ಸಿಯೋನಿಗೆ ತಿಳಿಯಪಡಿಸುತ್ತ ಪರ್ವತಗಳಿಂದ ಇಳಿದುಬರುವ ಶಾಂತಿದೂತನ ಪಾದಪದ್ಮಗಳು ಎಷ್ಟೊಂದು ಸುಂದರ!

8 ಆಲಿಸಿ ಕೇಳು ನಿನ್ನ ಕಾವಲುಗಾರರ ಕೂಗನು : ಸರ್ವೇಶ್ವರ ಸಿಯೋನಿಗೆ ಮರಳಿಬರುತ್ತಿರುವುದನು ಕಣ್ಣಾರೆ ಕಂಡು ಕೂಡಿಹಾಡುತ್ತಿಹರು ಗೀತವನು.

9 ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ, ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು ತಂದಿರುವನು ತನ್ನ ಜನರಿಗೆ ಸಮಾಧಾನವನು.

10 ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆ ಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು.

11 ಹೊರಡಿರಿ, ನೀವು ಹೊರಡಿರಿ ಬಾಬಿಲೋನಿನಿಂದ ಅಶುದ್ಧವಾದುವನ್ನು ಮುಟ್ಟದೆ ತೆರಳಿ ಅಲ್ಲಿಂದ. ಸರ್ವೇಶ್ವರನ ಆರಾಧನಾ ಉಪಕರಣಗಳನು ಹೊರುವವರೇ, ನಿಮ್ಮನು ನೀವೆ ಪರಿಶುದ್ಧವಾಗಿಸಿರಿಕೊಂಡು ತೆರಳಿ ಹೊರಗೆ.

12 ಅವಸರವಾಗಿ ನೀವು ಹೊರಡಬೇಕಿಲ್ಲ ನೆಗೆನೆಗೆದು ನೀವು ಓಡಬೇಕಿಲ್ಲ. ಹೋಗುವನು ಸರ್ವೇಶ್ವರ ನಿಮಗೆ ಮುಂಬಲವಾಗಿ, ನಿಮಗಿರುವನು ಇಸ್ರಯೇಲ್ ದೇವರು ಹಿಂಬಲವಾಗಿ.


‘ದೇವರ ದಾಸ’ ಕುರಿತ ನಾಲ್ಕನೆಯ ಗೀತೆ

13 ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ.

14 ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ.

15 ಅಂತೆಯೇ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು