Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 51 - ಕನ್ನಡ ಸತ್ಯವೇದವು C.L. Bible (BSI)


ಸಿಯೋನಿಗೆ ಸಾಂತ್ವನ ನುಡಿ

1 “ಸದ್ಧರ್ಮಾರ್ಥಿಗಳಾದ ಸರ್ವೇಶ್ವರನ ಶರಣರೇ ಕೇಳಿ : ನೀವು ಯಾವ ಬಂಡೆಗಲ್ಲಿನಿಂದ ರೂಪುಪಡೆದಿರಿ, ಯಾವ ಕಲ್ಲುಗುಂಡಿಯಿಂದ ಅಗೆಯಲ್ಪಟ್ಟಿರಿ, ಎಂಬುದನ್ನು ಪರಿಭಾವಿಸಿ ನೋಡಿರಿ.

2 ನೆನೆಯಿರಿ ನಿಮ್ಮ ಮೂಲಪುರುಷ ಅಬ್ರಹಾಮನನು ಅವನ ಸತಿ ಸಾರಳನು. ಅಬ್ರಹಾಮನನ್ನು ನಾ ಕರೆದಾಗ ಆತನು ಒಬ್ಬಂಟಿಗನು ಆಶೀರ್ವಾದದಿ ನಾ ಬೆಳೆಸಿದೆ ಆತನ ಸಂತಾನವನು.

3 ಸರ್ವೇಶ್ವರನಾದ ನಾನು ಸಂತೈಸದೆ ಬಿಡೆನು ಸಿಯೋನನ್ನು, ಉದ್ಧರಿಸುವೆನು ಆ ಹಾಳುಬಿದ್ದ ಸ್ಥಳಗಳೆಲ್ಲವನು. ಮಾರ್ಪಡಿಸುವೆನು ಕಾಡುನೆಲವನು ಏದೆನ್ ಉದ್ಯಾನದಂತೆ ಮರುಭೂಮಿಯನು, ದೇವತೆಗಳ ಉದ್ಯಾನವಾಗುವಂತೆ ಹರ್ಷೋಲ್ಲಾಸ, ಸ್ತುತಿಸ್ತೋತ್ರ, ಮಧುರಗಾನ ಅಲ್ಲಿ ನೆಲೆಸುವಂತೆ.

4 ಆಲಿಸಿರಿ ನನ್ನ ಜನರೆ, ಕಿವಿಗೊಡಿ ನನ್ನ ಪ್ರಜೆಗಳೆ : ಧರ್ಮೋಪದೇಶ ಹೊರಡುವುದು ರಾಷ್ಟ್ರಗಳಿಗೆ ನನ್ನಿಂದಲೆ; ಬೆಳಗುವುದು ಜಗಜ್ಯೋತಿಯಾಗಿ ನನ್ನ ನ್ಯಾಯಬೋಧೆ.

5 ಹತ್ತಿರದಲ್ಲೇ ಇದೆ ನಾ ನೀಡುವ ಮುಕ್ತಿ ಸಿಗುವದು ನನ್ನಿಂದ ವಿಮೋಚನಾ ಶಕ್ತಿ ನ್ಯಾಯ ನೀಡುವೆನು ರಾಷ್ಟ್ರಗಳಿಗೆ ನನ್ನ ಭುಜಬಲದಿಂದ ನನ್ನನ್ನು ನಿರೀಕ್ಷಿಸಿಕೊಂಡಿರುವರು ಜನರು ದೂರದೇಶಗಳಿಂದ ಕಾದಿರುವರು ಆ ಭುಜಬಲ ಸಾಧನೆಗಾಗಿ ನಂಬಿಕೆಯಿಂದ.

6 ಆಕಾಶಮಂಡಲವನು ನೋಡಿ ಕಣ್ಣೆತ್ತಿ ಭೂಮಂಡಲದತ್ತ ನೋಡಿ ಕೆಳಗೆ ದಿಟ್ಟಿಸಿ. ಆಕಾಶ ಚದರಿಹೋಗುವುದು ಹೊಗೆಯಂತೆ ಭೂಮಿ ಹರಿದುಹೋಗುವುದು ಬಟ್ಟೆಯಂತೆ ಸಾಯುವರು ಭೂನಿವಾಸಿಗಳು ಅದರಂತೆ. ನಾ ಕೊಡುವ ವಿಮೋಚನೆಯೋ ನಿಲ್ಲುವುದು ಶಾಶ್ವತವಾಗಿ ನಾ ನೀಡುವ ಮುಕ್ತಿಯೋ ಅಳಿದುಹೋಗದು ಭಂಗವಾಗಿ.

7 “ಕಿವಿಗೊಟ್ಟು ಕೇಳಿರಿ ಸದ್ಧರ್ಮದ ಸುಜ್ಞಾನಿಗಳೇ, ನನ್ನ ಬೋಧೆಯಲ್ಲಿ ಶ್ರದ್ಧೆಯಿಡುವವರೇ, ಹೆದರಬೇಡಿ ಮನುಜರಾಡುವ ದೂರಿಗೆ ಅಂಜದಿರಿ ಅವರ ನಿಂದೆದೂಷಣೆಗೆ.

8 ನುಸಿ ಅವರನ್ನು ತಿಂದುಹಾಕುವುದು ಬಟ್ಟೆಯಂತೆ ಹುಳು ಅವರನ್ನು ಮೆದ್ದುಬಿಡುವುದು ಉಣ್ಣೆಯಂತೆ. ನಾ ನೀಡುವ ಮುಕ್ತಿಯೋ ನಿಲ್ಲುವುದು ಶಾಶ್ವತವಾಗಿ ನಾ ಕೊಡುವ ವಿಮೋಚನೆ ಸದಾ ಇರುವುದು ನೆಲೆಯಾಗಿ.”

9 ಎಚ್ಚರಗೊಳ್ಳು ಸರ್ವೇಶ್ವರನ ಭುಜವೇ, ಎಚ್ಚರಗೊಂಡು ಬಲವನು ತಂದುಕೊ ಭುಜವೇ, ಪೂರ್ವಕಾಲದೊಳು ಪುರಾತನ ಪೀಳಿಗೆಯೊಳು ಎಚ್ಚರಗೊಂಡಂತೆ ಎಚ್ಚೆತ್ತುಕೊ ಈಗಲು. ರಹಬನ್ನು ಛೇದಿಸಿಬಿಟ್ಟ ಭುಜ ನೀನಲ್ಲವೆ? ಘಟಸರ್ಪವನು ಅಪ್ಪಳಿಸಿದ ಭುಜ ನೀನಲ್ಲವೆ?

10 ಸಮುದ್ರ ಜನರಾಶಿಗಳನು ಬತ್ತಿಸಿದ ಬಾಹು ನೀನು ವಿಮುಕ್ತ ಜನ ಹಾಯುವಂತೆ ಸಮುದ್ರದಲಿ ದಾರಿಮಾಡಿದೆ ನೀನು.

11 ಹಿಂದಿರುಗುವರು ಸರ್ವೇಶ್ವರನಿಂದ ರಕ್ಷಣೆ ಪಡೆದವರು ಉತ್ಸಾಹ ಗೀತೆಯೊಂದಿಗೆ ಸಿಯೋನನ್ನು ಸೇರುವರವರು. ಧರಿಸಿಕೊಳ್ಳುವರು ಶಾಶ್ವತ ಸಂತಸವೆಂಬ ಕಿರೀಟವನು ಅನುಭವಿಸುವರು ಹರ್ಷಾನಂದಗಳನು ತೊಲಗಿ ಓಡುವುವು ದುಃಖದುಗುಡಗಳು.

12 “ನಾನೆ, ನಾನೆ ನಿನ್ನನು ಸಂತೈಸುವವನಾಗಿರೆ, ನೀ ಭಯಪಡುವುದೇಕೆ ಮರ್ತ್ಯನಾದ ಮಾನವನಿಗೆ? ನೀ ಹೆದರಿ ನಡುಗುವುದೇಕೆ ಹುಲುಮಾನವನಿಗೆ?

13 ಆಕಾಶವನು ಹರಡಿ ಭೂಮಿಯನು ಸ್ಥಾಪಿಸಿದಾ ನಿನ್ನ ಸೃಷ್ಟಿಕರ್ತ ಸರ್ವೇಶ್ವರನನು ಮರೆತುಬಿಟ್ಟೆಯಾ? ನಾಶಮಾಡಲು ಹವಣಿಸುವ ಹಿಂಸಕನ ಕ್ರೋಧಕೆ ನೀ ಎಡೆಬಿಡದೆ ದಿನವೆಲ್ಲ ಅಂಜುತ್ತಿರಬೇಕೆ? ಆ ಹಿಂಸಕನ ಕ್ರೋಧವು ಈಗ ಹೋದುದೆಲ್ಲಿಗೆ?

14 ಸೆರೆಯಲ್ಲಿ ಸೊರಗಿದವನು ಸಾಯನು; ಇಳಿಯನವನು ಪಾತಾಳಕ್ಕೆ, ಬಿಡುಗಡೆಯಾಗುವನು ಬೇಗನೆ, ಇರದವನಿಗೆ ಅನ್ನದ ಕೊರತೆ.

15 ನಿನ್ನ ದೇವರಾದ ಸರ್ವೇಶ್ವರ ನಾನೆ ಸಮುದ್ರವನು ಕಲ್ಲೋಲಗೊಳಿಸುವವನು ನಾನೆ ಅದರ ಅಲೆಗಳನು ಭೋರ್ಗರೆಸುವವನು ನಾನೆ ನನ್ನ ಹೆಸರು ಸೇನಾಧೀಶ್ವರ ಸರ್ವೇಶ್ವರ!

16 ಆಕಾಶವನ್ನ ಹರಡಿದೆ; ಭುವಿಯನ್ನು ಸ್ಥಾಪಿಸಿದೆ; ಸಿಯೋನಿಗೆ ‘ನೀನೆನ್ನ ಜನತೆ’ ಎಂದೆ ನಾನಾಡುವುದನೆ ನಿನ್ನಿಂದ ಮಾತನಾಡಿಸಿದೆ, ನಿನ್ನನು ನನ್ನ ಅಂಗೈಯಲಿ ಕೊರೆದು ಕಾದಿಟ್ಟೆ.”


ಚೇತರಿಸಿಕೊಳ್ಳಲು ಜೆರುಸಲೇಮಿಗೆ ಕರೆ

17 ಎಚ್ಚೆತ್ತುಕೊ, ಎಚ್ಚೆತ್ತುಕೊ, ನೀನೆದ್ದು ನಿಲ್ಲು ಜೆರುಸಲೇಮೆ! ಕುಡಿದುಬಿಟ್ಟಿರುವೆ ನೀ ಮತ್ತು ತರುವ ಪಾನಪಾತ್ರೆಯಿಂದ ತೊಟ್ಟನ್ನೂ ಬಿಡದೆ ಹೀರಿರುವೆ ಸರ್ವೇಶ್ವರನ ಕೋಪ ತುಂಬಿದಾ ಕೊಡದಿಂದ !

18 ಅವಳನ್ನು ಕರೆದುಕೊಂಡು ಹೋಗುವವನಾರೂ ಇಲ್ಲ, ಆಕೆ ಹೆತ್ತಾ ಮಕ್ಕಳೊಳು; ಅವಳ ಕೈಹಿಡಿದು ನಡೆಸುವವನು ಒಬ್ಬನೂ ಇಲ್ಲ, ಆಕೆ ಸಾಕಿದ ಕುವರರೊಳು.

19 ಬಂದೊದಗಿವೆ ಇಮ್ಮಡಿ ಬಾಧೆ ನಿನಗೆ ಪ್ರಲಾಪಿಸಿ ಗೋಳಿಡುವವರಾರು ನಿನ್ನೊಂದಿಗೆ? ನಾಡು ಹಾಳುಪಾಳಾಗಿದೆ, ತುತ್ತಾಗಿದೆ ಪ್ರಜೆ ಕ್ಷಾಮಕ್ಷೋಭೆಗೆ; ನಿನ್ನನು ಸಂತೈಸುವುದಾದರು ಹೇಗೆ?

20 ನಿನ್ನ ಮಕ್ಕಳು ಬಿದ್ದರು ಬೀದಿ ಚೌಕಗಳಲಿ ಬಲೆಗೆ ಬಿದ್ದ ಜಿಂಕೆಮರಿಯಂತಿಹರು ಪ್ರಜ್ಞೆತಪ್ಪಿ. ನಿನ್ನ ದೇವರನು ಮೂದಲಿಸಿಹರು ಸರ್ವೇಶ್ವರನ ರೋಷವನ್ನನುಭವಿಸಿಹರು.

21 ಇಂತಿರಲು ಶೋಷಿತಳೇ, ಕೇಳು ನನ್ನ ಮಾತನು ದ್ರಾಕ್ಷಾರಸದಿಂದಲ್ಲ ನೀ ಅಮಲೇರಿರುವುದು.

22 ಕೇಳು, ಸ್ವಾಮಿ ಸರ್ವೇಶ್ವರ ಆದ ನಾ ಹೇಳುವ ಮಾತನು : ತನ್ನ ಜನರ ಪರವಾಗಿ ವಾದಿಸುವ ನಿನ್ನ ದೇವರು ನಾನು; “ಇಗೋ, ಅಮಲೇರಿಸುವ ಪಾತ್ರೆಯನು ನನ್ನ ಕೋಪದಿಂದ ತುಂಬಿತುಳುಕುವಾ ಕೊಡವನು ನೀ ಕುಡಿಯಬಾರದೆಂದು ನಿನ್ನಿಂದ ತೆಗೆದುಬಿಡುವೆನು.

23 ಕೊಡುವೆ ಆ ಕೋಪದ ಕೊಡವನು ನಿನ್ನನು ಶೋಷಿಸಿದವರಿಗೆ ‘ನಾವು ತುಳಿದು ಹಾದುಹೋಗುವಂತೆ ನೆಲಕಚ್ಚಿ ಬೀಳು ಕೆಳಗೆ’ ಎಂದು ನಿಮ್ಮ ಬೆನ್ನನೆ ನೆಲವಾಗಿಸಿ, ಬೀದಿಕಸವನ್ನಾಗಿಸಿದವರಿಗೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು